ಝಾನ್ಸಿ ಸರ್ಕಾರಿ ಆಸ್ಪತ್ರೆಯಲ್ಲಿ ಅಗ್ನಿ ಅನಾಹುತ: 10 ನವಜಾತ ಶಿಶುಗಳು ಸಜೀವ ದಹನ

Update: 2024-11-16 02:11 GMT

PC: x.com/iamharunkhan

ಲಕ್ನೋ: ಉತ್ತರ ಪ್ರದೇಶದ ಝಾನ್ಸಿ ಮಹಾರಾಣಿ ಲಕ್ಷ್ಮೀಬಾಯಿ ವೈದ್ಯಕೀಯ ಕಾಲೇಜು ಆಸ್ಪತ್ರೆಯ ನವಜಾತ ಶಿಶು ತೀವ್ರ ನಿಗಾ ವಿಭಾಗದಲ್ಲಿ ಸಂಭವಿಸಿದ ಭೀಕರ ಅಗ್ನಿ ಆಕಸ್ಮಿಕದಲ್ಲಿ ಕನಿಷ್ಠ 10 ನವಜಾತ ಶಿಶುಗಳು ಜೀವಂತ ದಹನವಾದ ಹೃದಯ ವಿದ್ರಾವಕ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ.

ನವಜಾತ ಶಿಶುಗಳ ತೀವ್ರ ನಿಗಾ ವಿಭಾಗದಲ್ಲಿ ವಿದ್ಯುತ್ ಶಾರ್ಟ್ ಸರಕ್ಯೂಟ್‌ ನಿಂದ ಈ ದುರಂತ ಸಂಭವಿಸಿದೆ ಎಂದು ಜಿಲ್ಲಾಧಿಕಾರಿ ಅವಿನಾಶ್ ಕುಮಾರ್ ಹೇಳಿದ್ದಾರೆ. ವಾರ್ಡ್‌ನಲ್ಲಿ ದುರಂತ ಸಂಭವಿಸಿದ ವೇಳೆ 54 ಶಿಶುಗಳಿದ್ದವು. 16 ಮಕ್ಕಳಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, 28 ಮಂದಿ ಸುರಕ್ಷಿತವಾಗಿದ್ದಾರೆ ಎಂದು ಝಾನ್ಸಿ ವಲಯ ಡಿಐಜಿ ಕಲಾನಿಧಿ ನೈಥಾನಿ ವಿವರಿಸಿದ್ದಾರೆ.

ರಾತ್ರಿ 10.30 ರಿಂದ 10.45ರ ಅವಧಿಯಲ್ಲಿ ಬೆಂಕಿ ಇಡೀ ಆವರಣವನ್ನು ವ್ಯಾಪಿಸಿದ್ದು, ಕಾಲ್ತುಳಿತದಂಥ ಪರಿಸ್ಥಿತಿ ಆಸ್ಪತ್ರೆಯಲ್ಲಿ ನಿರ್ಮಾಣವಾಯಿತು. ಆರು ಅಗ್ನಿಶಾಮಕ ವಾಹನಗಳು ಬೆಂಕಿಯನ್ನು ಆರಿಸಲು ಧಾವಿಸಿದವು. ಮಧ್ಯರಾತ್ರಿ 12.30ರ ವೇಳೆಗೆ ಬೆಂಕಿಯನ್ನು ನಂದಿಸಲಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಸುರಕ್ಷಾ ಅಲರಾಂಗಳು ಕಾರ್ಯನಿರ್ವಹಿಸದೇ ಇದ್ದ ಕಾರಣ ಜನರನ್ನು ಸುರಕ್ಷಿತವಾಗಿ ಹೊರತರುವ ಕಾರ್ಯ ವಿಳಂಬವಾಯಿತು ಎಂದು ಮೂಲಗಳು ಹೇಳಿವೆ. ಆಮ್ಲಜನಕ ಸಾಂದ್ರೀಕರಣ ಘಟಕದಲ್ಲಿ ಕಾಣಿಸಿಕೊಂಡ ಬೆಂಕಿ ಇಡೀ ಕಟ್ಟಡಕ್ಕೆ ವ್ಯಾಪಿಸಿತು ಎಂದು ಮುಖ್ಯ ವೈದ್ಯಕೀಯ ಅಧೀಕ್ಷಕರು ಹೇಳಿದ್ದಾರೆ. ಘಟನೆ ಬಗ್ಗೆ 12 ಗಂಟೆಗಳ ಒಳಗಾಗಿ ಸಮಗ್ರ ವರದಿ ಸಲ್ಲಿಸುವಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೂಚನೆ ನೀಡಿದ್ದಾರೆ. ಸಿಎಂ ಸೂಚನೆಯಂತೆ ಉಪ ಮುಖ್ಯಮಂತ್ರಿ ಬೃಜೇಶ್ ಪಾಠಕ್ ಮತ್ತು ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ, ಕಾನ್ಪುರ ವಿಭಾಗ ಎಡಿಜಿಪಿಯವರು ಸ್ಥಳಕ್ಕೆ ಧಾವಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News