ಯಾವುದೇ ವಿವಾದಿತ ಕಟ್ಟಡವನ್ನು ಮಸೀದಿ ಎಂದು ಕರೆಯಬಾರದು : ಉತ್ತರಪ್ರದೇಶ ಸಿಎಂ ಆದಿತ್ಯನಾಥ್

Update: 2025-01-11 07:48 GMT

ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ (PTI)

ಲಕ್ನೋ : ಯಾವುದೇ ವಿವಾದಿತ ಕಟ್ಟಡ ಅಥವಾ ರಚನೆಯನ್ನು ಮಸೀದಿ ಎಂದು ಕರೆಯಬಾರದು ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಶುಕ್ರವಾರ ಹೇಳಿದ್ದಾರೆ.

ಪ್ರಯಾಗ್ ರಾಜ್ ನಲ್ಲಿ ಆಜ್ ತಕ್(Aaj Tak) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಆದಿತ್ಯನಾಥ್, ನಾವು ಅದನ್ನು ಮಸೀದಿ ಎಂದು ಕರೆಯುವುದನ್ನು ನಿಲ್ಲಿಸಿದ ದಿನ, ಜನರು ಅಲ್ಲಿಗೆ ಹೋಗುವುದನ್ನು ನಿಲ್ಲಿಸುತ್ತಾರೆ. ಮಸೀದಿಯಂತಹ ರಚನೆ ನಿರ್ಮಿಸುವ ಮೂಲಕ ಬೇರೆಯವರ ನಂಬಿಕೆಗೆ ಘಾಸಿಗೊಳಿಸುವುದು ಇಸ್ಲಾಮಿಕ್ ತತ್ವಗಳಿಗೆ ಹೊಂದಿಕೆಯಾಗುವುದಿಲ್ಲ. ಅಂತಹ ಸ್ಥಳಗಳಲ್ಲಿ ಆರಾಧಿಸುವುದನ್ನು ದೇವರು ಕೂಡ ಸ್ವೀಕರಿಸುವುದಿಲ್ಲ ಎಂದು ಹೇಳಿದ್ದಾರೆ.

ಆರಾಧನೆಗಾಗಿ ಕಟ್ಟಡವನ್ನು ನಿರ್ಮಿಸುವುದನ್ನು ಇಸ್ಲಾಂ ಕಡ್ಡಾಯಗೊಳಿಸುವುದಿಲ್ಲ. ಆದರೆ, ಸನಾತನ ಧರ್ಮ ಅದನ್ನು ಹೇಳುತ್ತದೆ. ಮಸೀದಿಗಳ ಮಾಲಕತ್ವವನ್ನು ಪ್ರತಿಪಾದಿಸಿ ಹಿಂದೂಪರರು ದೇಶದ ವಿವಿಧೆಡೆ ಮೊಕದ್ದಮೆಗಳನ್ನು ಹೂಡಿರುವ ಮಧ್ಯೆ ಆದಿತ್ಯನಾಥ್ ಅವರ ಈ ಹೇಳಿಕೆ ಹೊರ ಬಿದ್ದಿದೆ.

ಡಿಸೆಂಬರ್ 12ರಂದು ಸರ್ವೋಚ್ಚ ನ್ಯಾಯಾಲಯವು ಪೂಜಾ ಸ್ಥಳಗಳ ಧಾರ್ಮಿಕ ಸ್ವರೂಪಕ್ಕೆ ಸಂಬಂಧಿಸಿದಂತೆ ಬಾಕಿ ಉಳಿದಿರುವ ಮೊಕದ್ದಮೆಗಳಲ್ಲಿ ಸಮೀಕ್ಷೆಗೆ ನಿರ್ದೇಶನ ಸೇರಿದಂತೆ ಯಾವುದೇ ಅಂತಿಮ ಆದೇಶಗಳನ್ನು ನೀಡಬಾರದು ಎಂದು ಸೂಚಿಸಿತ್ತು.

ನವ ಭಾರತದ ದೃಷ್ಟಿಕೋನವನ್ನು ಅಳವಡಿಸಿಕೊಂಡು ಪ್ರಗತಿಪರ ಚಿಂತನೆಯೊಂದಿಗೆ ಮುನ್ನಡೆಯುವ ಸಮಯ ಬಂದಿದೆ. ನಾವು ಹಿಂದಿನ ವಿವಾದಗಳಿಗೆ ಅಂಟಿಕೊಳ್ಳುವ ಬದಲು ಏಕತೆ ಮತ್ತು ಸಾಮರಸ್ಯವನ್ನು ನಿರ್ಮಿಸುವತ್ತ ಗಮನಹರಿಸಬೇಕು ಎಂದು ಇದೇ ವೇಳೆ ಆದಿತ್ಯನಾಥ್ ಹೇಳಿದ್ದಾರೆ.

ಪ್ರಯಾಗ್ ರಾಜ್ ನಲ್ಲಿ ವಕ್ಫ್ ಬೋರ್ಡ್ ಒಡೆತನದ ಜಮೀನಿನಲ್ಲಿ ಮಹಾಕುಂಭಮೇಳ ನಡೆಯುತ್ತಿದೆ ಎಂಬ ಬಗ್ಗೆ ಕೇಳಿದ ಪ್ರಶ್ನೆಗೆ, ಆ ಸ್ಥಳದಲ್ಲಿ ಸಾವಿರಾರು ವರ್ಷಗಳಿಂದ ಈ ಕಾರ್ಯಕ್ರಮ ನಡೆಯುತ್ತಿದೆ ಎಂದು ಆದಿತ್ಯನಾಥ್ ಹೇಳಿದ್ದಾರೆ. ʼವಕ್ಫ್ ಎನ್ನುವುದು ಮುಸ್ಲಿಮರು ಧಾರ್ಮಿಕ, ಶೈಕ್ಷಣಿಕ ಅಥವಾ ದತ್ತಿ ಉದ್ದೇಶಕ್ಕಾಗಿ ನೀಡಿದ ಆಸ್ತಿಯಾಗಿದೆ. ಭಾರತದಲ್ಲಿ ವಕ್ಫ್ ಕಾಯ್ದೆಯಡಿಯಲ್ಲಿ ವಕ್ಪ್‌ ಆಸ್ತಿಗಳನ್ನು ನಿಯಂತ್ರಿಸಲಾಗುತ್ತದೆ. ಪ್ರತಿ ರಾಜ್ಯವು ವಕ್ಫ್ ಮಂಡಳಿಯನ್ನು ಹೊಂದಿದೆ, ಮಂಡಳಿಯು ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳುವ, ಹಿಡಿದಿಟ್ಟುಕೊಳ್ಳುವ ಮತ್ತು ವರ್ಗಾಯಿಸುವ ಅಧಿಕಾರವನ್ನು ಹೊಂದಿದೆ. ಈಗ ಯಾರಾದರೂ ಇದನ್ನು ವಕ್ಫ್ ಬೋರ್ಡ್ ಆಸ್ತಿ ಎಂದು ಕರೆದರೆ, ಇದು ವಕ್ಫ್ ಬೋರ್ಡ್ ಗೆ ಸೇರಿದೆಯಾ ಅಥವಾ ಭೂ ಮಾಫಿಯಾಗೆ ಸೇರಿದೆಯೇ ಎಂದು ನಾವು ಕೇಳಬೇಕು ಎಂದು ಆದಿತ್ಯನಾಥ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News