ಲಾಟರಿ ಹಗರಣ | ಪಶ್ಚಿಮ ಬಂಗಾಳದ ಉದ್ಯಮಿ ನಿವಾಸಕ್ಕೆ ಈಡಿ ದಾಳಿ ; 3 ಕೋಟಿ ರೂ. ನಗದು ವಶ

Update: 2024-11-15 15:58 GMT

PC : PTI 

ಹೊಸದಿಲ್ಲಿ : ಲಾಟರಿ ಹಗರಣಕ್ಕೆ ಸಂಬಂಧಿಸಿ ತಾನು ನಡೆಸುತ್ತಿರುವ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯವು ಶುಕ್ರವಾರ ಕೋಲ್ಕತಾದ ಉದ್ಯಮಿಯೊಬ್ಬರ ನಿವಾಸದ ಮೇಲೆ ದಾಳಿ ನಡೆಸಿ ಅಂದಾಜು 3 ಕೋಟಿ ರೂ. ನಗದನ್ನು ವಶಪಡಿಸಿಕೊಂಡಿದೆ. ಲಾಟರಿ ಹಗರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯವು ಗುರುವಾರ ಪಶ್ಚಿಮ ಬಂಗಾಳದ ವಿವಿಧೆಡೆ ಶೋಧ ಕಾರ್ಯಾಚರಣೆಯನ್ನು ನಡೆಸಿತ್ತು.

ಕವಿ ಭಾರತಿ ಸಾರನಿ ಪ್ರದೇಶದಲ್ಲಿರುವ ಉದ್ಯಮಿಯ ನಿವಾಸದಿಂದ ನಗದನ್ನು ವಶಪಡಿಸಿಕೊಳ್ಳಲಾಗಿದ್ದು, ನೋಟುಗಳ ಏಣಿಕೆ ಇನ್ನೂ ನಡೆಯುತ್ತಿರುವುದಾಗಿ ಈಡಿ ಅಧಿಕಾರಿಗಳು ತಿಳಿಸಿದ್ದಾರೆ. ಉತ್ತರ 24 ಪರಗಣ ಜಿಲ್ಲೆಯ ಮಾಧ್ಯಮಗ್ರಾಮದಲ್ಲಿರುವ ಕಟ್ಟಡವೊಂದರ ಮೇಲೂ ಈಡಿ ದಾಳಿ ನಡೆಸಿ ಭಾರೀ ಮೊತ್ತದ ನಗದ್ನು ವಶಪಡಿಸಿಕೊಂಡಿದೆ.

ಉದ್ಯಮಿಯ ನಿವಾಸ ಹಾಗೂ ಮಾಧ್ಯಮ ಗ್ರಾಮದಲ್ಲಿರುವ ಕಟ್ಟಡದಲ್ಲಿ ನೋಟು ಏಣಿಕೆಯ ಯಂತ್ರಗಳನ್ನು ಬಳಸಿಕೊಂಡು ವಶಪಡಿಸಿಕೊಳ್ಳಲಾದ ಹಣದ ಏಣಿಕೆಯನ್ನು ನಡೆಸಲಾಗುತ್ತಿದೆ. ಮಾಧ್ಯಮ ಗ್ರಾಮದಲ್ಲಿರುವ ಕಟ್ಟಡವನ್ನು ಲಾಟರಿ ನಿರ್ವಹಣೆಯ ಕಚೇರಿ ಹಾಗೂ ಗೋದಾಮು ಆಗಿ ಬಳಸಲಾಗುತ್ತಿತ್ತು ಎಂದು ಈಡಿ ಅಧಿಕಾರಿಗಳು ತಿಳಿಸಿದ್ದಾರೆ.

ಮಾಧ್ಯಮ ಗ್ರಾಮದ ಕಟ್ಟಡದಿಂದಲೂ ಹಲವಾರು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಈಡಿ ತಿಳಿಸಿದೆ.

ಮಾಧ್ಯಮ ಗ್ರಾಮದ ಕಟ್ಟಡದಿಂದ ಲಾಟರಿ ಟಿಕೆಟ್‌ಗಳನ್ನು ಮುದ್ರಿಸಿ, ವಿತರಿಸಲಾಗುತ್ತಿತ್ತೆಂದು ಈಡಿ ಅಧಿಕಾರಿಗಳು ತಿಳಿಸಿದ್ದಾರೆ. ಈ ಹಗರಣದಲ್ಲಿ ಹಲವಾರು ಪ್ರಭಾವಿ ವ್ಯಕ್ತಿಗಳು ಶಾಮೀಲಾಗಿರುವ ಸಾಧ್ಯತೆಯಿದೆಯೆಂದು ಅವರು ಶಂಕಿಸಿದ್ದಾರೆ. ಕಪ್ಪುಹಣವನ್ನು ಬಿಳುಪುಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದ ತನಿಖೆಯ ಭಾಗವಾಗಿ ಈ ಕಾರ್ಯಾಚರಣೆಯನ್ನು ನಡೆಸಗಿದೆ. ಹಗರಣಕ್ಕೆ ಸಂಬಂಧಿಸಿ ತಮಿಳುನಾಡು, ಪಶ್ಚಿಮಬಂಗಾಳ, ಸಿಕ್ಕಿಂಗಳಲ್ಲಿಯೂ ಶೋಧ ಕಾರ್ಯಾಚರಣೆ ನಡೆಸಲಾಗಿತ್ತು. ಈ ಹಗರಣಕ್ಕೆ ಸಂಬಂಧಿಸಿ ತಮಿಳುನಾಡಿನಿಂದ ಜಾರಿ ನಿರ್ದೇಶನಾಲಯವು 277 ಕೋಟಿ ರೂ.ಗೂ ಅಧಿಕ ಮೊತ್ತದ ಆಸ್ತಿಯನ್ನು ಮುಟ್ಟುಗೋಲು ಹಾಕಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News