FACT CHECK | ಪ್ರಧಾನಿ ಮೋದಿ ತನ್ನ ದುಬಾರಿ ನಿವಾಸದಲ್ಲಿ ಐಷಾರಾಮಿ ವಾಚ್ ಧರಿಸುವುದನ್ನು ತೋರಿಸುವ ವೈರಲ್ ಫೋಟೊ ನಿಜವೇ?
ಹೈದರಾಬಾದ್: ದಿಲ್ಲಿ ವಿಧಾನಸಭಾ ಚುನಾವಣೆಗೆ ಮುನ್ನ ಮುಖ್ಯಮಂತ್ರಿಗಳ ನಿವಾಸದ ಕುರಿತು ಬಿಜೆಪಿ ಮತ್ತು ಆಪ್ ನಡುವೆ ಪರಸ್ಪರ ಕೆಸರೆರಚಾಟ ಆರಂಭಗೊಂಡಿದೆ. ದಿಲ್ಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ತನಗಾಗಿ ಅದ್ದೂರಿಯ ‘ಶೀಷ್ ಮಹಲ್’ ನಿರ್ಮಿಸಿಕೊಂಡಿದ್ದಾರೆ ಎಂದು ಬಿಜೆಪಿ ಟೀಕಿಸಿದರೆ ಪ್ರಧಾನಿ ನರೇಂದ್ರ ಮೋದಿಯವರು 2,700 ಕೋಟಿ ರೂ.ಮೌಲ್ಯದ ‘ರಾಜಮಹಲ್’ನಲ್ಲಿ ವಾಸವಾಗಿದ್ದಾರೆ ಎಂದು ಆರೋಪಿಸುವ ಮೂಲಕ ಆಪ್ ತಿರುಗೇಟು ನೀಡಿದೆ.
ಇದೇ ಸಂದರ್ಭದಲ್ಲಿ ಕೋಣೆಯೊಂದರಲ್ಲಿ ದುಬಾರಿ ವಾಚ್ ಧರಿಸುತ್ತಿರುವಂತೆ ಕಂಡು ಬರುತ್ತಿರುವ ಮೋದಿಯವರ ಚಿತ್ರವೊಂದು ವೈರಲ್ ಆಗಿದೆ. ಕೋಣೆಯ ಗೋಡೆಗಳಿಗೆ ಅಳವಡಿಸಿರುವ ಶೋಕೇಸ್‌ಗಳು ದುಬಾರಿ ವಸ್ತುಗಳನ್ನು ಪ್ರದರ್ಶಿಸುತ್ತಿವೆ.
ಈ ಚಿತ್ರವನ್ನು ಎಕ್ಸ್‌ನಲ್ಲಿ ಹಂಚಿಕೊಂಡಿರುವ ಬಳಕೆದಾರನೋರ್ವ, ‘ಪ್ರಧಾನಿ ನಿವಾಸದಲ್ಲಿ ಕೆಲಸ ಮಾಡುತ್ತಿರುವ, ಆದರೆ ತನ್ನ ಮಕ್ಕಳನ್ನು ಕೇಜ್ರಿವಾಲ್ ನಿರ್ಮಿಸಿರುವ ಶಾಲೆಗಳಿಗೆ ಕಳುಹಿಸುತ್ತಿರುವ ಉದ್ಯೋಗಿಯೋರ್ವರು ಇದನ್ನು ರಹಸ್ಯವಾಗಿ ಕಳುಹಿಸಿದ್ದಾರೆ. ಇಂದು ಅಪರಾಹ್ನ ಮೂರು ಗಂಟೆಗೆ ಪ್ರಧಾನಿಯವರು ಈ ದುಬಾರಿ ವಾಚ್ ಅನ್ನು ಕಟ್ಟಿಕೊಳ್ಳುತ್ತಿರುವಾಗ ಅವರು ಚಿತ್ರವನ್ನು ರಹಸ್ಯವಾಗಿ ಕ್ಲಿಕ್ ಮಾಡಿದ್ದಾರೆ. ಈ ‘ರಾಜಮಹಲ್’ನಲ್ಲಿ ಫ್ಯಾನ್ಸಿ ಸೂಟ್‌ಗಳು, ಶೂಗಳು, ಕನ್ನಡಕಗಳು, ಪೆನ್‌ಗಳು ಇತ್ಯಾದಿಗಳಂತಹ ದುಬಾರಿ ವೆಚ್ಚದ ಐಷಾರಾಮಿ ವಸ್ತುಗಳಿಗೆ ಮೀಸಲಾಗಿರುವ ಪ್ರತ್ಯೇಕ ಕೊಠಡಿಗಳಿವೆ ಎನ್ನುವುದನ್ನೂ ಅವರು ಬಹಿರಂಗಗೊಳಿಸಿದ್ದಾರೆ. 2,700 ಕೋಟಿ ರೂ.ಗಳನ್ನು ವೆಚ್ಚ ಮಾಡಿರುವಾಗ ಯಾವುದು ಸಾಧ್ಯವಿಲ್ಲ, ಬ್ರದರ್?’ ಎಂದು ಬರೆದಿದ್ದಾರೆ.
