ಗುಜರಾತ್ | ಪತನಕ್ಕೆ ಮೂಲ ಕಾರಣ ಪತ್ತೆ ಮಾಡುವವರೆಗೆ ಧ್ರುವ್ ಹೆಲಿಕಾಪ್ಟರ್ ಗಳ ಹಾರಾಟ ಸ್ಥಗಿತ

Update: 2025-01-11 08:00 GMT

ಸಾಂದರ್ಭಿಕ ಚಿತ್ರ (PTI)

ಗಾಂಧಿನಗರ: ಗುಜರಾತ್ ನಲ್ಲಿ ಕೋಸ್ಟ್ ಗಾರ್ಡ್ ಹೆಲಿಕಾಪ್ಟರ್ ಪತನದ ಮೂಲ ಕಾರಣವನ್ನು ಕಂಡುಹಿಡಿಯುವವರೆಗೆ ಧ್ರುವ್ ಲಘು ಹೆಲಿಕಾಪ್ಟರ್ ಗಳ ಹಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಘಟನೆಯ ಕುರಿತ ತನಿಖೆಯ ವೇಳೆ ಹೆಲಿಕಾಪ್ಟರ್ ಪತನಕ್ಕೆ ಮೊದಲು ನಿಯಂತ್ರಣವನ್ನು ಕಳೆದುಕೊಂಡಿತ್ತು ಎನ್ನುವುದು ಬಯಲಾಗಿದೆ.

ಭಾರತೀಯ ಕೋಸ್ಟ್ ಗಾರ್ಡ್ ಗೆ ಸೇರಿದ ಎಎಲ್ ಹೆಚ್ ಧ್ರುವ್ ಹೆಲಿಕಾಪ್ಟರ್ ಕಳೆದ ರವಿವಾರ ಗುಜರಾತ್‌ ನ ಪೋರಬಂದರ್‌ ನಲ್ಲಿ ತರಬೇತಿಯ ಸಮಯದಲ್ಲಿ ಪತನಗೊಂಡಿತ್ತು. ಘಟನೆಯಲ್ಲಿ ಮೂವರು ಮೃತಪಟ್ಟಿದ್ದರು. ಈ ಕುರಿತು HAL ಮತ್ತು ಕೋಸ್ಟ್ ಗಾರ್ಡ್ ತಂಡಗಳು ತನಿಖೆಯನ್ನು ನಡೆಸುತ್ತಿದೆ. ಪತನಗೊಂಡ ಕೋಸ್ಟ್ ಗಾರ್ಡ್ ಹೆಲಿಕಾಪ್ಟರ್ ನ ಎಫ್ ಡಿ ಆರ್(ಫ್ಲೈಟ್ ಡಾಟಾ ರೆಕಾರ್ಡರ್) ಮತ್ತು ಸಿವಿಆರ್ (ಕಾಕ್ ಪಿಟ್ ವಾಯ್ಸ್ ರೆಕಾರ್ಡರ್) ನಿಂದ ಪಡೆಯಲಾದ ಡೇಟಾದ ಪ್ರಾಥಮಿಕ ವಿಶ್ಲೇಷಣೆಯು ಅಪಘಾತಕ್ಕೀಡಾಗುವ ಮೊದಲು ಹೆಲಿಕಾಫ್ಟರ್ “ಮೂರರಿಂದ ನಾಲ್ಕು ಸೆಕೆಂಡ್‌ ಗಳ ಕಾಲ ನಿಯಂತ್ರಣವನ್ನು ಕಳೆದುಕೊಂಡಿತ್ತು” ಎಂದು ತಿಳಿದು ಬಂದಿದೆ ಎಂದು ಅಧಿಕಾರಿಯೋರ್ವರು ತಿಳಿಸಿದ್ದಾರೆ.

ಈ ಮೊದಲು ಕೂಡ ಕೋಸ್ಟ್ ಗಾರ್ಡ್ ಗೆ ಸೇರಿದ ಹೆಲಿಕಾಪ್ಟರ್ ಪತನಗೊಂಡಿದ್ದವು. ಕಳೆದ ಸೆಪ್ಟೆಂಬರ್‌ ನಲ್ಲಿ ALH ಅರೇಬಿಯನ್ ಸಮುದ್ರಕ್ಕೆ ಅಪ್ಪಳಿಸಿದಾಗ ಕೋಸ್ಟ್ ಗಾರ್ಡ್ ಇಬ್ಬರು ಪೈಲಟ್‌ ಗಳು ಮತ್ತು ಏರ್ ಕ್ರೂ ಡೈವರ್ ಗಳನ್ನು ಕಳೆದುಕೊಂಡಿತ್ತು. ಇತ್ತೀಚಿನ ತಿಂಗಳುಗಳಲ್ಲಿ ಎಎಲ್ ಹೆಚ್ ಗಳಲ್ಲಿ ವಿದ್ಯುತ್ ನಷ್ಟ ಮತ್ತು ಗೇರ್ ಬಾಕ್ಸ್‌ ಗಳ ವೈಫಲ್ಯದಂತಹ ಕೆಲವು ತಾಂತ್ರಿಕ ದೋಷಗಳು ಕಂಡು ಬಂದಿದ್ದವು. ಎಎಲ್ ಹೆಚ್ ವಿಮಾನಗಳಲ್ಲಿ ಅವಘಡ ಮುಂದುವರಿದ ಕಾರಣ ಸುರಕ್ಷತಾ ಕ್ರಮವಾಗಿ ತಾತ್ಕಾಲಿಕವಾಗಿ ALH ಲಘು ಹೆಲಿಕಾಪ್ಟರ್ ಗಳ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News