2024ನೇ ಸಾಲಿನಲ್ಲಿ ಸಲ್ಲಿಕೆಯಾಗಿರುವ 7 ಕೋಟಿ ಉದ್ಯೋಗ ಅರ್ಜಿಗಳ ಪೈಕಿ 2.8 ಕೋಟಿಯಷ್ಟು ಅರ್ಜಿಗಳು ಮಹಿಳೆಯರದ್ದು : ವರದಿ
ಹೊಸದಿಲ್ಲಿ : 2024ನೇ ಸಾಲಿನಲ್ಲಿ ಸಲ್ಲಿಕೆಯಾಗಿರುವ 7 ಕೋಟಿ ಉದ್ಯೋಗ ಅರ್ಜಿಗಳ ಪೈಕಿ 2.8 ಕೋಟಿ ಅರ್ಜಿಗಳು ಮಹಿಳೆಯರದ್ದಾಗಿದ್ದು, 2023ನೇ ಸಾಲಿಗೆ ಹೋಲಿಸಿದರೆ ಶೇ. 20ರಷ್ಟು ಏರಿಕೆಯಾಗಿದೆ ಎಂದು ಇತ್ತೀಚಿನ ವರದಿಯೊಂದರಲ್ಲಿ ಹೇಳಲಾಗಿದೆ.
Apna.co ಉದ್ಯೋಗ ವೇದಿಕೆ ನಡೆಸಿರುವ ‘India at Work 2024’ ಸಮೀಕ್ಷೆಯು ಭಾರತದ ಉದ್ಯೋಗ ನೇಮಕಾತಿಯಲ್ಲಿ ಆಗುತ್ತಿರುವ ಐತಿಹಾಸಿಕ ಬದಲಾವಣೆ ಕುರಿತು ಬೆಳಕು ಚೆಲ್ಲಿದ್ದು, ಉದ್ಯೋಗ ಸ್ಥಳಗಳಲ್ಲಿನ ಭಾಗಿದಾರಿಕೆಯಲ್ಲಿ ಮಹಿಳೆಯರು ಮುಂಚೂಣಿಗೆ ಬರುತ್ತಿರುವುದನ್ನೂ ಎತ್ತಿ ತೋರಿಸಿದೆ.
ವರದಿಯ ಪ್ರಕಾರ, ಈ ವರ್ಷ ಒಟ್ಟು 7 ಕೋಟಿ ಉದ್ಯೋಗ ಅರ್ಜಿಗಳು ಸಲ್ಲಿಕೆಯಾಗಿದ್ದು, ಈ ವರ್ಷವೊಂದರಲ್ಲೇ ಅರ್ಜಿಗಳ ಸಲ್ಲಿಕೆಯಲ್ಲಿ ಶೇ. 25ರಷ್ಟು ಏರಿಕೆಯಾಗಿದೆ ಎನ್ನಲಾಗಿದೆ. ಉದ್ಯೋಗ ಸ್ಥಳಗಳಲ್ಲಿ ಮಹಿಳೆಯರು ಹಾಗೂ ಯುವಕರ ಭಾಗಿದಾರಿಕೆ ಏರಿಕೆಯಾಗಿರುವುದು ಇದಕ್ಕೆ ಪ್ರಮುಖ ಕಾರಣ ಎಂದು ಹೇಳಲಾಗಿದೆ.
“ಒಟ್ಟು 7 ಕೋಟಿ ಉದ್ಯೋಗ ಅರ್ಜಿಗಳ ಪೈಕಿ ಮಹಿಳೆಯರು 2.8 ಕೋಟಿ ಅರ್ಜಿ ಸಲ್ಲಿಸಿದ್ದಾರೆ. ಮೊದಲ ದರ್ಜೆಯ ನಗರಗಳಾದ ದಿಲ್ಲಿ-ಎನ್ಸಿಆರ್, ಬೆಂಗಳೂರು ಹಾಗೂ ಮುಂಬೈಗಳಲ್ಲಿ ಈ ಪ್ರಮಾಣ 1.52 ಕೋಟಿ ಅರ್ಜಿಗಳೊಂದಿಗೆ ಏರಿಕೆಯಾಗಿದ್ದರೆ, ದ್ವಿತೀಯ ದರ್ಜೆಯ ನಗರಗಳಾದ ಜೈಪುರ, ಲಕ್ನೊ ಹಾಗೂ ಭೋಪಾಲ್ ನಲ್ಲಿ 1.28 ಕೋಟಿ ಅರ್ಜಿಗಳು ಸಲ್ಲಿಕೆಯಾಗಿದ್ದು, ಮೆಟ್ರೊ ಉದ್ಯೋಗ ತಾಣಗಳನ್ನು ಮೀರಿ ಗಮನಾರ್ಹ ಪ್ರಮಾಣದಲ್ಲಿ ಏರಿಕೆಯಾಗಿದೆ” ಎಂದು ವರದಿಯಲ್ಲಿ ಹೇಳಲಾಗಿದೆ.
