ಪ್ರಸಕ್ತ ವಿತ್ತವರ್ಷದ ಮೊದಲ ಆರು ತಿಂಗಳಲ್ಲಿ 42,035 ಕೋಟಿ ರೂ. ಸಾಲಗಳನ್ನು ʼರೈಟ್ ಆಫ್ʼ ಮಾಡಿದ ಸರಕಾರಿ ಬ್ಯಾಂಕುಗಳು

Update: 2024-12-10 11:09 GMT

ಸಾಂದರ್ಭಿಕ ಚಿತ್ರ | PC : PTI

ಹೊಸದಿಲ್ಲಿ: ಪ್ರಸಕ್ತ ಹಣಕಾಸು ವರ್ಷದ ಮೊದಲ ಆರು ತಿಂಗಳುಗಳಲ್ಲಿ ಸಾರ್ವಜನಿಕ ವಲಯದ ಬ್ಯಾಂಕ್(ಪಿಎಸ್‌ಬಿ)ಗಳು 42,035 ಕೋಟಿ ರೂ.ಸಾಲಗಳನ್ನು ರೈಟ್ ಆಫ್ ಮಾಡಿವೆ ಅಥವಾ ತಮ್ಮ ಬ್ಯಾಲೆನ್ಸ್ ಶೀಟ್‌ಗಳಿಂದ ತೊಡೆದುಹಾಕಿವೆ ಎಂದು ಕೇಂದ್ರ ಸಹಾಯಕ ವಿತ್ತಸಚಿವ ಪಂಕಜ್ ಚೌಧರಿ ಅವರು ಸೋಮವಾರ ಸಂಸತ್ತಿನಲ್ಲಿ ತಿಳಿಸಿದರು.

ಎಪ್ರಿಲ್-ಸೆಪ್ಟಂಬರ್ ಅವಧಿಯಲ್ಲಿ ಎಸ್‌ಬಿಐ 8,312 ಕೋಟಿ ರೂ.,ಪಂಜಾಬ್ ನ್ಯಾಷನಲ್ ಬ್ಯಾಂಕ್ 8,061 ಕೋಟಿ ರೂ.,ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ 6,344 ಕೋಟಿ ರೂ. ಮತ್ತು ಬ್ಯಾಂಕ್ ಆಫ್ ಬರೋಡಾ 5,925 ಕೋಟಿ ರೂ.ಸಾಲಗಳನ್ನು ರೈಟ್ ಆಫ್ ಮಾಡಿವೆ ಎಂದು ಅವರು ಲಿಖಿತ ಉತ್ತರದಲ್ಲಿ ತಿಳಿಸಿದರು.

ರೈಟ್ ಆಫ್ ಮಾಡುವುದು ಎಂದರೆ ಸಾಲ ಮನ್ನಾ ಅಲ್ಲ. ಸಾಲಗಾರರು ತಮ್ಮ ಬಾಧ್ಯತೆಗಳಿಂದ ಮುಕ್ತರಾಗುವುದಿಲ್ಲ, ಅವರು ಬ್ಯಾಂಕುಗಳಿಗೆ ಸಾಲ ಮರುಪಾವತಿ ಮಾಡಲು ಹೊಣೆಗಾರರಾಗಿರುತ್ತಾರೆ ಮತ್ತು ಬ್ಯಾಂಕುಗಳು ತಮಗೆ ಲಭ್ಯವಿರುವ ವಿವಿಧ ಕಾರ್ಯವಿಧಾನಗಳ ಮೂಲಕ ಸಾಲ ವಸೂಲಿ ಕ್ರಮಗಳನ್ನು ಮುಂದುವರಿಸುತ್ತವೆ ಎಂದು ಅವರು ವಿವರಿಸಿದರು.

ಪ್ರಸಕ್ತ ಹಣಕಾಸು ವರ್ಷದ ಎಪ್ರಿಲ್-ಸೆಪ್ಟಂಬರ್ ಅವಧಿಯಲ್ಲಿ ಪಿಎಸ್‌ಬಿಗಳು 42,035 ಕೋಟಿ ರೂ.ಸಾಲಗಳನ್ನು ರೈಟ್ ಆಫ್ ಮಾಡಿದ್ದು, ಸಾಲ ವಸೂಲಾತಿ ಮೊತ್ತ 37,253 ಕೋಟಿ ರೂ.ಗಳಾಗಿವೆ ಎಂದರು.

ಪಿಎಸ್‌ಬಿಗಳು 2022-23ರಲ್ಲಿ 1.18 ಲಕ್ಷ ಕೋಟಿ ರೂ.ಗಳ ಸಾಲಗಳನ್ನು ರೈಟ್ ಆಫ್ ಮಾಡಿದ್ದರೆ 2023-24ರಲ್ಲಿ ಇದು 1.14 ಲಕ್ಷ ಕೋಟಿ ರೂ.ಗಳಿಗೆ ಇಳಿಕೆಯಾಗಿದೆ ಎಂದೂ ಚೌಧರಿ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News