ರೌಡಿ ಜತೆ ಓಡಿಹೋಗಿ ಮನೆಗೆ ಮರಳಿದ್ದ ಐಎಎಸ್ ಅಧಿಕಾರಿ ಪತ್ನಿ ಆತ್ಮಹತ್ಯೆ!

Update: 2024-07-23 05:08 GMT

ಗಾಂಧಿನಗರ: ಒಂಬತ್ತು ತಿಂಗಳ ಹಿಂದೆ ರೌಡಿಯೊಬ್ಬನ ಜತೆ ಓಡಿ ಹೋಗಿದ್ದ ಐಎಎಸ್ ಅಧಿಕಾರಿಯೊಬ್ಬರ ಪತ್ನಿ, ಶನಿವಾರ ತನ್ನ ಪತಿ ಮನೆಗೆ ವಾಪಸ್ಸಾದ ಬಳಿಕ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ಗಂಭೀರವಾಗಿ ಅಸ್ವಸ್ಥರಾಗಿದ್ದ ಅವರನ್ನು ರವಿವಾರ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಗುಜರಾತ್ ನ ಗಾಂಧಿನಗರದ ಸೆಕ್ಟರ್ 19ರಲ್ಲಿ ಈ ಪ್ರಕರಣ ನಡೆದಿದೆ.

ಗುಜರಾತ್ ವಿದ್ಯುತ್ ನಿಯಂತ್ರಣ ಆಯೋಗದಲ್ಲಿ ಕಾರ್ಯದರ್ಶಿಯಾಗಿರುವ ರಂಜಿತ್ ಕುಮಾರ್ ತಮ್ಮ ಮನೆಯ ಮನೆ ಕೆಲಸದವರ ಮೂಲಕ ಸೂಚನೆ ನೀಡಿ, ಮಗುವಿನ ಅಪಹರಣ ಪ್ರಕರಣದಲ್ಲಿ ಷಾಮೀಲಾಗಿದ್ದ ಪತ್ನಿ ಸೂರ್ಯಾಗೆ ಈ ಮನೆಯಲ್ಲಿ ಅವಕಾಶವಿಲ್ಲ ಎಂದು ಹೇಳಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

ತಮಿಳುನಾಡಿನ ಮಧುರೈನಲ್ಲಿ 14 ವರ್ಷ ವಯಸ್ಸಿನ ಬಾಲಕನ ಅಪಹರಣ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿದ್ದ ಸೂರ್ಯಾ, ತಪ್ಪಿಸಿಕೊಳ್ಳುವ ಸಲುವಾಗಿ ಮನೆಗೆ ಮರಳಿದ್ದರು ಎಂದು ಮೂಲಗಳು ಹೇಳಿವೆ. 2023ರಲ್ಲಿ ಬೇರೆ ಬೇರೆಯಾಗಿದ್ದ ದಂಪತಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು ಎಂದು ರಂಜಿತ್ ಕುಮಾರ್ ಅವರ ವಕೀಲ ಹಿತೇಶ್ ಗುಪ್ತಾ ಸ್ಪಷ್ಟಪಡಿಸಿದ್ದಾರೆ.

"ರಂಜೀತ್ ಕುಮಾರ್ ಅವರು ಸೂರ್ಯಾ ಸಲ್ಲಿಸಿದ್ದ ವಿಚ್ಛೇದನ ಅರ್ಜಿಯ ಇತ್ಯರ್ಥಕ್ಕಾಗಿ ಹೋಗಿದ್ದರು. ಮನೆಯಲ್ಲಿ ಇರಲು ಅವಕಾಶ ನೀಡಿಲ್ಲ ಎಂಬ ಕಾರಣಕ್ಕೆ ಹತಾಶಳಾದ ಮಹಿಳೆ ವಿಷ ಸೇವನೆ ಮಾಡಿ 108 ಸಹಾಯವಾಣಿಗೆ ಕರೆ ಮಾಡಿದ್ದರು. ಪೊಲೀಸರಿಗೆ ತಮಿಳಿನಲ್ಲಿ ಬರೆದ ಆತ್ಮಹತ್ಯೆ ಟಿಪ್ಪಣಿ ಸಿಕ್ಕಿದೆ” ಎಂದು ಪೊಲೀಸರು ವಿವರಿಸಿದ್ದಾರೆ.

ಮಹಿಳೆಯ ಪ್ರಿಯಕರ, ಗ್ಯಾಂಗ್ ಸ್ಟರ್ ಮಹಾರಾಜ ಹಾಗೂ ಆತನ ಸಹಚರ ಸೆಂಥಿಲ್ ಕುಮಾರ್ ಭಾಗಿಯಾಗಿದ್ದ ಅಪಹರಣ ಪ್ರಕರಣದಲ್ಲಿ ಸೂರ್ಯ ಹೆಸರು ಕೂಡಾ ಸೇರಿಕೊಂಡಿತ್ತು. ಮಹಿಳೆಯೊಬ್ಬರ ಜತೆಗಿನ ಹಣಕಾಸು ವ್ಯಾಜ್ಯದ ಹಿನ್ನೆಲೆಯಲ್ಲಿ ಆಕೆಯ 14 ವರ್ಷದ ವಯಸ್ಸಿನ ಮಗನನ್ನು ಅಪಹರಿಸಿ 2 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಆದರೆ ಪೊಲೀಸರು ಮಗುವನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದರು. ಆರೋಪಿಗಳ ಪತ್ತೆಗೆ ಪೊಲೀಸರು ಜಾಲ ಬೀಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News