ಸತ್ಯ ಪರಿಶೀಲನೆ
ವೈರಲ್ ಆಗಿರುವ ಎಕ್ಸ್ ಪೋಸ್ಟ್‌ನ ಕುರಿತು ತನಿಖೆ ನಡೆಸಿದ ಸುದ್ದಿ ಜಾಲತಾಣ ʼನ್ಯೂಸ್‌ಮೀಟರ್ʼನ ಫ್ಯಾಕ್ಟ್‌ಚೆಕ್ ಡೆಸ್ಕ್ ಇದು ಸುಳ್ಳು ಎನ್ನುವುದನ್ನು ಕಂಡುಕೊಂಡಿದೆ. ‘ಪ್ರಧಾನಿ ನಿವಾಸದಿಂದ ಸೋರಿಕೆಯಾಗಿರುವ ಫೋಟೊ’ ಕೃತಕ ಬುದ್ಧಿಮತ್ತೆ (ಎಐ)-ರಚಿತ ಚಿತ್ರವಾಗಿದೆ ಎನ್ನುವುದನ್ನು ಅದು ಬಹಿರಂಗಗೊಳಿಸಿದೆ.
ಚಿತ್ರವನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ‘ಗ್ರೋಕ್ ಎಐ’ಗಾಗಿ ವಾಟರ್‌ಮಾರ್ಕ್ ಕಂಡುಬಂದಿತ್ತು. ಗ್ರೋಕ್ ಇಮೇಜ್ ಜನರೇಟರ್ ಟೆಕ್ಸ್ಟ್ ಇನ್‌ಪುಟ್‌ಗಳಿಂದ ಕಲೆ ಮತ್ತು ದೃಶ್ಯಗಳನ್ನು ಸೃಷ್ಟಿಸಲು ವಿನ್ಯಾಸಗೊಳಿಸಲಾಗಿರುವ ಎಐ ಟೂಲ್ ಆಗಿದೆ. ಇದನ್ನು ನಿರ್ದಿಷ್ಟವಾಗಿ ಕಲಾತ್ಮಕ ರಚನೆಗಳಿಗಾಗಿ ಅಭಿವೃದ್ಧಿಗೊಳಿಸಲಾಗಿದೆ ಎಂದು ಗ್ರೋಕ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ಹೇಳಲಾಗಿದೆ.
ಚಿತ್ರದ ಹೆಚ್ಚಿನ ಪರಿಶೀಲನೆಯು ಎಐ-ರಚಿತ ಚಿತ್ರಗಳಲ್ಲಿ ಸಾಮಾನ್ಯವಾಗಿರುವ ಹಲವಾರು ಅಸಂಗತತೆಗಳನ್ನು ಬಹಿರಂಗಗೊಳಿಸಿತ್ತು.
ಪ್ರಧಾನಿಯವರ ಕನ್ನಡಕದ ಚೌಕಟ್ಟು ಅಪೂರ್ಣವಾಗಿ ಗೋಚರಿಸುತ್ತಿರುವುದು ಮತ್ತು ಬೆರಳುಗಳು ತಿರುಚಿರುವಂತೆ ಕಾಣುತ್ತಿರುವುದು ಸೇರಿದಂತೆ ಕೆಲವು ಸ್ಪಷ್ಟ ವ್ಯತ್ಯಾಸಗಳು ಕಂಡು ಬಂದಿದ್ದು,ಜೊತೆಗೆ ಚಿತ್ರದ ಅತಿಯಾದ ಹೊಳಪಿನ ಸ್ವರೂಪ ಮತ್ತು ಮಸುಕಾದ ಹಿನ್ನೆಲೆ ಎಐ-ರಚಿತ ಮಾಧ್ಯಮದ ಲಕ್ಷಣಗಳಾಗಿವೆ.
ಚಿತ್ರದ ಸತ್ಯಾಸತ್ಯತೆಯನ್ನು ದೃಢಪಡಿಸಿಕೊಳ್ಳಲು ನ್ಯೂಸ್‌ಮೀಟರ್ ತಂಡವು ವಿವಿಧ ಎಐ ಡಿಟೆಕ್ಷನ್ ಟೂಲ್‌ಗಳನ್ನು ಬಳಸಿದ್ದು,ಅಂತಿಮವಾಗಿ ವೈರಲ್ ಚಿತ್ರವು ಎಐ ಬಳಸಿ ರಚಿಸಿದ್ದು ಎಂಬ ತೀರ್ಮಾನಕ್ಕೆ ಬಂದಿದೆ.
ಈ ಲೇಖನವನ್ನು ಮೊದಲು newsmeter.in ಪ್ರಕಟಿಸಿದೆ. ʼಶಕ್ತಿ ಕಲೆಕ್ಟಿವ್ʼನ ಭಾಗವಾಗಿ ವಾರ್ತಾ ಭಾರತಿ ಅನುವಾದಿಸಿದೆ.