ಮಗನಿಗೆ ಸ್ಮಾರ್ಟ್‌ ಫೋನ್ ಕೊಡಿಸಲಾಗದ ನೋವು: ಮಗ ಆತ್ಮಹತ್ಯೆ ಮಾಡಿಕೊಂಡ ಹಗ್ಗದಿಂದಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ತಂದೆ

Update: 2025-01-11 13:45 GMT

ಸಾಂದರ್ಭಿಕ ಚಿತ್ರ 

ಮುಂಬೈ : ಮಹಾರಾಷ್ಟ್ರದ ನಾಂದೇಡ್ ನ ಛತ್ರಪತಿ ಸಂಭಾಜಿನಗರದಲ್ಲಿ 10ನೇ ತರಗತಿಯ ವಿದ್ಯಾರ್ಥಿಯೋರ್ವ ತಂದೆ ಮೊಬೈಲ್ ಕೊಡಿಸಿಲ್ಲ ಎಂದು ಆತ್ಮಹತ್ಯೆಯನ್ನು ಮಾಡಿಕೊಂಡಿದ್ದು, ಪುತ್ರ ಸಾವಿನಿಂದ ಮನನೊಂದು ತಂದೆಯೂ ಅದೇ ಹಗ್ಗದಿಂದ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಓಂಕಾರ್ ಆತ್ಮಹತ್ಯೆ ಮಾಡಿಕೊಂಡ ಬಾಲಕ. 10ನೇ ತರಗತಿಯಲ್ಲಿ ಓದುತ್ತಿದ್ದ ಓಂಕಾರ್ ಸ್ಮಾರ್ಟ್‌ ಫೋನ್ ಕೊಡಿಸುವಂತೆ ತಂದೆಯಲ್ಲಿ ಕೇಳಿದ್ದಾನೆ. ಆದರೆ, ತಂದೆ ಹಣಕಾಸಿನ ಸಮಸ್ಯೆಯಿಂದ ಸ್ಮಾರ್ಟ್‌ ಫೋನ್ ಕೊಡಿಸಿರಲಿಲ್ಲ. ಗುರುವಾರ ಬೆಳಿಗ್ಗೆ ಬಿಲೋಲಿ ತಾಲ್ಲೂಕಿನ ಮಿನಕಿ ಎಂಬಲ್ಲಿ ಜಮೀನಿನಲ್ಲಿ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಪುತ್ರನನ್ನು ನೋಡಿದ ಆತನ ತಂದೆಯೂ ಅದೇ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಓಂಕಾರ್ ಲಾತೂರ್ ಜಿಲ್ಲೆಯ ಉದ್ಗೀರ್ನಲ್ಲಿರುವ ಹಾಸ್ಟೆಲ್‌ ನಲ್ಲಿ ಓದುತ್ತಿದ್ದ. ಮಕರ ಸಂಕ್ರಾಂತಿ ಆಚರಿಸಲು ಮನೆಗೆ ಬಂದ ಓಂಕಾರ್ ತಂದೆಯಲ್ಲಿ ಸ್ಮಾರ್ಟ್‌ ಫೋನ್ ಕೊಡಿಸುವಂತೆ ಕೇಳಿದ್ದಾನೆ. ಆದರೆ, ಹಣಕಾಸಿನ ತೊಂದರೆಯಿಂದಾಗಿ ತಂದೆಗೆ ಸಾಧ್ಯವಾಗಿಲ್ಲ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.

ನಾವು ಬಾಲಕನ ತಾಯಿಯ ಹೇಳಿಕೆಯ ಆಧಾರದ ಮೇಲೆ ಆಕಸ್ಮಿಕ ಸಾವಿನ ಪ್ರಕರಣವನ್ನು ದಾಖಲಿಸಿದ್ದೇವೆ. ನಾವು ಘಟನೆಗೆ ಕಾರಣವಾದ ಸಂದರ್ಭಗಳನ್ನು ಪರಿಶೀಲಿಸುತ್ತಿದ್ದೇವೆ ಎಂದು ನಾಂದೇಡ್ ಪೊಲೀಸ್ ವರಿಷ್ಠಾಧಿಕಾರಿ ಅಬಿನಾಶ್ ಕುಮಾರ್ ಹೇಳಿದ್ದಾರೆ.

ʼಮೊಬೈಲ್ ಕೊಡಿಸುವಂತೆ ಮಗ ಪತಿಯಲ್ಲಿ ಕೇಳಿಕೊಳ್ಳುತ್ತಿದ್ದಲೇ ಇದ್ದ, ಬುಧವಾರ ಕೂಡ ಸಂಜೆ ವೇಳೆ ಪತಿಯಲ್ಲಿ ಓಂಕಾರ್ ಮೊಬೈಲ್ ಕೊಡಿಸುವಂತೆ ಕೇಳಿಕೊಂಡಿದ್ದಾನೆ. ಆದರೆ, ಕೃಷಿ ಸಾಲ ಮತ್ತು ವಾಹನದ ಮೇಲಿನ ಸಾಲ ಮರುಪಾವತಿ ಮಾಡಬೇಕಿದ್ದರಿಂದ ಮೊಬೈಲ್ ಕೊಡಿಸುವುದು ಸಧ್ಯ ಅಸಾಧ್ಯ ಎಂದು ಹೇಳಿದ್ದಾರೆ. ಇದರಿಂದ ಅಸಮಾಧಾನಗೊಂಡು ಓಂಕಾರ್ ಮನೆಯಿಂದ ತೆರಳಿದ್ದಾನೆ. ರಾತ್ರಿ ಮನೆಗೆ ಬರದಿದ್ದಾಗ ಜಮೀನಿನಲ್ಲಿ ಮಲಗಿರಬೇಕು ಎಂದು ಭಾವಿಸಿದ್ದೆವು, ಮರುದಿನ ಆತನ ಇಬ್ಬರು ಸಹೋದರರು ಮತ್ತು ನಾವು ಹುಡುಕಾಟ ನಡೆಸಲು ಜಮೀನಿಗೆ ತೆರಳಿದ್ದೇವೆ. ಪತಿ ಮೊದಲು ಜಮೀನಿಗೆ ತೆರಳಿದ್ದು, ಈ ವೇಳೆ ಮಗ ನೇಣು ಹಾಕಿಕೊಂಡಿರುವುದನ್ನು ನೋಡಿ ಆಘಾತಕ್ಕೊಳಗಾಗಿದ್ದಾರೆ, ಆತನನ್ನು ಹಗ್ಗದಿಂದ ಕೆಳಗಿಳಿಸಿ ಅದೇ ಹಗ್ಗದಿಂದ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆʼ ಎಂದು ಮೃತರ ಕುಟುಂಬಸ್ಥರು ಹೇಳಿರುವುದಾಗಿ ಪ್ರಕರಣದ ತನಿಖೆ ನಡೆಸುತ್ತಿರುವ ಸಬ್ ಇನ್ಸ್ ಪೆಕ್ಟರ್ ದಿಲೀಪ್ ಮುಂಡೆ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News