ಸಂಭಲ್: ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ʼಪ್ರಾಚೀನʼ ಶಿವ ದೇಗುಲ ಪತ್ತೆ
ಬರೇಲಿ: ಸಂಭಲ್ ಜಿಲ್ಲೆಯ ಮಹ್ಮೂದ್ ಖಾನ್ ಸರೈ ಪ್ರದೇಶದ ಶಾಹಿ ಜಾಮಾ ಮಸೀದಿ ಪಕ್ಕದ ಹಿಂದೂ ಕುಟುಂಬಕ್ಕೆ ಸೇರಿದ ಮನೆಯೊಂದರಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ʼಪ್ರಾಚೀನʼ ಶಿವ ದೇಗುಲವೊಂದು ಪತ್ತೆಯಾಗಿದೆ. 1978ರಲ್ಲಿ ನಡೆದ ಕೋಮುಗಲಭೆ ವೇಳೆ ಈ ಕುಟುಂಬ ಮನೆಗೆ ಬೀಗ ಜಡಿದು ತ್ಯಜಿಸಿದ್ದ ಮನೆಯಲ್ಲಿ ಈ ದೇಗುಲ ಶನಿವಾರ ಬೆಳಿಗ್ಗೆ ಪತ್ತೆಯಾಗಿದೆ. ಈ ಮನೆಯನ್ನು ಹಲವು ದಶಕಗಳಿಂದ ಒತ್ತುವರಿ ಮಾಡಿಕೊಂಡಿದ್ದರು ಎನ್ನಲಾಗಿದ್ದು, ಇದರ ಮಾಲೀಕತ್ವದ ಬಗ್ಗೆ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.
ಹಿಂದೂ ಸಭಾ ಮುಖ್ಯಸ್ಥ ವಿಷ್ಣು ಶರಣ್ ರಸ್ತೋಗಿ ಎಂಬುವವರು ಈ ದೇವಾಲಯ ಇರುವ ಬಗ್ಗೆ ಮಾಹಿತಿ ನೀಡಿದ್ದರು. ದೇವಾಲಯ ಪತ್ತೆಯಾಗುತ್ತಿದ್ದಂತೆಯೇ ಬಲಪಂಥೀಯ ಸಂಘಟನೆಗಳ ಮುಖಂಡರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.
"ದೇಗುಲವನ್ನು ಸ್ವಚ್ಛಗೊಳಿಸಿ ದೇವಸ್ಥಾನದ ಪ್ರಾಚೀನತೆಯನ್ನು ನಿರ್ಧರಿಸಲು ಕಾರ್ಬನ್ ಡೇಟಿಂಗ್ ಕೈಗೊಳ್ಳುವಂತೆ ಭಾರತದ ಪ್ರಾಚ್ಯವಸ್ತು ಸರ್ವೇಕ್ಷಣಾಲಯಕ್ಕೆ ಸೂಚಿಸಲಾಗಿದೆ. ಕೆಲ ಮಂದಿ ಈ ದೇವಾಲಯವನ್ನು ಅತಿಕ್ರಮಿಸಿಕೊಂಡು ಆ ಜಾಗದಲ್ಲಿ ಮನೆ ಕಟ್ಟಿ ವಾಸವಿದ್ದರು ಎಂದು ತನಿಖೆಯಿಂದ ತಿಳಿದು ಬಂದಿದೆ. ಕೆಲ ಕಾರಣಗಳಿಂದ ಇಲ್ಲಿ ವಾಸವಿದ್ದ ಹಿಂದೂ ಕುಟುಂಬ ಇಲ್ಲಿಂದ ತೆರಳಿತ್ತು ಹಾಗೂ ಆ ಬಳಿಕ ಅದು ಮುಚ್ಚಿತ್ತು. ದೇಗುಲದಲ್ಲಿ ಶಿವ ಮತ್ತು ಹನುಮಾನ್ ವಿಗ್ರಹಗಳಿವೆ. ಇದನ್ನು ಸರಿಯಾದ ಮಾಲೀಕರಿಗೆ ಹಸ್ತಾಂತರಿಸಿ, ಒತ್ತುವರಿ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಎಸ್ಪಿ ಶ್ರೀಶಚಂದ್ರ ಹೇಳಿದ್ದಾರೆ.
ಜಿಲ್ಲಾಧಿಕಾರಿ ರಾಜೇಂದ್ರ ಪೆನ್ಸಿಯಾ ಮತ್ತು ಎಸ್ಪಿ ಕೃಷ್ಣನ್ ಕುಮಾರ್ ಬಿಷ್ಣೋಯಿ, ಸ್ಥಳದ ಸ್ವಚ್ಛತಾ ಕಾರ್ಯದ ಉಸ್ತುವಾರಿ ವಹಿಸಿದರು.