ಅತ್ಯಾಚಾರ ಆರೋಪದ ಬೆನ್ನಲ್ಲೇ ಸಂತ್ರಸ್ತೆಯನ್ನು ವಿವಾಹವಾದ ಪೊಲೀಸ್ ಪೇದೆ
ಆಗ್ರಾ: ತನ್ನ ಮೇಲೆ ಎರಡನೆ ಬಾರಿ ಅತ್ಯಾಚಾರವೆಸಗಿ, ನನಗೆ ಜೀವ ಬೆದರಿಕೆ ಒಡ್ಡಲಾಗಿದೆ ಎಂದು ಅತ್ಯಾಚಾರ ಸಂತ್ರಸ್ತೆಯು ಆರೋಪಿಸಿದ ಬೆನ್ನಿಗೇ, 28 ವರ್ಷದ ಪೊಲೀಸ್ ಪೇದೆಯೊಬ್ಬ ಗುರುವಾರ ಆಕೆಯನ್ನು ವರಿಸಿರುವ ಘಟನೆ ನಡೆದಿದೆ.
ಅವರ ವಿವಾಹವನ್ನು ಶುಕ್ರವಾರ ದೃಢಪಡಿಸಿರುವ ಕೊತ್ವಾಲಿ ಪೊಲೀಸ್ ಠಾಣೆಯ ಠಾಣಾಧಿಕಾರಿ ಎಚ್.ಬಿ.ಸಿಂಗ್ ಭದೌರಿಯ, “ಈ ಹಿಂದಿನ ಅತ್ಯಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಈಗಾಗಲೇ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದೆ” ಎಂದು ತಿಳಿಸಿದ್ದಾರೆ.
“ಈ ವಿಷಯದಲ್ಲಿ ಏನಾದರೂ ರಾಜಿಯಾಗಿದೆಯೆ ಎಂಬುದು ನಮಗೆ ತಿಳಿದಿಲ್ಲ. ಮೈನ್ ಪುರಿಯಲ್ಲಿ ವಿವಾಹ ನಡೆದಿದ್ದು, ಪೇದೆಯ ವಕೀಲರು ಸೇರಿದಂತೆ ಹಲವು ಜನ ಈ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು” ಎಂದು ಅವರು ಹೇಳಿದ್ದಾರೆ.
ಕಾಕತಾಳೀಯವೆಂಬಂತೆ, ವಿವಾಹ ಜರುಗುವುದಕ್ಕೂ ಮುನ್ನಾ ದಿನವಾದ ಗುರುವಾರ ಬೆಳಗ್ಗೆ ಲಕ್ನೊದಲ್ಲಿ ಕರ್ತವ್ಯನಿರತನಾಗಿರುವ ಪೇದೆಯು ನನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಅತ್ಯಾಚಾರ ಸಂತ್ರಸ್ತೆಯು ಕೊತ್ವಾಲಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪೇದೆಯು ನನ್ನ ಮೇಲೆ ಬುಧವಾರ ಅತ್ಯಾಚಾರವೆಸಗಿದ್ದು, ಈ ಹಿಂದೆ ನನ್ನ ವಿರುದ್ಧ ದಾಖಲಾಗಿರುವ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಹಿಂಪಡೆಯದಿದ್ದರೆ, ಹತ್ಯೆಗೈಯ್ಯುವುದಾಗಿ ಬೆದರಿಕೆ ಒಡ್ಡಿದ್ದಾನೆ ಎಂದು ಆ ದೂರಿನಲ್ಲಿ ಆರೋಪಿಸಲಾಗಿತ್ತು.
2023ರಲ್ಲೂ ಆರೋಪಿ ಪೇದೆಯ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದ್ದು, ಈ ಪ್ರಕರಣದ ವಿಚಾರಣೆ ಮೈನ್ ಪುರಿಯ ನ್ಯಾಯಾಲಯವೊಂದರಲ್ಲಿ ನಡೆಯುತ್ತಿದೆ.