ಇಸ್ರೇಲ್-ಹಮಾಸ್ ನಡುವಿನ ಕದನ ವಿರಾಮ ಒಪ್ಪಂದವನ್ನು ಸ್ವಾಗತಿಸಿದ ಭಾರತ
ಹೊಸದಿಲ್ಲಿ : ಇಸ್ರೇಲ್ ಮತ್ತು ಹಮಾಸ್ ನಡುವಿನ ಕದನ ವಿರಾಮ ಮತ್ತು ಒತ್ತೆಯಾಳುಗಳ ಬಿಡುಗಡೆ ಒಪ್ಪಂದವನ್ನು ಭಾರತ ಸ್ವಾಗತಿಸಿದ್ದು, ಈ ಒಪ್ಪಂದವು ಗಾಝಾದ ಜನರಿಗೆ ನಿರಂತರವಾದ ಮಾನವೀಯ ನೆರವು ಪೂರೈಕೆಗೆ ಕಾರಣವಾಗಲಿದೆ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಗುರುವಾರ ತಿಳಿಸಿದೆ.
ʼಒತ್ತೆಯಾಳುಗಳ ಬಿಡುಗಡೆ ಮತ್ತು ಗಾಝಾದಲ್ಲಿ ಕದನ ವಿರಾಮದ ಒಪ್ಪಂದದ ಘೋಷಣೆಯನ್ನು ನಾವು ಸ್ವಾಗತಿಸುತ್ತೇವೆ. ಇದು ಗಾಝಾದ ಜನರಿಗೆ ಮಾನವೀಯ ನೆರವಿನ ಸುರಕ್ಷಿತ ಮತ್ತು ನಿರಂತರ ಪೂರೈಕೆಗೆ ಕಾರಣವಾಗುತ್ತದೆ ಎಂದು ನಾವು ಭಾವಿಸುತ್ತೇವೆ. ಎಲ್ಲಾ ಒತ್ತೆಯಾಳುಗಳ ಬಿಡುಗಡೆ, ಕದನ ವಿರಾಮ, ಮಾತುಕತೆ ಮತ್ತು ರಾಜತಾಂತ್ರಿಕತೆಯ ಹಾದಿಗೆ ಮರಳುವಂತೆ ನಾವು ನಿರಂತರವಾಗಿ ಕರೆ ನೀಡಿದ್ದೇವೆʼ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಖತರ್ ರಾಜಧಾನಿಯಲ್ಲಿ ನಡೆದ ಮಾತುಕತೆಯಲ್ಲಿ ಇಸ್ರೇಲ್ ಮತ್ತು ಹಮಾಸ್ ಕದನ ವಿರಾಮ ಒಪ್ಪಂದಕ್ಕೆ ಒಪ್ಪಿಕೊಂಡಿವೆ ಎಂದು ಕತಾರ್ ಮತ್ತು ಯುನೈಟೆಡ್ ಸ್ಟೇಟ್ಸ್ ಬುಧವಾರ ಘೋಷಿಸಿದ್ದವು. ಆ ಮೂಲಕ ಗಾಝಾ ಪಟ್ಟಿಯಲ್ಲಿ 15 ತಿಂಗಳಿನಿಂದ ನಡೆಯುತ್ತಿರುವ ವಿನಾಶಕಾರಿ ಯುದ್ಧಕ್ಕೆ ವಿರಾಮ ಸಿಗಲಿದೆ ಎಂದು ಹೇಳಲಾಗಿದೆ. ಒಪ್ಪಂದದಂತೆ, ಹಮಾಸ್ – ಇಸ್ರೇಲ್ ಪರಸ್ಪರ ಸೆರೆಯಲ್ಲಿಟ್ಟಿರುವ ಡಜನ್ ಗಟ್ಟಲೆ ಒತ್ತೆಯಾಳುಗಳನ್ನು ಹಂತ ಹಂತವಾಗಿ ಬಿಡುಗಡೆ ಮಾಡಲಿದೆ. ಈ ಕದನ ವಿರಾಮವು ಯುದ್ಧಪೀಡಿತ ಪ್ರದೇಶಕ್ಕೆ ಮಾನವೀಯ ನೆರವಿಗೆ ಸಹಾಯವನ್ನು ಮಾಡಲಿದೆ. ಗಾಝಾದಲ್ಲಿನ ಯುದ್ಧಕ್ಕೆ ಶಾಶ್ವತವಾದ ಅಂತ್ಯಕ್ಕೆ ದಾರಿ ಮಾಡಿಕೊಡಲಿದೆ ಎಂದು ಹೇಳಲಾಗಿದೆ.
ಅಮೆರಿಕ, ಈಜಿಪ್ಟ್ ಮತ್ತು ಕತಾರ್ ದೇಶಗಳ ನಿರಂತರ ರಾಜತಾಂತ್ರಿಕ ಪ್ರಯತ್ನದ ನಂತರ ಇಸ್ರೇಲ್ ಮತ್ತು ಹಮಾಸ್ ಕದನ ವಿರಾಮ ಮತ್ತು ಒತ್ತೆಯಾಳುಗಳ ಬಿಡುಗಡೆ ಒಪ್ಪಂದಕ್ಕೆ ಸಮ್ಮಿತಿಸಿವೆ ಎಂದು ಬೈಡನ್ ಈ ಮೊದಲು ಘೋಷಿಸಿದ್ದರು.