ಕೇರಳದಲ್ಲಿ ಭೀಕರ ರಸ್ತೆ ಅಪಘಾತ: ನವದಂಪತಿ ಸೇರಿ ಒಂದೇ ಕುಟುಂಬದ ನಾಲ್ವರು ಮೃತ್ಯು
ಪಟ್ಟಣಂತಿಟ್ಟ: ಶಬರಿಮಲೆ ಯಾತ್ರಾರ್ಥಿಗಳಿದ್ದ ಬಸ್ ಗೆ ಕಾರು ಢಿಕ್ಕಿಯಾಗಿ ಇತ್ತೀಚೆಗಷ್ಟೆ ವಿವಾಹವಾಗಿದ್ದ ನವದಂಪತಿ ಸೇರಿದಂತೆ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿರುವ ಘಟನೆ ಇಂದು ಮುಂಜಾನೆ ಸುಮಾರು 4.15ರ ವೇಳೆಗೆ ಕೇರಳದ ಪಟ್ಟಣಂತಿಟ್ಟ ಜಿಲ್ಲೆಯಲ್ಲಿ ನಡೆದಿದೆ.
ಪುನಲೂರ್-ಮುವತ್ತುಪುಳ ರಾಜ್ಯ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದ್ದು, ಮೃತರು ಪ್ರಯಾಣಿಸುತ್ತಿದ್ದ ಕಾರು ಶಬರಿಮಲೆ ಯಾತ್ರಾರ್ಥಿಗಳಿದ್ದ ಬಸ್ಸಿಗೆ ಕೊನ್ನಿಯ ಮುರಿಂಜಕ್ಕಲ್ ಬಳಿ ಢಿಕ್ಕಿ ಹೊಡೆದಿದೆ.
ಮೃತರನ್ನು ನಿಖಿಲ್, ಅವರ ಪತ್ನಿ ಅನು, ಅನು ತಂದೆ ಬಿಜು ಪಿ. ಜಾರ್ಜ್ ಹಾಗೂ ನಿಖಿಲ್ ತಂದೆ ಮಥಾಯಿ ಈಪೆನ್ ಎಂದು ಗುರುತಿಸಲಾಗಿದ್ದು, ಅವರೆಲ್ಲ ವಟ್ಟಕುಳಂನ ಮಲಸ್ಸೇರಿ ಗ್ರಾಮದವರು ಎನ್ನಲಾಗಿದೆ.
ಇತ್ತೀಚೆಗಷ್ಟೆ ವಿವಾಹಿತರಾಗಿದ್ದ ನಿಖಿಲ್ ಹಾಗೂ ಅನು, ಮಲೇಶಿಯದಲ್ಲಿ ಮಧುಚಂದ್ರ (ಹನಿಮೂನ್) ಮುಗಿಸಿಕೊಂಡು ತವರಿಗೆ ಮರಳುತ್ತಿದ್ದರು. ಅವರನ್ನು ಕರೆ ತರಲು ಬಿಜು ಹಾಗೂ ಮಥಾಯ್ ವಿಮಾನ ನಿಲ್ದಾಣಕ್ಕೆ ತೆರಳಿದ್ದರು. ಅಪಘಾತ ನಡೆದ ಸ್ಥಳದಿಂದ, ಅವರ ನಿವಾಸವು ಕೇವಲ ಏಳು ಕಿಮೀ ದೂರದಲ್ಲಿತ್ತು ಎನ್ನಲಾಗಿದೆ.
ಬಸ್ ಆಂಧ್ರಪ್ರದೇಶದಿಂದ ಶಬರಿಮಲೆ ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತಿತ್ತು. ಪೊಲೀಸರ ಪ್ರಕಾರ, ಕಾರು ಚಾಲಕನ ಲೋಪದಿಂದಾಗಿ ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ.