ನಕಲಿ ಕೋರ್ಟ್ ರೂಂ ಸೃಷ್ಟಿಸಿ ಸಿಜೆಐ ಸೋಗಿನಲ್ಲಿ ವಿಚಾರಣೆ | ಉದ್ಯಮಿಯೋರ್ವರಿಗೆ 7 ಕೋಟಿ ರೂ. ವಂಚನೆ!
ಹೊಸದಿಲ್ಲಿ: ಸೈಬರ್ ವಂಚಕರ ಗ್ಯಾಂಗ್ ನಕಲಿ ಕೋರ್ಟ್ ರೂಂ ಸೃಷ್ಟಿಸಿ ಸಿಜೆಐ ಸೋಗಿನಲ್ಲಿ ವಿಚಾರಣೆ ನಡೆಸಿ ಉದ್ಯಮಿಯೋರ್ವರಿಗೆ 7 ಕೋಟಿ ರೂ. ವಂಚಿಸಿರುವ ಘಟನೆ ವರದಿಯಾಗಿದೆ.
ಕೈಗಾರಿಕೋದ್ಯಮಿ ಮತ್ತು ವರ್ಧಮಾನ್ ಗ್ರೂಪ್ ನ ಮುಖ್ಯಸ್ಥ ಎಸ್ಪಿ ಓಸ್ವಾಲ್ ಅವರಿಗೆ ಸೈಬರ್ ವಂಚಕರು ಈ ಬಹುಕೋಟಿ ವಂಚನೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
indianexpress ವರದಿಯ ಪ್ರಕಾರ, ಸಿಬಿಐ ಅಧಿಕಾರಿಗಳ ಸೋಗಿನಲ್ಲಿ ಬಂದ ವಂಚಕರು, ಕಳೆದ ಸೆಪ್ಟೆಂಬರ್ ನಲ್ಲಿ ಜಾರಿ ನಿರ್ದೇಶನಾಲಯ(ಈಡಿ)ಯಿಂದ ಬಂಧಿಸಲ್ಪಟ್ಟ ಜೆಟ್ ಏರ್ವೇಸ್ ಸಂಸ್ಥಾಪಕ ನರೇಶ್ ಗೋಯಲ್ ಗೆ ಸಂಬಂಧಿಸಿದ ಹಣ ವರ್ಗಾವಣೆ ಪ್ರಕರಣದಲ್ಲಿ ಓಸ್ವಾಲ್ ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದರು.
ನಕಲಿ ಪಾಸ್ಪೋರ್ಟ್ ಗಳು ಮತ್ತು ಡೆಬಿಟ್ ಕಾರ್ಡ್ ಗಳ ಮೂಲಕ ಮಲೇಷ್ಯಾಕ್ಕೆ ಪಾರ್ಸೆಲ್ ಕಳುಹಿಸಲು ಓಸ್ವಾಲ್ ತಮ್ಮ ಆಧಾರ್ ಕಾರ್ಡ್ ನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿ ನಕಲಿ ಬಂಧನ ವಾರಂಟ್ ಗಳೊಂದಿಗೆ ವಂಚಕರು ಬೆದರಿಕೆ ಹಾಕಿದ್ದಾರೆ. ಇದಲ್ಲದೆ ವಂಚಕರು ಸ್ಕೈಪ್ ಕರೆ ಮೂಲಕ ನಕಲಿ ಕೋರ್ಟ್ ರೂಂ ಸೃಷ್ಟಿಸಿ ಸುಪ್ರೀಂ ಕೋರ್ಟ್ ನ ಸಿಜೆಐ ಸೋಗಿನಲ್ಲಿ ವಿಚಾರಣೆ ನಡೆಸಿದ್ದಾರೆ. ಸುಪ್ರೀಂಕೋರ್ಟಿನದ್ದು ಎನ್ನಲಾದ ನಕಲಿ ಆದೇಶದಲ್ಲಿ 7 ಕೋಟಿ ರೂ. ಜಮೆ ಮಾಡುವಂತೆ ಹೇಳಲಾಗಿತ್ತು.
ಓಸ್ವಾಲ್ ಅವರು ಈ ಬಗ್ಗೆ ಸಂಶಯ ಬಂದು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಕುರಿತು ಎಫ್ ಐಆರ್ ದಾಖಲಾದ ಬಳಿಕ ಪೊಲೀಸರು ವಂಚಕರ ಗ್ಯಾಂಗ್ ನ್ನು ಗುರುತಿಸಿ ಗುವಾಹಟಿಯಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಅಸ್ಸಾಂ, ಪಶ್ಚಿಮ ಬಂಗಾಳ ಮತ್ತು ದಿಲ್ಲಿಯಾದ್ಯಂತ ಈ ಗ್ಯಾಂಗ್ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿರುವ ಅಧಿಕಾರಿಗಳು ಇನ್ನೂ ಏಳು ಶಂಕಿತರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಸೌಜನ್ಯ : barandbench.com