ಇಂಫಾಲ್ ಕಣಿವೆಯಲ್ಲಿ ಆಫ್ಸಾ ಜಾರಿಗೊಳಿಸಿ : ಕುಕಿ ಶಾಸಕರ ಆಗ್ರಹ
ಗುವಾಹಟಿ : ಹಿಂಸಾಪೀಡಿತ ಮಣಿಪುರದಲ್ಲಿ ಶಾಂತಿ ಮರುಸ್ಥಾಪನೆಯ ಪ್ರಯತ್ನಗಳನ್ನು ಆರಂಭಿಸಲು ರಾಜಕೀಯ ಮಾತುಕತೆ ನಡೆಸುವಂತೆ ಬಿಜೆಪಿಗೆ ಸೇರಿದ ಏಳು ಶಾಸಕರು ಸೇರಿದಂತೆ 10 ಮಂದಿ ಕುಕಿ ಶಾಸಕರು ಕೇಂದ್ರ ಹಾಗೂ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಮುಖ್ಯಮಂತ್ರಿ ಬಿರೇನ್ ಸಿಂಗ್ ಆಯೋಜಿಸಿದ್ದ ಎನ್ ಡಿಎ ಸಚಿವರು ಮತ್ತು ಶಾಸಕರ ಸಭೆಯಲ್ಲಿ ಎಂಟು ನಿರ್ಣಯಗಳನ್ನು ಆಂಗೀಕರಿಸಿದ ಬೆನ್ನಲ್ಲೇ ಈ ಆಗ್ರಹ ಮುಂದಿಟ್ಟಿದ್ದಾರೆ. ಕುಕಿ ಶಾಸಕರು ಸಭೆಯನ್ನು ಬಹಿಷ್ಕರಿಸಿದ್ದರು.
ರಾಜಕೀಯ ಉದ್ದೇಶದಿಂದ ರಾಜ್ಯ ಸರ್ಕಾರ ಉದ್ವಿಗ್ನತೆಯನ್ನು ಹೆಚ್ಚಿಸುತ್ತಿದೆ ಎಂದು ಅವರು ಆಪಾದಿಸಿದ್ದಾರೆ. ಸಿಎಂ ಅವರ ಅಲುಗಾಡುತ್ತಿರುವ ಕುರ್ಚಿಯನ್ನು ರಕ್ಷಿಸಲು ಈ ಕೃತ್ಯ ಎಸಗಲಾಗುತ್ತಿದೆ ಎನ್ನುವುದು ಅವರ ಆರೋಪ.
ನವೆಂಬರ್ 14ರಂದು ಆಫ್ಸಾ ಮರು ಜಾರಿಗೊಳಿಸಿದ ಕೇಂದ್ರದ ಕ್ರಮದ ಬಗ್ಗೆ ಪ್ರತಿಕ್ರಿಯಿಸಿ, ಇದರ ಪರಾಮರ್ಶೆಯ ಅಗತ್ಯವಿದೆ ಎಂದು ಆಗ್ರಹಿಸಿದ್ದಾರೆ. 1958ರ ಈ ಕಾನೂನು ಸೈನಿಕರಿಗೆ ಗಡಿ ನುಸುಳುವಿಕೆ/ ಭಯೊತ್ಪಾದನೆ ವಿರುದ್ಧ ಕ್ರಮ ಕೈಗೊಳ್ಳಲು ವಿಶೇಷಾಧಿಕಾರವನ್ನು ನೀಡುತ್ತದೆ.
ಇಂಫಾಲ್ ಕಣಿವೆಯಲ್ಲಿ ಬಾಕಿ ಇರುವ 13 ಪೊಲೀಸ್ ಠಾಣೆಗಳ ವ್ಯಾಪ್ತಿಗೂ ಆಫ್ಸಾ ವಿಸ್ತರಿಸಬೇಕು ಎಂದು ಪ್ರತಿಪಾದಿಸಿರುವ ಶಾಸಕರು, ರಾಜ್ಯದಲ್ಲಿ ಜನಾಂಗೀಯ ಸಂಘರ್ಷ ಆರಂಭವಾದ ಕಳೆದ ವರ್ಷದ ಮೇ 3ರಿಂದೀಚೆಗೆ ಮೈತೈ ಉಗ್ರರು ಅಪಹರಿಸಿದ 6 ಸಾವಿರ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲು ಇದು ಅನಿವಾರ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ. ಹಿಂಸೆಯನ್ನು ಮೊಟಕುಗೊಳಿಸಲು ಈ ಕ್ರಮ ಅನಿವಾರ್ಯ ಎಂದು ಹೇಳಿದ್ದಾರೆ.
ಆರು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಆಫ್ಸಾ ಮರುಜಾರಿಗೊಳಿಸಿದ ಕ್ರಮವನ್ನು ಪರಾಮರ್ಶಿಸುವಂತೆ ಸೋಮವಾರದ ಸಭೆಯಲ್ಲಿ ಕೈಗೊಂಡ ನಿರ್ಣಯದಲ್ಲಿ ಆಗ್ರಹಿಸಲಾಗಿತ್ತು