ಮಧ್ಯಪ್ರದೇಶ: ಐಟಿ ದಾಳಿಯ ವೇಳೆ ಬಿಜೆಪಿ ನಾಯಕನ ಮನೆಯಲ್ಲಿ ನಾಲ್ಕು ಮೊಸಳೆ ಪತ್ತೆ!

Update: 2025-01-11 08:29 GMT

PC :  NDTV 

ಭೋಪಾಲ್: ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ ನಡೆದ ಐಟಿ ದಾಳಿಯ ಸಂದರ್ಭದಲ್ಲಿ ಬಿಜೆಪಿಯ ಮಾಜಿ ಶಾಸಕ ಹರ್ವಂಶ್ ಸಿಂಗ್ ರಾಥೋಡ್ ನಿವಾಸದ ಆವರಣದಲ್ಲಿನ ಸಣ್ಣ ಕೊಳದಲ್ಲಿ ನಾಲ್ಕು ಮೊಸಳೆಗಳು ಪತ್ತೆಯಾಗಿದ್ದು, ಈ ಪೈಕಿ ಎರಡು ಮೊಸಳೆಗಳನ್ನು ಶುಕ್ರವಾರ ಅವರನ್ನು ಅರಣ್ಯಾಧಿಕಾರಿಗಳು ರಕ್ಷಿಸಿದ್ದಾರೆ. ಉಳಿದ ಎರಡು ಮೊಸಳೆಗಳನ್ನು ಇಂದು ರಕ್ಷಿಸಲಾಗುತ್ತದೆ ಎಂದು ವರದಿಯಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಅರಣ್ಯ ಮುಖ್ಯಸ್ಥ ಅಸೀಂ ಶ್ರೀವಾಸ್ತವ, “ತನಿಖೆಯ ನಂತರ, ಈ ಸಂಬಂಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗುವುದು. ಆದಾಯ ತೆರಿಗೆ ಇಲಾಖೆಯವರು ನಮಗೆ ಮೊಸಳೆಗಳ ಕುರಿತು ಮಾಹಿತಿ ನೀಡಿದರು. ಅವನ್ನು ವಶಪಡಿಸಿಕೊಳ್ಳಲಾಗುವುದು” ಎಂದು ತಿಳಿಸಿದ್ದಾರೆ.

ಮೊಸಳೆಗಳ ಹಳೆಯ ವಿಡಿಯೊ ತುಣುಕೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುವವರೆಗೂ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಈ ಕುರಿತು ಮೌನ ವಹಿಸಿದ್ದರು ಹಾಗೂ ರಾಥೋಡ್ ನಿವಾಸದಲ್ಲಿ ಯಾವುದೇ ವನ್ಯಜೀವಿ ಪತ್ತೆಯಾಗಿಲ್ಲ ಎಂದು ನಿರಾಕರಿಸಿದ್ದರು.

ಮೊಸಳೆಗಳನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಿದ ನಂತರ, ನ್ಯಾಯಾಲಯದ ಅನುಮತಿ ಪಡೆದು ಅವನ್ನು ಅಣೆಕಟ್ಟಿನೊಳಗೆ ಬಿಡಲಾಗುವುದು ಎಂದು ಅರಣ್ಯ ಮುಖ್ಯಸ್ಥ ಶ್ರೀವಾಸ್ತವ ಹೇಳಿದ್ದಾರೆ.

ಕೊಳವು ರಾಥೋಡ್ ನಿವಾಸದ ಆವರಣದೊಳಗೇ ಇದ್ದರೂ, ಈ ಸಂಗತಿಯನ್ನು ಅವರ ಕುಟುಂಬದ ಸದಸ್ಯರು ಅಲ್ಲಗಳೆದಿದ್ದಾರೆ. ಆ ಕೊಳವನ್ನು ನಾವು ತುಂಬಾ ಹಿಂದೆಯೇ ದೇವಾಲಯದ ಅರ್ಚಕರಿಗೆ ದಾನ ಮಾಡಿದ್ದೆವು ಎಂದು ಸಮರ್ಥಿಸಿಕೊಂಡಿದ್ದಾರೆ. ಕೊಳದಿಂದ ಮೊಸಳೆಗಳನ್ನು ತೆಗೆಯುವಂತೆ ನಾವು ಹಲವು ಬಾರಿ ಅರಣ್ಯ ಇಲಾಖೆಗೆ ಪತ್ರಗಳನ್ನು ಬರೆದಿದ್ದೆವು ಎಂದೂ ಅವರು ಹೇಳಿದ್ದಾರೆ.

2014ರಲ್ಲಿ ರಾಥೋಡ್ ಕುಟುಂಬವು ಈ ಸಂಬಂಧ ಪತ್ರ ಬರೆದಿತ್ತು ಎಂದು ಅರಣ್ಯ ಇಲಾಖೆಯ ಮೂಲಗಳು ತಿಳಿಸಿವೆ ಎಂದು ಹೇಳಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News