ಪ್ರೇಯಸಿಯನ್ನು ಅರಸಿ ದೇಶ ತೊರೆದ ಮಾಜಿ ಕ್ರಿಕೆಟರ್ ಈಗ ಕೋಟ್ಯಾಧಿಪತಿ !

Update: 2025-01-11 07:06 GMT

ಚೆನ್ನೈ: ಭಾರತದ ಮಾಜಿ ಕ್ರಿಕೆಟಿಗರೊಬ್ಬರು ಪ್ರೀತಿಗಾಗಿ ವೃತ್ತಿಜೀವನ ಮತ್ತು ದೇಶವನ್ನೇ ತೊರೆದು ದಕ್ಷಿಣ ಆಫ್ರಿಕಾಗೆ ತೆರಳಿ ಅಲ್ಲಿ ನಿಷೇಧಕ್ಕೊಳಗಾದರೂ ಧೈರ್ಯಗೆಡದೇ ಛಲದಿಂದ ಬದುಕು ಕಟ್ಟಿಕೊಂಡು ಈಗ ಕೋಟ್ಯಾಧಿಪತಿಯಾಗಿರುವ ಸ್ವಾರಸ್ಯಕರ ಪ್ರಸಂಗ ಬೆಳಕಿಗೆ ಬಂದಿದೆ.

ಭಾರತೀಯ ಕ್ರಿಕೆಟ್‍ನಲ್ಲಿ ಮನ್ಸೂರ್ ಅಲಿ ಖಾನ್ ಪಟೌಡಿ ಶರ್ಮಿಳಾ ಠಾಕೂರ್ ಅವರನ್ನು ಪ್ರೀತಿಸಿ ವಿವಾಹವಾದದ್ದು, ಸೌರವ್ ಗಂಗೂಲಿ ಬಾಲ್ಯದ ಸ್ನೇಹಿತೆಗೆ ತಾಳಿ ಕಟ್ಟಿದ್ದು, ಸಚಿನ್ ತೆಂಡೂಲ್ಕರ್- ಅಂಜಲಿ, ಕೊಹ್ಲಿ-ಅನುಷ್ಕಾ ಶರ್ಮಾ ಪ್ರೇಮ ಹೀಗೆ ಹಲವು ಕಥೆಗಳು ಇದ್ದರೂ, ತಮಿಳುನಾಡಿನ ಮಹಾಲಿಂಗಮ್ ವೆಂಕಟೇಶನ್ ಅವರ ಪ್ರಣಯ ಪ್ರಸಂಗಕ್ಕೆ ಹೋಲಿಸಿದರೆ ಪೇಲವ ಎನಿಸುತ್ತವೆ.

1970 ಹಾಗೂ 1980ರ ದಶಕದಲ್ಲಿ ದೇಶಿ ಕ್ರಿಕೆಟ್‍ನಲ್ಲಿ ಪ್ರಮುಖ ಹೆಸರಾಗಿದ್ದ ಮಹಾಲಿಂಗಮ್, ಜೀವನದಲ್ಲಿ ರಿಸ್ಕ್ ತೆಗೆದುಕೊಂಡ ಘಟನೆ ಅವರ ಜೀವನವನ್ನೇ ಬದಲಿಸಿತು. ಪ್ರಥಮದರ್ಜೆ ಹಾಗೂ ಡಿವಿಷನ್ ಲೀಗ್ ಪಂದ್ಯಗಳಲ್ಲಿ ಇಂಡಿಯಾ ಸಿಮೆಂಟ್ಸ್, ಎಸ್‍ಬಿಐ ತಂಡಗಳಿಗೆ ಸೈಯ್ಯದ್ ಕೀರ್ಮಾನಿ,, ಮೊಹಿಂದರ್ ಅಮರ್‍ನಾಥ್ ಜತೆಗೂ ಮಹಾಲಿಂಗಮ್ ಆಡಿದ್ದರು.

