ಮಹಾರಾಷ್ಟ್ರ | ರಸಗೊಬ್ಬರ ಘಟಕದಲ್ಲಿ ಅನಿಲ ಸೋರಿಕೆ ; ಮೂರು ಮಂದಿ ಮೃತ್ಯು, 9 ಮಂದಿ ಅಸ್ವಸ್ಥ
ಮುಂಬೈ : ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಲ್ಲಿ ರಸಗೊಬ್ಬರ ಘಟಕದ ರಿಯಾಕ್ಟರ್ ಸ್ಪೋಟಗೊಂಡ ಬಳಿಕ ಅನಿಲ ಸೋರಿಕೆಯಾದ ಪರಿಣಾಮ ಇಬ್ಬರು ಮಹಿಳೆಯರು ಸೇರಿದಂತೆ ಮೂವರು ಮೃತಪಟ್ಟಿದ್ದಾರೆ. 9 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಜಿಲ್ಲೆಯ ಕಡೇಗಾಂವ್ ತಾಲೂಕಿನ ಶಲಗಾಂವ್ ಎಂಐಡಿಸಿಯಲ್ಲಿರುವ ಮ್ಯಾನ್ಮಾರ್ ರಾಸಾಯನಿಕ ಕಂಪೆನಿಯಲ್ಲಿ ಗುರುವಾರ ಸಂಜೆ ಸುಮಾರು 6.30ಕ್ಕೆ ಈ ಘಟನೆ ಸಂಭವಿಸಿದೆ ಎಂದು ಅವರು ಹೇಳಿದ್ದಾರೆ.
ರಾಸಾಯನಿಕ ಹೊಗೆಯನ್ನು ಹೊರ ಸೂಸುವ ಸಂದರ್ಭ ಗೊಬ್ಬರ ಘಟಕ ಸ್ಫೋಟಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.
‘‘ಅನಿಲ ಸೋರಿಕೆಯಿಂದ ಘಟಕದಲ್ಲಿದ್ದ 12 ಮಂದಿ ಅಸ್ವಸ್ಥರಾದರು. ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು. ಅವರಲ್ಲಿ ಇಬ್ಬರು ಮಹಿಳಾ ಕಾರ್ಮಿಕರು ಹಾಗೂ ಓರ್ವ ಭದ್ರತಾ ಸಿಬ್ಬಂದಿ ಮೃತಪಟ್ಟರು. ಇತರ 9 ಮಂದಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ’’ ಎಂದು ಕಡೇಗಾಂವ್ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿ ಸಂಗ್ರಾಮ್ ಶೇವಾಲೆ ತಿಳಿಸಿದ್ದಾರೆ.
ಗೊಬ್ಬರದ ಘಟಕದಿಂದ ಹೊರ ಸೂಸಿದ ಅನಿಲ ಅಮೋನಿಯಾ ಎಂದು ಸಾಂಗ್ಲಿಯ ಪೊಲೀಸ್ ಅಧೀಕ್ಷಕ ಸಂದೀಪ್ ಘುಗೆ ತಿಳಿಸಿದ್ದಾರೆ.
ಅಸ್ವಸ್ಥಗೊಂಡವರಲ್ಲಿ 7 ಮಂದಿಯನ್ನು ಕರಾಡ್ನಲ್ಲಿರುವ ಸಹ್ಯಾದ್ರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಐವರನ್ನು ಅದೇ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ದಾಖಲಿಸಲಾಗಿದೆ ಎಂದು ಇನ್ನೊಬ್ಬರು ಅಧಿಕಾರಿ ತಿಳಿಸಿದ್ದಾರೆ.
ದುರಂತದಲ್ಲಿ ಮೃತಪಟ್ಟ ಇಬ್ಬರು ಮಹಿಳೆಯರನ್ನು ಸಾಂಗ್ಲಿ ಜಿಲ್ಲೆಯ ಯೆತೆಗಾಂವ್ನ ಸುಚಿತಾ ಉಥಾಲೆ (50) ಹಾಗೂ ಸತಾರ ಜಿಲ್ಲೆಯ ಮಾಸೂರ್ನ ನೀಲಂ ರೆತ್ರೇಕರ್ (26) ಎಂದು ಗುರುತಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.