ಪ್ರತಿಭಟನಾನಿರತ ರೈತರು ದಿಲ್ಲಿ ಪ್ರವೇಶಿಸಲು ಸಾಧ್ಯವಿಲ್ಲವಾದರೆ, ನಾನವರನ್ನು ಲಾಹೋರ್ ಗೆ ಕಳಿಸಲೆ?: ಕೇಂದ್ರ ಸರಕಾರದ ವಿರುದ್ಧ ಭಗವಂತ್ ಸಿಂಗ್ ಮಾನ್ ವಾಗ್ದಾಳಿ
ಚಂಡೀಗಢ : ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ವಿರುದ್ಧ ಶುಕ್ರವಾರ ವಾಗ್ದಾಳಿ ನಡೆಸಿದ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್, ಒಂದು ವೇಳೆ ಶಂಭು ಹಾಗೂ ಖನೌರ್ ಗಡಿ ಬಳಿ ಠಿಕಾಣಿ ಹೂಡಿರುವ ರೈತರಿಗೆ ಕೇಂದ್ರ ಸರಕಾರವು ದಿಲ್ಲಿ ಪ್ರವೇಶಿಸಲು ಅನುಮತಿ ನೀಡದಿದ್ದರೆ, ನಾನವರನ್ನು ಲಾಹೋರ್ ಗೆ ಕಳಿಸಲೆ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಸಂಘಟನೆ ಹಾಗೂ ಕಿಸಾನ್ ಮಜ್ದೂರ್ ಮೋರ್ಚಾ ನೇತೃತ್ವದಲ್ಲಿ ಪಂಜಾಬ್ ರೈತರು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯ ಕಾನೂನಾತ್ಮಕ ಖಾತ್ರಿ ನೀಡುವಂತೆ ಕೇಂದ್ರ ಸರಕಾರವನ್ನು ಆಗ್ರಹಿಸಿ ಫೆಬ್ರವರಿ 13ರಂದು ದಿಲ್ಲಿ ಚಲೋ ಪಾದಯಾತ್ರೆ ಹಮ್ಮಿಕೊಂಡಿದ್ದರು.
ಅವರನ್ನು ಅಂಬಾಲಾ-ಹೊಸ ದಿಲ್ಲಿ ರಾಷ್ಟ್ರೀಯ ಹೆದ್ದಾರಿ ಬಳಿ ಸಿಮೆಂಟ್ ಬ್ಲಾಕ್ ಗಳು ಸೇರಿದಂತೆ ತಡೆಗೋಡೆಗಳನ್ನು ನಿರ್ಮಿಸುವ ಮೂಲಕ ಹರ್ಯಾಣ ಪೊಲೀಸರು ತಡೆದಿದ್ದರು. ಅಲ್ಲಿಂದ ಇಲ್ಲಿಯವರೆಗೆ ಪ್ರತಿಭಟನಾನಿರತ ರೈತರು ಶಂಭು ಹಾಗೂ ಖನೌರಿ ಗಡಿಗಳ ಬಳಿ ಠಿಕಾಣಿ ಹೂಡಿದ್ದಾರೆ.
ಶುಕ್ರವಾರ ಚುನಾವಣಾ ರಾಜ್ಯವಾದ ಹರ್ಯಾಣದಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕ ಸಭೆಯೊಂದನ್ನು ಉದ್ದೇಶಿಸಿ ಮಾತನಾಡಿದ ಮಾನ್, “ಖನೌರಿ ಮತ್ತು ಶಂಭು ಬಳಿ ರೈತರು ದಿಲ್ಲಿಯಲ್ಲಿ ಪ್ರವೇಶಿಸಲು ಸಾಧ್ಯವಾಗದಂತೆ ಗಡಿಗಳನ್ನು ಉಕ್ಕಿನ ಮೊಳೆಗಳು ಹಾಗೂ ತಡೆಗೋಡೆಗಳ ಮೂಲಕ ಬಂದೋಬಸ್ತ್ ಮಾಡಲಾಗಿದೆ. ಸರಕಾರವು ದಿಲ್ಲಿಯಿಂದ ನಡೆಯುತ್ತಿರುವುದರಿಂದ ರೈತರು ಅಲ್ಲಿಗೆ ಹೋಗುತ್ತಾರೆ. ಅವರು ದಿಲ್ಲಿಗೆ ಹೋಗಲು ಸಾಧ್ಯವಿಲ್ಲವಾದರೆ, ನಾನವರನ್ನು ಲಾಹೋರ್ ಗೆ ಕಳಿಸಲೆ” ಎಂದು ಖಾರವಾಗಿ ಪ್ರಶ್ನಿರಸಿದರು.
ನಾಲ್ಕು ವರ್ಷಗಳ ಹಿಂದೆ ಕೂಡಾ ರೈತರು ದಿಲ್ಲಿಯನ್ನು ಪ್ರವೇಶಿಸದಂತೆ ತಡೆಯಲಾಗಿತ್ತು ಎಂದು ಅವರು ಆರೋಪಿಸಿದರು.
“ಸದ್ಯ ಹಿಂಪಡೆಯಲಾಗಿರುವ ಕೃಷಿ ಕಾನೂನುಗಳ ವಿರುದ್ಧ ನಡೆದ ರೈತರ ಪ್ರತಿಭಟನೆಯ ಸಂದರ್ಭದಲ್ಲಿ, ಅವರನ್ನು ದಿಲ್ಲಿ ಪ್ರವೇಶಿಸದಂತೆ ತಡೆದಾಗ ಸುಮಾರು 726 ಮಂದಿ ರೈತರು ಮೃತಪಟ್ಟಿದ್ದರು” ಎಂದೂ ಅವರು ಹೇಳಿದರು.