ಆದರೆ ಪ್ರೇಮದ ಬಲೆಯಲ್ಲಿ ಬಿದ್ದ ಇವರ ಬದುಕು ಅನಿರೀಕ್ಷಿತ ತಿರುವು ಪಡೆಯಿತು. "ನಾನು ಪತ್ನಿ ಪ್ರಿಸಿಲ್ಲ ಅವರನ್ನು 1983ರಲ್ಲಿ ಆಕೆ ಭಾರತಕ್ಕೆ ಬಂದಿದ್ದಾಗ ಭೇಟಿ ಮಾಡಿದ್ದೆ. ಆಕೆಯನ್ನು ಅರಸಿ ದಕ್ಷಿಣ ಆಫ್ರಿಕಾಗೆ ತೆರಳಿದೆ. ಆಗ ಆಫ್ರಿಕಾಗೆ ಪ್ರಯಾಣ ಸುಲಭವಿರಲಿಲ್ಲ. ಭಾರತ ಸರ್ಕಾರದಿಂದ ವಿಶೇಷ ಅನುಮತಿ ಪಡೆದು, ಸಂಬಂಧಿಕರನ್ನು ಭೇಟಿ ಮಾಡಲು ಇಲ್ಲಿಗೆ ಬಂದಿದ್ದಾಗಿ ಹೇಳಿದ್ದೆ. ದರ್ಬಾನ್‍ನಲ್ಲಿ ಇಳಿದು ಇಲ್ಲಿರುವುದಾಗಿ ಕರೆ ಮಾಡಿ ಆಕೆಗೆ ತಿಳಿಸಿದೆ. ಆಕೆಗೆ ನಂಬಲೂ ಸಾಧ್ಯವಾಗಲಿಲ್ಲ" ಎಂದು ಸ್ವಾರಸ್ಯಕರ ಕಥೆ ಬಿಚ್ಚಿಟ್ಟರು.

ಬಳಿಕ ನಮ್ಮ ವಿವಾಹವಾಯಿತು. ಇದೀಗ ನಮ್ಮ ವೈವಾಹಿಕ ಸಂಬಂಧಕ್ಕೆ 38 ವರ್ಷ ತುಂಬಿದೆ ಎಂದು ವಿವರಿಸಿದರು. ದಕ್ಷಿಣ ಆಫ್ರಿಕಾದಲ್ಲೂ ಮಹಾಲಿಂಗಮ್ ಮುರಳಿ ಹೆಸರಿನಿಂದ ಎನ್‍ಸಿಬಿ ಪರವಾಗಿ ಕೆಲ ಪಂದ್ಯಗಳನ್ನು ಆಡಿದರು. ಆದರೆ ವೀಸಾ ಸಮಸ್ಯೆಯಿಂದಾಗಿ ಅವರ ಕ್ರೀಡಾಭವಿಷ್ಯ ಮುಸುಕಾಯಿತು. ಇದೇ ಸಂದರ್ಭದಲ್ಲಿ ಅಪಘಾತವೊಂದರಲ್ಲಿ ಗಾಯಗೊಂಡು ಕ್ರೀಡಾಜೀವನಕ್ಕೆ ಧಕ್ಕೆ ಉಂಟಾಯಿತು.

ಬಳಿಕ ರೆಸ್ಟೋರೆಂಟ್ ವಹಿವಾಟಿಗೆ ಧುಮುಕಿದ ಮಾಲಿ ಇದೀಗ ಕೋಟ್ಯಧಿಪತಿ. 24 ವರ್ಷದಿಂದ ಹೊಟೆಲ್ ವ್ಯವಹಾರ ನಡೆಸುತ್ತಿರುವ 70 ವರ್ಷದ ಮಹಾಲಿಂಗಮ್‍ಗೆ ಈಗ ಇಬ್ಬರು ಪುತ್ರರಿದ್ದಾರೆ. ಮೂರು ರೆಸ್ಟೋರೆಂಟ್‍ಗಳ ಮಾಲಕರಾಗಿರುವ ಇವರ ಆಸ್ತಿ ಮೌಲ್ಯ ಇದೀಗ ಒಂದು ಕೋಟಿ ರೂಪಾಯಿ ದಾಟಿದೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News