ಮನಮೋಹನ್ ಸಿಂಗ್ ರಂತೆ ಬೇರೆ ಯಾರೂ ರೈತರ ಬಗ್ಗೆ ಕಾಳಜಿ ವ್ಯಕ್ತಪಡಿಸಿಲ್ಲ: ಶರದ್ ಪವಾರ್
ಪುಣೆ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ರೈತರ ಕುರಿತು ತುಂಬಾ ಸೂಕ್ಷ್ಮಜ್ಞರಾಗಿದ್ದರು ಹಾಗೂ ಕೆಲವು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ತಿಳಿದು, ಮಹಾರಾಷ್ಟ್ರದ ಅಮರಾವತಿಗೆ ಭೇಟಿ ನೀಡಿದ್ದರು. ಆದರೆ, ಈಗ ರೈತರ ಸಮಸ್ಯೆಗಳ ಕುರಿತು ಯಾರೂ ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂದು ಎನ್‍ಸಿಪಿ ವರಿಷ್ಠ ಶರದ್ ಪವಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಪುಣೆಯಲ್ಲಿ ನಡೆದ ಶೇತ್ಕಾರಿ ಆಕ್ರೋಶ್ ಮೋರ್ಚಾ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
“ಕೆಲವು ರೈತರು ಆತ್ಮಹತ್ಯೆ ಮಾಡಿಕೊಂಡು ಸಾವಿಗೀಡಾದಾಗ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅಮರಾವತಿಗೆ ಭೇಟಿ ನೀಡಿದ್ದು ನನಗಿನ್ನೂ ನೆನಪಿದೆ. ಅವರು ಜನರು ಹಾಗೂ ರೈತರ ಕುರಿತು ತುಂಬಾ ಸೂಕ್ಷ್ಮಜ್ಞರಾಗಿದ್ದರು. ಆ ಸಂದರ್ಭದಲ್ಲಿ ಮನಮೋಹನ್ ಸಿಂಗ್ ಅವರು ರೈತರ ರೂ. 72,000 ಕೋಟಿ ಸಾಲವನ್ನು ಮನ್ನಾ ಕೂಡಾ ಮಾಡಿದ್ದರು” ಎಂದು ಮನಮೋಹನ್ ಸಿಂಗ್ ಸರ್ಕಾರದಲ್ಲಿ ಕೃಷಿ ಸಚಿವರಾಗಿದ್ದ ಶರದ್ ಪವಾರ್ ಹೇಳಿದ್ದಾರೆ.
ಆದರೀಗ ಯಾರೂ ಕೂಡಾ ರೈತರು ಅನುಭವಿಸುತ್ತಿರುವ ಸಮಸ್ಯೆಯತ್ತ ತಿರುಗಿಯೂ ನೋಡುತ್ತಿಲ್ಲ ಎಂದೂ ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ಮಹಾವಿಕಾಸ್ ಅಘಾಡಿಯ ಶಿವಸೇನೆ (ಉದ್ಧವ್ ಠಾಕ್ರೆ ಬಣ)ದ ನಾಯಕರಾದ ಉದ್ಧವ್ ಠಾಕ್ರೆ ಹಾಗೂ ಸಂಜಯ್ ರಾವುತ್, ಕಾಂಗ್ರೆಸ್ ಪಕ್ಷದ ಬಾಲಾಸಾಹೇಬ್ ಥೋರಟ್ ಹಾಗೂ ಎನ್‍ಸಿಪಿ ನಾಯಕರಾದ ಕೊಲ್ಹೆ ಮತ್ತು ಸುಪ್ರಿಯಾ ಸುಳೆ ಉಪಸ್ಥಿತರಿದ್ದರು.