ಬೊಕ್ಕಸಕ್ಕೆ 2,026 ಕೋ.ರೂ.ನಷ್ಟ | ಸಿಎಜಿಯ ‘ಲಿಕರ್‌ಗೇಟ್’ ವರದಿ ಕುರಿತು ಆಪ್ ವಿರುದ್ಧ ಬಿಜೆಪಿ ದಾಳಿ

Update: 2025-01-11 14:42 GMT

CAG | PC ; cag.gov.in

ಹೊಸದಿಲ್ಲಿ: ಆಪ್ ವಿರುದ್ಧ ಶನಿವಾರ ವಾಗ್ದಾಳಿ ನಡೆಸಿರುವ ಬಿಜೆಪಿ, ಅದರ ಮದ್ಯ ಹಗರಣದಿಂದಾಗಿ ಸರಕಾರಕ್ಕೆ ಭಾರೀ ಆದಾಯ ನಷ್ಟವುಂಟಾಗಿದೆ ಎಂದು ಆರೋಪಿಸಿದೆ.

ಸಿಎಜಿ ವರದಿಯ ಸೋರಿಕೆಯಾಗಿರುವ ಪುಟಗಳನ್ನು ಉಲ್ಲೇಖಿಸಿ ಬಿಜೆಪಿಯು,ಆಪ್ ನೇತೃತ್ವದ ದಿಲ್ಲಿ ಸರಕಾರದ ಅಬಕಾರಿ ನೀತಿಯಿಂದ ಬೊಕ್ಕಸಕ್ಕೆ 2,026 ಕೋ.ರೂ.ಗೂ ಅಧಿಕ ನಷ್ಟವುಂಟಾಗಿದೆ ಎಂದು ಹೇಳಿದೆ.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರು, ಬೊಕ್ಕಸಕ್ಕೆ 2,026 ಕೋ.ರೂ.ನಷ್ಟವನ್ನುಂಟು ಮಾಡಿರುವ ಮದ್ಯ ಹಗರಣಕ್ಕೆ ವಿತ್ತವರ್ಷ 2025 ಸಾಕ್ಷಿಯಾಗಿದೆ. ಆಪ್ ಶಾಲೆಗಳನ್ನು ನಿರ್ಮಿಸುವುದಾಗಿ ಭರವಸೆ ನೀಡಿತ್ತು. ಬದಲಾಗಿ ಮದ್ಯದ ಅಂಗಡಿಗಳು ತೆರೆಯಲ್ಪಟ್ಟಿದ್ದವು. ಅವರು ಸ್ವಚ್ಛತೆಯ ಬಗ್ಗೆ ಮಾತನಾಡಿದ್ದರು. ಅವರು ಉತ್ತಮ ಆಡಳಿತದ ಬಗ್ಗೆ ಮಾತನಾಡಿದ್ದರು. ಆದರೆ ಎಲ್ಲವೂ ಮದ್ಯದಲ್ಲಿ ಅಂತ್ಯಗೊಂಡಿತು. ಆಪ್ ಸರಕಾರದ 10 ವರ್ಷಗಳ ಪಯಣ ಹಗರಣಗಳು ಮತ್ತು ಪಾಪಗಳಿಂದ ತುಂಬಿದೆ. ಉಪ ಮುಖ್ಯಮಂತ್ರಿ ಮತ್ತು ಮುಖ್ಯಮಂತ್ರಿ ಸೇರಿದಂತೆ ಎಂಟು ಸಚಿವರು,15 ಶಾಸಕರು ಮತ್ತು ಓರ್ವ ಸಂಸದ ಜೈಲಿಗೆ ಹೋಗುವುದರೊಂದಿಗೆ ಇಂತಹ ಸರಕಾರವು ಸ್ವಾತಂತ್ರ್ಯೋತ್ತರ ಭಾರತದಲ್ಲಿ ಎಂದಿಗೂ ಬಂದಿರಲಿಲ್ಲ. ಅವರ ನಿರ್ಗಮನ ಈಗ ಅತ್ಯಂತ ಅಗತ್ಯವಾಗಿದೆ ಎಂದು ಹೇಳಿದರು.

