ಬಿಮ್‍ಸ್ಟೆಕ್ ಸಂಬಂಧ ಬಲಪಡಿಸಲು 21 ಅಂಶಗಳ ಕ್ರಿಯಾ ಯೋಜನೆ: ಪ್ರಧಾನಿ ನರೇಂದ್ರ ಮೋದಿ ಪ್ರಸ್ತಾಪ

PC : PTI
ಬ್ಯಾಂಕಾಕ್: ಭಾರತದ ಯುಪಿಐ ವ್ಯವಸ್ಥೆಯನ್ನು ಬಿಮ್‍ಸ್ಟೆಕ್ ದೇಶಗಳ ಪಾವತಿ ವ್ಯವಸ್ಥೆಯೊಂದಿಗೆ ಜೋಡಿಸುವುದು, ಗುಂಪಿನ ಸದಸ್ಯರಲ್ಲಿ ಪರಸ್ಪರ ಸಂವಹವನ್ನು ಬಲಪಡಿಸಲು ಬಿಮ್‍ಸ್ಟೆಕ್ ಚೇಂಬರ್ ಆಫ್ ಕಾಮರ್ಸ್ ಸ್ಥಾಪನೆ ಸೇರಿದಂತೆ 21 ಅಂಶಗಳ ಕ್ರಿಯಾ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಪ್ರಸ್ತಾಪಿಸಿದ್ದಾರೆ.
ಥೈಲ್ಯಾಂಡ್ ರಾಜಧಾನಿಯಲ್ಲಿ ಆಯೋಜಿಸಲಾದ 6ನೇ ಬಿಮ್‍ಸ್ಟೆಕ್ ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ` ಬಿಮ್‍ಸ್ಟೆಕ್ ಜಾಗತಿಕ ಒಳಿತಿಗೆ ಪ್ರೋತ್ಸಾಹಿಸುವ ವೇದಿಕೆಯಾಗಿದೆ. ನಾವು ಅದನ್ನು ಬಲಪಡಿಸುತ್ತೇವೆ ಮತ್ತು ನಮ್ಮ ನಡುವಿನ ಸಂವಹನವನ್ನು ಇನ್ನಷ್ಟು ಆಳಗೊಳಿಸುತ್ತೇವೆ. ಈ ನಿಟ್ಟಿನಲ್ಲಿ ನಮ್ಮ ಸಹಕಾರದ ವಿಭಿನ್ನ ಅಂಶಗಳನ್ನು ಒಳಗೊಂಡ 21 ಅಂಶಗಳ ಕ್ರಿಯಾ ಯೋಜನೆಯನ್ನು ಪ್ರಸ್ತಾಪಿಸಲಾಗಿದೆ. ಈ ಕ್ರಿಯಾಯೋಜನೆಯಲ್ಲಿ ಬೋಧಿ ( ಮಾನವ ಸಂಪನ್ಮೂಲ ಮೂಲಸೌಕರ್ಯ ಉಪಕ್ರಮದ ಸಂಘಟಿತ ಅಭಿವೃದ್ಧಿಗಾಗಿ ಬಿಮ್‍ಸ್ಟೆಕ್) ಉಪ್ರಕಮವೂ ಸೇರಿದೆ. ಬೋಧಿ ಉಪಕ್ರಮದಡಿ ಬಿಮ್‍ಸ್ಟೆಕ್ ದೇಶಗಳ 300 ಯುವಜನತೆಗೆ ಪ್ರತೀ ವರ್ಷ ಭಾರತದಲ್ಲಿ ತರಬೇತಿ ನೀಡಲಾಗುವುದು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಬಿಮ್‍ಸ್ಟೆಕ್ ಸಾಮಥ್ರ್ಯ ನಿರ್ಮಾಣ ಚೌಕಟ್ಟುಗಳಿಗೆ ಅತ್ಯುತ್ತಮ ಉದಾಹರಣೆಯಾಗಿದೆ. ನಾವು ಪರಸ್ಪರ ಕಲಿಯುತ್ತೇವೆ ಮತ್ತು ಬೆಳೆಯುತ್ತೇವೆ. ಐಟಿ ವಲಯದ ಸಮೃದ್ಧ , ಶ್ರೀಮಂತ ಸಾಮಥ್ರ್ಯವನ್ನು ಬಳಸಿಕೊಂಡು ಬಿಮ್‍ಸ್ಟೆಕ್ ಅನ್ನು ತಾಂತ್ರಿಕವಾಗಿ ಬಲಪಡಿಸಬೇಕು. ಬಿಮ್‍ಸ್ಟೆಕ್ ರಾಷ್ಟ್ರಗಳಾದ್ಯಂತ ವ್ಯಾಪಾರಕ್ಕೆ ಉತ್ತೇಜನ ನೀಡಲು `ಬಿಮ್‍ಸ್ಟೆಕ್ ಚೇಂಬರ್ ಆಫ್ ಕಾಮರ್ಸ್' ಸ್ಥಾಪಿಸಿ ವಾರ್ಷಿಕ ವ್ಯಾಪಾರ ಶೃಂಗಸಭೆ ಆಯೋಜಿಸಬೇಕು ಹಾಗೂ ಈ ವಲಯದೊಳಗೆ ಸ್ಥಳೀಯ ಕರೆನ್ಸಿಗಳಲ್ಲಿ ವ್ಯಾಪಾರ ವಹಿವಾಟನ್ನು ಪ್ರೋತ್ಸಾಹಿಸಬೇಕು. ಮ್ಯಾನ್ಮಾರ್ ಮತ್ತು ಥೈಲ್ಯಾಂಡ್‍ನಲ್ಲಿ ಇತ್ತೀಚೆಗೆ ಸಂಭವಿಸಿದ ಮಾರಣಾಂತಿಕ ಭೂಕಂಪವು ವಿಪತ್ತು ನಿರ್ವಹಣೆ ಕ್ಷೇತ್ರದಲ್ಲಿ ಜತೆಗೂಡಿ ಕೆಲಸ ಮಾಡುವ ಅಗತ್ಯವನ್ನು ಒತ್ತಿಹೇಳಿದೆ ಎಂದು ಮೋದಿ ಹೇಳಿದರು. ಜೊತೆಗೆ, ವಿಪತ್ತು ನಿರ್ವಹಣೆ, ಪರಿಹಾರ ಕಾರ್ಯದಲ್ಲಿ ಸಹಕಾರಕ್ಕೆ ಭಾರತದಲ್ಲಿ ಬಿಮ್‍ಸ್ಟೆಕ್ ಸೆಂಟರ್ ಆಫ್ ಎಕ್ಸಲೆನ್ಸ್ ಫಾರ್ ಡಿಸಾಸ್ಟರ್ ಮ್ಯಾನೇಜ್‍ಮೆಂಟ್ ಸ್ಥಾಪನೆಯ ಬಗ್ಗೆ ಪ್ರಸ್ತಾಪಿಸಿದರು.
ಬಿಮ್‍ಸ್ಟೆಕ್ ದಕ್ಷಿಣ ಏಶ್ಯಾ ಮತ್ತು ಆಗ್ನೇಯ ಏಶ್ಯಾವನ್ನು ಸಂಪರ್ಕಿಸುವ ಸೇತುವೆಯಾಗಿ ಕಾರ್ಯ ನಿರ್ವಹಿಸುತ್ತದೆ. ಪ್ರಾದೇಶಿಕ ಸಂಪರ್ಕ, ಸಹಕಾರ ಮತ್ತು ಸಮೃದ್ಧಿಯ ಹೊಸ ಮಾರ್ಗಗಳನ್ನು ತೆರೆಯಲು ಇದು ಪರಿಣಾಮಕಾರಿ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಮೋದಿ ಹೇಳಿದ್ದಾರೆ.
ಬಿಮ್‍ಸ್ಟೆಕ್ ಶೃಂಗಸಭೆಯಲ್ಲಿ ಆತಿಥೇಯ ಥೈಲ್ಯಾಂಡ್, ಭಾರತ, ಬಾಂಗ್ಲಾದೇಶ, ನೇಪಾಳ, ಮ್ಯಾನ್ಮಾರ್, ಶ್ರೀಲಂಕಾ ಮತ್ತು ಭೂತಾನ್ ದೇಶದ ನಾಯಕರು ಪಾಲ್ಗೊಂಡಿದ್ದಾರೆ.