2023ಕ್ಕೆ ಹೋಲಿಸಿದರೆ, 2024ರಲ್ಲಿ ಮಧ್ಯಮ ಪ್ರಮಾಣದ ವೇತನ ಪಡೆಯುತ್ತಿರುವ ಮಹಿಳೆಯರ ವೇತನ ಪ್ರಮಾಣ ಶೇ. 28ರಷ್ಟು ಏರಿಕೆಯಾಗಿದೆ ಎಂದೂ ವರದಿಯಲ್ಲಿ ಹೇಳಲಾಗಿದೆ.
ಮಹಿಳೆಯರು ಆರೋಗ್ಯ ಸೇವೆ, ಆತಿಥ್ಯ, ಚಿಲ್ಲರೆ ವ್ಯಾಪಾರ ಹಾಗೂ ಇ-ಕಾಮರ್ಸ್ ವಲಯಗಳಲ್ಲಿ ಉತ್ತಮ ಪ್ರಗತಿ ತೋರಿಸುತ್ತಿದ್ದಾರೆ. ಇದರೊಂದಿಗೆ, ಅಸಾಂಪ್ರದಾಯಿಕ ವಲಯಗಳಾದ ಮಾರಾಟ, ಸಾಗಣೆ ಹಾಗೂ ಭದ್ರತಾ ಸೇವೆಗಳಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
“ಹಿರಿಯ ಅಧಿಕಾರಿಗಳು ಹಾಗೂ ವ್ಯವಸ್ಥಾಪಕ ಹುದ್ದೆಗಳಿಗೆ ಸಲ್ಲಿಕೆಯಾಗುತ್ತಿರುವ ಅರ್ಜಿಗಳ ಸಂಖ್ಯೆ ಶೇ. 32ರಷ್ಟು ಏರಿಕೆಯಾಗಿದ್ದು, ಭಾರತದ ಹೊಸ ತಲೆಮಾರಿನ ಉದ್ಯೋಗ ಸ್ಥಳಗಳನ್ನು ರೂಪಿಸುವುದರಲ್ಲಿ ಬೆಳೆಯುತ್ತಿರುವ ಮಹಿಳೆಯರ ಪ್ರಭಾವವನ್ನು ಇದು ಸೂಚಿಸುತ್ತಿದೆ” ಎಂದೂ ವರದಿಯಲ್ಲಿ ಹೇಳಲಾಗಿದೆ.
ಮಹಿಳೆಯರ ಉದ್ಯೋಗ ಅರ್ಜಿ ಸಲ್ಲಿಕೆಯಲ್ಲಿ ಭಾರಿ ಪ್ರಗತಿ ಆಗಿರುವುದು ಮಾತ್ರವಲ್ಲದೆ, ಉದ್ಯೋಗಗಳಿಗೆ ಅರ್ಜಿ ಸಲ್ಲಿಸುವ ಹೊಸಬರ ಪ್ರಮಾಣದಲ್ಲೂ ಏರಿಕೆಯಾಗಿದ್ದು, ಪ್ರತಿ ವರ್ಷ ಶೇ. 27ರಷ್ಟು ಏರಿಕೆಯಾಗುತ್ತಿದೆ. ಇದರಿಂದ ಒಟ್ಟಾರೆಯಾಗಿ 2 ಕೋಟಿಗೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ವರದಿಯಲ್ಲಿ ಹೇಳಲಾಗಿದೆ.
ನಗರ ಉದ್ಯೋಗ ತಾಣಗಳಾದ ಚೆನ್ನೈ, ಬೆಂಗಳೂರು ಹಾಗೂ ಹೈದರಾಬಾದ್ ಗಳು 60 ಲಕ್ಷ ಅರ್ಜಿಗಳ ಕೊಡುಗೆ ನೀಡಿದ್ದರೆ, ಪಂಜಾಬ್, ಉತ್ತರ ಪ್ರದೇಶ, ರಾಜಸ್ಥಾನ ಹಾಗೂ ಬಿಹಾರದಂಥ ಪ್ರಾಂತ್ಯಗಳು 82 ಲಕ್ಷ ಅರ್ಜಿಗಳ ಕೊಡುಗೆ ನೀಡುವ ಮೂಲಕ ಸಮತೋಲಿತ ಪ್ರಾಂತೀಯ ಕೊಡುಗೆ ನೀಡಿರುವುದು ಕಂಡು ಬಂದಿದೆ.