ದಿಲ್ಲಿಯಲ್ಲಿ ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಆಮ್ಲಜನಕ ಮತ್ತು ಇತರ ವೈದ್ಯಕೀಯ ಸೌಲಭ್ಯಗಳ ಕೊರತೆಯಿದ್ದಾಗ, ಜನಸಾಮಾನ್ಯರು ಸಂಕಷ್ಟದಲ್ಲಿದ್ದಾಗ ಆಪ್ ಮದ್ಯ ಹಗರಣದಲ್ಲಿ ವ್ಯಸ್ತವಾಗಿತ್ತು. ಶಾಲೆಗಳ ಬದಲು ತಲೆಯೆತ್ತಿದ್ದ ಮದ್ಯದಂಗಡಿಗಳನ್ನು ಹಗರಣದಲ್ಲಿ ಭಾಗಿಯಾಗಿದ್ದ ಸಚಿವರೋರ್ವರು ಉದ್ಘಾಟಿಸಿದ್ದರು ಎಂದ ಠಾಕೂರ್, ಮದ್ಯ ಹಗರಣದ ಕಿಂಗ್‌ಪಿನ್ ಇದ್ದರೆ ಅದು ಅರವಿಂದ ಕೇಜ್ರಿವಾಲ್. ಯಾರಾದರೂ ಬೊಕ್ಕಸಕ್ಕೆ 2,026 ಕೋ.ರೂ.ಗಳ ನಷ್ಟವನ್ನುಂಟು ಮಾಡಿದ್ದರೆ ಅದು ಅರವಿಂದ ಕೇಜ್ರಿವಾಲ್ ಮತ್ತು ಆಮ್ ಆದ್ಮಿ ಪಾರ್ಟಿ. ಅಬಕಾರಿ ನಿಯಮಗಳನ್ನು ಅನುಮೋದನೆಗಾಗಿ ವಿಧಾನಸಭೆಯಲ್ಲಿ ಮಂಡಿಸಲಾಗಿರಲಿಲ್ಲ. ಸಿಎಜಿ ಕಂಡುಕೊಂಡಿರುವ ಈ ಪ್ರಮುಖ ಅಂಶಗಳನ್ನು ಯಾವುದೇ ರಾಜಕೀಯ ಪಕ್ಷವು ಬೆಟ್ಟು ಮಾಡಿದ್ದಲ್ಲ,ಪಾರದರ್ಶಕತೆ ಮತ್ತು ಆಡಳಿತವನ್ನು ಖಚಿತಪಡಿಸುವ ಸಂಸ್ಥೆಯು ಅವುಗಳನ್ನು ಎತ್ತಿ ತೋರಿಸಿದೆ ಎಂದರು.

ಸಿಎಜಿ ವರದಿಯನ್ನು ವಿಧಾನಸಭೆಯಲ್ಲಿ ಮಂಡಿಸುವಂತೆ ಲೆಫ್ಟಿನಂಟ್ ಗವರ್ನರ್ ಸೂಚಿಸಿದಾಗ ಆಪ್‌ನ ಪಾಪಗಳನ್ನು ಮುಚ್ಚಿಡಲು ಮತ್ತು ವರದಿಯನ್ನು ಮಂಡಿಸದಂತೆ ಮುಖ್ಯಮಂತ್ರಿ ಆತಿಷಿಯವರ ಮೇಲೆ ಯಾವ ಒತ್ತಡಗಳಿದ್ದವು? ಅದು ‘ಶೀಷ್‌ಮಹಲ್’ ಅಥವಾ ಮದ್ಯ ಹಗರಣವಾಗಲಿ,ಅವುಗಳಿಂದ ಗಳಿಸಿದ ಹಣವನ್ನು ಇಲ್ಲಿ ಉಲ್ಲೇಖಿಸಲಾಗಿದೆ ಎಂದು ಅವರು ಹೇಳಿದರು.

ಬಿಜೆಪಿ ಆರೋಪಗಳಿಗೆ ಪ್ರತಿಕ್ರಿಯಿಸಿದ ಆಪ್‌ನ ರಾಜ್ಯಸಭಾ ಸಂಸದ ಸಂಜಯ ಸಿಂಗ್ ಅವರು,ವರದಿ ಎಲ್ಲಿದೆ? ಸಿಎಜಿ ವರದಿಯನ್ನು ಮಂಡಿಸಲಾಗಿಲ್ಲ ಎಂದು ಖುದ್ದು ಬಿಜೆಪಿ ಹೇಳುತ್ತಿದೆ ಎಂದರು.

ಈ ನಡುವೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು,ಆಪ್‌ಗೆ ಅಧಿಕಾರದ ಅಮಲು ತಲೆಗೇರಿದೆ ಮತ್ತು ದುರಾಡಳಿತದಲ್ಲಿ ತೊಡಗಿದೆ ಎಂದು ಟೀಕಿಸಿದ್ದಾರೆ.

‘ಲಿಕರ್‌ಗೇಟ್’ ಕುರಿತು ಸಿಎಜಿ ವರದಿಯು ಅರವಿಂದ ಕೇಜ್ರಿವಾಲ್ ಮತ್ತು ಆಪ್ ಸರಕಾರದ ಬಣ್ಣವನ್ನು ಬಯಲಿಗೆಳೆದಿದೆ. ನೀತಿ ಅನುಷ್ಠಾನದಲ್ಲಿ ಉದ್ದೇಶಪೂರ್ವಕ ದೋಷಗಳು. ಸರಕಾರದ ಬೊಕ್ಕಸಕ್ಕೆ 2,026 ಕೋ.ರೂ.ಗಳ ನಷ್ಟ ಎಂದು ನಡ್ಡಾ ಎಕ್ಸ್ ಪೋಸ್ಟ್‌ನಲ್ಲಿ ಬರೆದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News