ಗುಜರಾತ್: ಸಂಬಂಧಿಯ ಒಡೆತನದ ಸಂಸ್ಥೆಯಲ್ಲಿ ಕೆಲಸಕ್ಕೆ ಹೋಗುವುದನ್ನು ತಪ್ಪಿಸಲು ತನ್ನದೇ ಬೆರಳುಗಳನ್ನು ಕತ್ತರಿಸಿಕೊಂಡ ಯುವಕ!
ಸೂರತ್ : ಯುವಕನೋರ್ವ ತನ್ನ ಸಂಬಂಧಿಕರ ಒಡೆತನದಲ್ಲಿರುವ ವಜ್ರ ಸಂಸ್ಥೆಯಲ್ಲಿ ಕೆಲಸ ಮಾಡುವುದರಿಂದ ತಪ್ಪಿಸಿಕೊಳ್ಳಲು ತನ್ನದೇ ನಾಲ್ಕು ಬೆರಳುಗಳನ್ನು ಚಾಕುವಿನಿಂದ ಕತ್ತರಿಸಿಕೊಂಡ ಘಟನೆ ಗುಜರಾತ್ ನ ಸೂರತ್ ನಗರದಲ್ಲಿ ನಡೆದಿದೆ.
ಮಯೂರ್ ತಾರಾಪರಾ(32) ಎಂಬಾತನೇ ಸ್ವಯಂ ಬೆರಳುಗಳನ್ನು ಕತ್ತರಿಸಿಕೊಂಡ ಯುವಕ. ಈತ ಸೂರತ್ ನ ವರಾಚಾ ಮಿನಿ ಬಜಾರ್ ನಲ್ಲಿರುವ ʼಅನಭ್ ಜೆಮ್ಸ್ʼ ನಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ.
ಮಯೂರ್ ಗೆ ʼಅನಭ್ ಜೆಮ್ಸ್ʼ ನಲ್ಲಿ ಮುಂದುವರಿಯುವುದು ಇಷ್ಟವಿರಲಿಲ್ಲ. ಸಂಬಂಧಿಕರಾದ್ದರಿಂದ ʼನಾನು ಕೆಲಸ ಬಿಟ್ಟು ಹೋಗುತ್ತೇನೆ ಎಂದು ಹೇಳುವ ಧೈರ್ಯವೂ ಆತನಿಗಿರಲಿಲ್ಲʼ. ನನ್ನ ಕೈಬೆರಳುಗಳು ಇಲ್ಲದಿದ್ದರೆ ಅವರೇ ನನ್ನನ್ನು ಕೆಲಸಕ್ಕೆ ಬರಬೇಡ ಎಂದು ಹೇಳ್ತಾರೆ ಎಂದು ಆತ ತನ್ನ ಕೈ ಬೆರಳುಗಳನ್ನೇ ಕತ್ತರಿಸಿಕೊಂಡಿದ್ದ ಎಂದು ತನಿಖೆ ಬಳಿಕ ಸೂರತ್ ನ ಕ್ರೈಂ ಬ್ರಾಂಚ್ ಪೊಲೀಸರು ಹೇಳಿದ್ದಾರೆ.
ಡಿಸೆಂಬರ್ 8ರಂದು ತನ್ನ ಸ್ನೇಹಿತನ ಮನೆಗೆ ಮೋಟಾರ್ ಸೈಕಲ್ ನಲ್ಲಿ ಹೋಗುತ್ತಿದ್ದಾಗ ಅಮ್ರೋಲಿಯ ವೇದಾಂತ ವೃತ್ತದ ಬಳಿ ರಿಂಗ್ ರೋಡ್ ನಲ್ಲಿ ತಲೆ ತಿರುಗಿ ಬಿದ್ದಿದ್ದೇನೆ. 10 ನಿಮಿಷಗಳ ನಂತರ ಪ್ರಜ್ಞೆ ಬಂದು ನೋಡಿದಾಗ ಎಡಗೈಯ ನಾಲ್ಕು ಬೆರಳುಗಳು ತುಂಡಾಗಿದ್ದವು ಎಂದು ಮಯೂರ್ ಪೊಲೀಸರಿಗೆ ಮೊದಲು ಸುಳ್ಳು ಹೇಳಿದ್ದ. ಆ ಸಮಯದಲ್ಲಿ ಮಾಟ ಮಂತ್ರಗಳ ಉದ್ದೇಶಕ್ಕೆ ಬೆರಳುಗಳನ್ನು ಕತ್ತರಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದರು.
ಈ ಕುರಿತು ಅಮ್ರೋಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಧಿಕಾರಿಗಳು ಸಿಸಿಟಿವಿ ದೃಶ್ಯಾವಳಿಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಹೆಚ್ಚಿನ ತನಿಖೆ ನಡೆಸಿದಾಗ ಮಯೂರ್ ಸ್ವಯಂ ಬೆರಳುಗಳನ್ನು ಕತ್ತರಿಸಿಕೊಂಡಿರುವುದು ಬಯಲಾಗಿದೆ.