ಅದಾನಿ ವಿದ್ಯುಚ್ಛಕ್ತಿ ಘಟಕದ ಬಳಿ ಘೋರ ಪರಿಸರ ನಿಯಮಗಳ ಉಲ್ಲಂಘನೆ: ಆರೋಪ
ರಾಂಚಿ: ಗೊಡ್ಡಾದ ಬಳಿಯಿರುವ ಅದಾನಿ ವಿದ್ಯುಚ್ಛಕ್ತಿ ಘಟಕದಿಂದ ಘೋರ ಪರಿಸರ ನಿಯಮಗಳ ಉಲ್ಲಂಘನೆಯಾಗಿದೆ ಎಂದು ಕಾಂಗ್ರೆಸ್ ಶಾಸಕ ಪ್ರದೀಪ್ ಯಾದವ್ ಝಾರ್ಖಂಡ್ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ಪತ್ರ ಬರೆದಿದ್ದಾರೆ ಎಂದು newindianexpress.com ವರದಿ ಮಾಡಿದೆ.
ಯಾದವ್ ಅವರ ಪ್ರಕಾರ, ಅದಾನಿ ವಿದ್ಯುಚ್ಛಕ್ತಿ ಘಟಕದಲ್ಲಿ ಉತ್ಪಾದನೆಯಾಗುವ ವಿದ್ಯುಚ್ಛಕ್ತಿಯ ಬೆಲೆ ಆಸ್ಟ್ರೇಲಿಯಾದಿಂದ ಆಮದು ಮಾಡಿಕೊಳ್ಳುವ ಕಲ್ಲಿದ್ದಲು ದರವನ್ನು ಅವಲಂಬಿಸಿದೆ. ಆದರೆ, ಅದಾನಿ ಕಂಪನಿಯು ಪಶ್ಚಿಮ ಬಂಗಾಳದ ಝಾರಿಯಾ ವಲಯದ ಕಲ್ಲಿದ್ದಲನ್ನು ಬಳಸುತ್ತಿದೆ ಎಂದು ಆರೋಪಿಸಿದ್ದಾರೆ.
ಇಷ್ಟು ಮಾತ್ರವಲ್ಲದೆ, ಕಲ್ಲಿದ್ದಲನ್ನು ಸಾಗಣೆ ಮಾಡಲು ಗ್ರಾಮಾಂತರ ಪ್ರದೇಶಗಳ ರಸ್ತೆಗಳನ್ನು ಬಳಸುತ್ತಿರುವುದರಿಂದ ಪದೇ ಪದೇ ಅಪಘಾತಗಳಾಗುತ್ತಿದ್ದು, ಜೀವಹಾನಿಗೆ ಕಾರಣವಾಗುತ್ತಿದೆ. ತನ್ನ ವಿದ್ಯುಚ್ಛಕ್ತಿ ಘಟಕದ ಅಗತ್ಯಕ್ಕಾಗಿ ಕಂಪನಿಯು ಖಾಸಗಿ ಜಮೀನುಗಳಲ್ಲಿ ಹಲವಾರು ಕೊಳವೆ ಬಾವಿಗಳನ್ನು ಕೊರೆದಿದ್ದು, ಇದರಿಂದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗಮನಾರ್ಹ ಪ್ರಮಾಣದಲ್ಲಿ ಅಂತರ್ಜಲ ಕುಸಿತವುಂಟಾಗಿದೆ ಎಂದೂ ಯಾದವ್ ತಮ್ಮ ಪತ್ರದಲ್ಲಿ ಆರೋಪಿಸಿದ್ದಾರೆ.
ಈ ಮೊದಲು ಕಂಪನಿಯು ಭರವಸೆ ನೀಡಿದ್ದಂತೆ ಸಾಹಿಬ್ ಗಂಜ್ ನಲ್ಲಿರುವ ಗಂಗಾ ನದಿಯಿಂದ ನೀರನ್ನು ಬಳಸುತ್ತಿಲ್ಲ ಎಂದೂ ಅವರು ದೂರಿದ್ದಾರೆ.
“ಅರಣ್ಯ ಪರಿಸರ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ನವೆಂಬರ್ 2020ರ ಆದೇಶ ಹಾಗೂ ನಿಯಮಾವಳಿಗಳು ಮತ್ತು ಪರಿಸರ ಪರವಾನಗಿ ಅರ್ಜಿಯ ಪ್ರಕಾರ, ವಿದ್ಯುಚ್ಛಕ್ತಿ ಘಟಕಗಳು ತಮ್ಮ ಕಲ್ಲಿದ್ದಲು ಮೂಲ ಹಾಗೂ ಒಂದು ವೇಳೆ ಕಲ್ಲಿದ್ದಲು ಮೂಲದಲ್ಲಿ ಏನಾದರೂ ಕೊರತೆ ಇದ್ದರೆ, ಈ ಕುರಿತು ಸಂಪೂರ್ಣ ಪಾರದರ್ಶಕತೆನ್ನು ಕಾಯ್ದುಕೊಳ್ಳಬೇಕಾಗುತ್ತದೆ” ಎಂದು ಪ್ರದೀಪ್ ಯಾದವ್ ತಮ್ಮ ಪತ್ರದಲ್ಲಿ ಹೇಳಿದ್ದಾರೆ. ಒಂದು ವೇಳೆ ಏನಾದರೂ ಬದಲಾವಣೆ ಇದ್ದರೆ, ಕಲ್ಲಿದ್ದಲು ಮೂಲದ ಕುರಿತ ಮಾಹಿತಿಯನ್ನು ಸಂಬಂಧಿಸಿದ ಸಚಿವಾಲಯದೊಂದಿಗೆ ಕೂಡಲೇ ಹಂಚಿಕೊಳ್ಳಬೇಕಾಗುತ್ತದೆ” ಎಂದೂ ಅವರು ತಿಳಿಸಿದ್ದಾರೆ.
ಗೊಡ್ಡಾದಲ್ಲಿನ ಅದಾನಿ ವಿದ್ಯುಚ್ಛಕ್ತಿ ಘಟಕದ ಪರಿಸರ ಪರವಾನಗಿಯ ಕುರಿತು ಕಟ್ಟುನಿಟ್ಟಿನ ತನಿಖೆ ನಡೆಸಬೇಕು ಹಾಗೂ ಈ ಕುರಿತು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಪ್ರದೀಪ್ ಯಾದವ್ ಆಗ್ರಹಿಸಿದ್ದಾರೆ. ಈ ಪತ್ರದ ಪ್ರತಿಯನ್ನು ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ಕೆ.ಸಿ.ವೇಣುಗೋಪಾಲ್, ಝಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್, ಇಂಧನ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಅರಣ್ಯ ಪರಿಸರ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಪ್ರಧಾನ ಕಾರ್ಯದರ್ಶಿ, ಬೃಹತ್ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ, ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ ಅಧ್ಯಕ್ಷರು ಹಾಗೂ ಝಾರ್ಖಂಡ್ ಪರಿಸರ ಮಾಲಿನ್ಯ ಮಂಡಳಿಗೆ ರವಾನಿಸಿದ್ದಾರೆ.