ಅತೀ ಶ್ರೀಮಂತರ ಹಿತಾಸಕ್ತಿ ಪೂರೈಸಲು ಬಡವರ ಹಣ ವ್ಯಯಿಸುತ್ತಿರುವ ಪ್ರಧಾನಿ : ರಾಹುಲ್ ಗಾಂಧಿ
ಮಹಾಗಾಮಾ : ಪ್ರಧಾನಿ ನರೇಂದ್ರ ಮೋದಿ ಶತ ಕೋಟ್ಯಧಿಪತಿಗಳ ಹಿತಾಸಕ್ತಿಯನ್ನು ಪೂರೈಸಲು ದೇಶದ ಬಡ ಜನರ ಹಣವನ್ನು ವ್ಯಯಿಸುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶುಕ್ರವಾರ ಆರೋಪಿಸಿದ್ದಾರೆ.
ಜಾರ್ಖಂಡ್ ನ ಗೊಡ್ಡಾ ಜಿಲ್ಲೆಯಲ್ಲಿ ಚುನಾವಣಾ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ಪ್ರತಿಪಕ್ಷ ಮೈತ್ರಿಕೂಟವಾದ ‘ಇಂಡಿಯಾ’ ಸಂವಿಧಾನವನ್ನು ರಕ್ಷಿಸಲು ಹೋರಾಡುತ್ತಿದ್ದರೆ, ಬಿಜೆಪಿ ಸಂವಿಧಾನವನ್ನು ಕಸದ ತೋಟ್ಟಿಗೆ ಎಸೆಯಲು ಪ್ರಯತ್ನಿಸುತ್ತಿದೆ ಎಂದರು.
‘‘ರಾಹುಲ್ ಕೆಂಪು ಪುಸ್ತಕವನ್ನು ತೋರಿಸುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳುತ್ತಾರೆ. ಇದರಲ್ಲಿರುವ ವಿಷಯ ಮುಖ್ಯವಾದುದು, ಬಣ್ಣವಲ್ಲ. ನೀವು ಇದನ್ನು ಓದಿದ್ದರೆ, ದ್ವೇಷವನ್ನು ಹರಡುತ್ತಿರಲಿಲ್ಲ. ಸಮಾಜವನ್ನು ವಿಭಜಿಸುತ್ತಿರಲಿಲ್ಲ’’ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
‘‘ಇದು ಇಂಡಿಯಾ ಮೈತ್ರಿಕೂಟ ಹಾಗೂ ಆರೆಸ್ಸೆಸ್-ಬಿಜೆಪಿ ನಡುವಿನ ಸೈದ್ಧಾಂತಿಕ ಸಂಘರ್ಷ. ನಾವು ಸಂವಿಧಾನವನ್ನು ರಕ್ಷಿಸುತ್ತಿದ್ದೇವೆ. ಬಿಜೆಪಿ-ಆರೆಸ್ಸೆಸ್ ಸಂವಿಧಾನವನ್ನು ಕಸದ ತೊಟ್ಟಿಗೆ ಎಸೆಯಲು ಪ್ರಯತ್ನಿಸುತ್ತಿದೆ. ಅವರು ಹಿಂಸಾಚಾರವನ್ನು ಹರಡುತ್ತಿದ್ದಾರೆ. ಜಾತಿ, ಜನಾಂಗ ಹಾಗೂ ಧರ್ಮದ ಆಧಾರದಲ್ಲಿ ಸಮಾಜವನ್ನು ವಿಭಜಿಸಲು ಪ್ರಯತ್ನಿಸುತ್ತಿದ್ದಾರೆ’’ ಎಂದು ಅವರು ಹೇಳಿದ್ದಾರೆ.
ತಾನು ಮೋದಿ ಅವರಿಗಾಗಲಿ ಅಥವಾ ಅವರ 56 ಇಂಚಿನ ಎದೆಗಾಗಲಿ ಹೆದರುವುದಿಲ್ಲ ಎಂದು ಸಮರ್ಥಿಸಿಕೊಂಡ ರಾಹುಲ್ ಗಾಂಧಿ, ಅವರು ಶತ ಕೋಟ್ಯಧಿಪತಿಗಳ ಕೈಗೊಂಬೆ ಎಂದರು.
ಭೂಮಿ ವಶಪಡಿಸಿಕೊಳ್ಳಲು ಮಹಾರಾಷ್ಟ್ರದ ಉದ್ಧವ್ ಠಾಕ್ರೆ ನೇತೃತ್ವದ ಸರಕಾರವನ್ನು ಉರುಳಿಸಲಾಯಿತು. ಅನಂತರ ಮುಂಬೈಯ ಧಾರಾವಿಯ 1 ಲಕ್ಷ ಕೋ.ರೂ. ಮೌಲ್ಯದ ಭೂಮಿಯನ್ನು ಕೈಗಾರಿಕೋದ್ಯಮಿಗೆ ಹಸ್ತಾಂತರಿಸಲಾಯಿತು ಎಂದು ರಾಹುಲ್ ಗಾಂಧಿ ಹೇಳಿದರು.