ಕರ್ನಾಟಕದ ನಂತರ ಬಂಗಾಳದ ಸರದಿ?; ಮೇದಿನಿಪುರ ಮೆಡಿಕಲ್ ಕಾಲೇಜಿನಲ್ಲಿ ಓರ್ವ ಬಾಣಂತಿ ಮೃತ್ಯು,ಇತರ ನಾಲ್ವರು ಗಂಭೀರ
ಕೋಲ್ಕತಾ: ಪಶ್ಚಿಮ ಬಂಗಾಳದ ಮೇದಿನಿಪುರ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ(ಎಂಎಂಸಿಎಚ್)ಯಲ್ಲಿ ಶಿಶುಗಳಿಗೆ ಜನ್ಮ ನೀಡಿದ ಬಳಿಕ ಬಾಣಂತಿಯೋರ್ವಳು ಮೃತಪಟ್ಟಿದ್ದು, ಇತರ ನಾಲ್ವರು ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ರಾಜ್ಯ ಆರೋಗ್ಯ ಇಲಾಖೆಯ ಅಧಿಕಾರಿಯೋರ್ವರು ಶನಿವಾರ ತಿಳಿಸಿದರು.
ಇಂಟ್ರಾವೆನಸ್(ಐವಿ)ದ್ರವದಲ್ಲಿ ನೀಡಲಾಗಿದ್ದ ರಿಂಗರ್ಸ್ ಲ್ಯಾಕ್ಟೇಟ್‌ನ ಅವಧಿ ಮುಗಿದಿತ್ತು ಮತ್ತು ಇದು ಬಾಣಂತಿಯ ಸಾವಿಗೆ ಕಾರಣವಾಗಿದೆ ಎಂದು ಮೃತ ಮಹಿಳೆಯ ಕುಟುಂಬ ಸದಸ್ಯರು ಆರೋಪಿಸಿದ್ದು, ಪೋಲಿಸ್ ದೂರನ್ನು ದಾಖಲಿಸಿದ್ದಾರೆ.
ಬುಧವಾರ ಮಗುವಿಗೆ ಜನ್ಮ ನೀಡಿದ್ದ ಮಹಿಳೆ ಶುಕ್ರವಾರ ಕೊನೆಯುಸಿರೆಳೆದಿದ್ದಾಳೆ.
ಮಹಿಳೆಯ ಸಾವು ಮತ್ತು ಇತರ ನಾಲ್ವರು ಬಾಣಂತಿಯರ ಆರೋಗ್ಯ ಸ್ಥಿತಿ ಹದಗೆಟ್ಟ ಬಳಿಕ ರಾಜ್ಯ ಆರೋಗ್ಯ ಇಲಾಖೆಯು ಈ ಕುರಿತು ತನಿಖೆ ನಡೆಸಲು ೧೩ ಸದಸ್ಯರ ಸಮಿತಿಯೊಂದನ್ನು ರಚಿಸಿದೆ. ಇಲಾಖೆಯು ಮೃತ ಮಹಿಳೆಯ ಪತಿ ಮತ್ತು ಗಂಭೀರ ಸ್ಥಿತಿಯಲ್ಲಿರುವ ಇತರ ಮಹಿಳೆಯರ ಕುಟುಂಬ ಸದಸ್ಯರಿಂದ ದೂರುಗಳನ್ನು ಸ್ವೀಕರಿಸಿದೆ ಎಂದು ಅಧಿಕಾರಿ ಸುದ್ದಿಸಂಸ್ಥೆಗೆ ತಿಳಿಸಿದರು.
‘ರಿಂಗರ್ಸ್ ಲ್ಯಾಕ್ಟೇಟ್‌ನ ಸ್ಯಾಂಪಲ್‌ಗಳನ್ನು ಸಂಗ್ರಹಿಸಲಾಗಿದೆ ಮತ್ತು ಔಷಧಿ ನಿಯಂತ್ರಣ ಘಟಕದ ವರದಿಗಾಗಿ ಕಾಯಲಾಗುತ್ತಿದೆ. ವರದಿ ನಮ್ಮ ಕೈಸೇರಿದ ಬಳಿಕ ವಿಷಯ ಸ್ಪಷ್ಟವಾಗಲಿದೆ’ ಎಂದು ಹೇಳಿದ ಅಧಿಕಾರಿ,ಮೃತ ಮಹಿಳೆಯ ಮಗುವನ್ನು ಈಗಲೂ ಎಂಎಂಸಿಎಚ್‌ನಲ್ಲಿ ದಾಖಲಿಸಲಾಗಿದೆ ಎಂದರು.