ಚೀನಾ: ಪುತ್ರರಿಗೆ ಧಾರ್ಮಿಕ ಬೋಧನೆ ಮಾಡಿದ ಉಯಿಗರ್ ಮಹಿಳೆಗೆ 17 ವರ್ಷ ಜೈಲು ಶಿಕ್ಷೆ
ಬೀಜಿಂಗ್ : ತನ್ನ ಪುತ್ರರು ಹಾಗೂ ನೆರೆಯವರಿಗೆ ಧಾರ್ಮಿಕ ಪದ್ಯಗಳನ್ನು ಕಲಿಸುವ ಮೂಲಕ `ಕಾನೂನು ಬಾಹಿರ ಭೂಗತ ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ' 49 ವರ್ಷದ ಉಯಿಗರ್ ಮಹಿಳೆ ಸೆಲಿಹಾನ್ ರೋಜಿಗೆ 17 ವರ್ಷ ಜೈಲುಶಿಕ್ಷೆ ವಿಧಿಸಿರುವುದಾಗಿ `ರೇಡಿಯೊ ಫ್ರೀ ಏಶ್ಯಾ' ವರದಿ ಮಾಡಿದೆ.
ಕೊನಶೆಹೆರ್ ಕೌಂಟಿಯ ಸಯ್ಬಾಗ್ ಗ್ರಾಮದ ನಿವಾಸಿ ಧಾರ್ಮಿಕ ಬೋಧನೆ ನಡೆಸಿದ್ದಕ್ಕಾಗಿ ಶಿಕ್ಷೆಗೆ ಗುರಿಯಾಗಿದ್ದಾರೆ. ಧಾರ್ಮಿಕ ಶಿಕ್ಷಣಕ್ಕೆ ಸಂಬಂಧಿಸಿದ ಚೀನಾದ ಕಠಿಣ ನಿಯಮದಡಿ ಇಂತಹ ಚಟುವಟಿಕೆಗಳನ್ನು ಕಾನೂನು ಬಾಹಿರ ಎಂದು ವರ್ಗೀಕರಿಸಲಾಗಿದೆ. ಕಾನೂನು ಬಾಹಿರ ಧಾರ್ಮಿಕ ಬೋಧನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅಪರಾಧಕ್ಕಾಗಿ ಮಹಿಳೆಯ ಒಬ್ಬ ಪುತ್ರನಿಗೆ 10 ವರ್ಷ ಹಾಗೂ ಮತ್ತೊಬ್ಬನಿಗೆ 7 ವರ್ಷ ಜೈಲುಶಿಕ್ಷೆ ವಿಧಿಸಲಾಗಿದೆ. ನೆರೆಮನೆಯ ನಿವಾಸಿ ಯಾಕುಪ್ ಹಿದಾಯತ್‍ಗೆ 9 ವರ್ಷ ಜೈಲುಶಿಕ್ಷೆ ವಿಧಿಸಿರುವುದಾಗಿ ಅಧಿಕಾರಿಗಳನ್ನು ಉಲ್ಲೇಖಿಸಿದ ವರದಿ ಹೇಳಿದೆ.
ಚೀನಾ ಸರಕಾರದ ಕ್ರಮಗಳಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗಿದ್ದು ಮಾನವ ಹಕ್ಕುಗಳ ಪ್ರತಿಪಾದಕರು ಉಯಿಗರ್ ಸಂಸ್ಕೃತಿ ಮತ್ತು ಧರ್ಮದ ದಮನವನ್ನು ಕೊನೆಗೊಳಿಸಬೇಕೆಂದು ಆಗ್ರಹಿಸಿದ್ದಾರೆ. ಚೀನಾ ಸರಕಾರದ ನೀತಿಗಳು ಉಗ್ರವಾದ, ಪ್ರತ್ಯೇಕತಾವಾದ ಮತ್ತು ಭಯೋತ್ಪಾದನೆಯನ್ನು ಎದುರಿಸುವ ನಿಜವಾದ ಪ್ರಯತ್ನಕ್ಕಿಂತ ಹೆಚ್ಚಾಗಿ ಉಯಿಗರ್ ಸಮುದಾಯದ ಮೂಲಭೂತ ಧಾರ್ಮಿಕ ಹಕ್ಕುಗಳ ಮೇಲಿನ ದಾಳಿಯನ್ನು ಪ್ರತಿನಿಧಿಸುತ್ತವೆ ಎಂದು ವ್ಯಾಪಕವಾಗಿ ಖಂಡನೆ ವ್ಯಕ್ತವಾಗಿದೆ.