ಸೈಫ್ ಅಲಿ ಖಾನ್ ಮೇಲೆ 6 ಬಾರಿ ಚೂರಿಯಿಂದ ಇರಿತ: ಮಾಹಿತಿ ನೀಡಿದ ವೈದ್ಯರು
ಮುಂಬೈ: ಚೂರಿ ಇರಿತದಿಂದ ಗಾಯಗೊಂಡ ಬಾಲಿವುಡ್ ನಟ ಸೈಫ್ ಅಲಿ ಖಾನ್ ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೈಫ್ ಅಲಿ ಖಾನ್ ದೇಹದ ಮೇಲೆ ಆರು ಗಾಯಗಳಾಗಿದ್ದು, ಅವುಗಳಲ್ಲಿ ಎರಡು ಆಳವಾಗಿತ್ತು. ಅವರಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ಲೀಲಾವತಿ ಆಸ್ಪತ್ರೆಯ ವೈದ್ಯ ಡಾ.ನೀರಜ್ ಉತ್ತಮನಿ ಹೇಳಿದ್ದಾರೆ.
ಲೀಲಾವತಿ ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನೀರಜ್ ಉತ್ತಮಾನಿ ಈ ಕುರಿತು ಮಾಹಿತಿಯನ್ನು ನೀಡಿದ್ದು, ಸೈಫ್ ಅಲಿ ಖಾನ್ ಅವರಿಗೆ ಬಾಂದ್ರಾ ಮನೆಯಲ್ಲಿ ಅಪರಿಚಿತ ವ್ಯಕ್ತಿಗಳು ಇರಿದಿದ್ದಾರೆ ಮತ್ತು ಅವರನ್ನು ಬೆಳಿಗ್ಗೆ 3:30ಕ್ಕೆ ಆಸ್ಪತ್ರೆಗೆ ಕರೆತರಲಾಗಿದೆ. ಖಾನ್ ಗೆ ಆರು ಇರಿತದ ಗಾಯಗಳಿವೆ. ಅದರಲ್ಲಿ ಎರಡು ಆಳವಾದ ಗಾಯಗಳಾಗಿದೆ. ಇದರಲ್ಲಿ ಒಂದು ಬೆನ್ನುಮೂಳೆಯ ಪಕ್ಕದಲ್ಲಿ ಕಂಡು ಬಂದಿದೆ. ಡಾ ನಿತಿನ್ ಡಾಂಗೆ, ಡಾ ಲೀನಾ ಜೈನ್ ಮತ್ತು ಡಾ.ನಿಶಾ ಗಾಂಧಿ ನೇತೃತ್ವದ ನುರಿತ ವೈದ್ಯರ ತಂಡವು ಅವರಿಗೆ ಶಸ್ತ್ರಚಿಕಿತ್ಸೆ ನಡೆಸಿದೆ. ಸೈಫ್ ಅಪಾಯದಿಂದ ಪಾರಾಗಿದ್ದಾರೆ ಎಂದು ಹೇಳಿದ್ದಾರೆ.
ಸೈಫ್ ಅಲಿ ಖಾನ್ ನಿವಾಸದಲ್ಲಿ ಕಳ್ಳತನಕ್ಕೆ ಯತ್ನ?
ʼಸೈಫ್ ಅಲಿ ಖಾನ್ ಅವರ ನಿವಾಸದಲ್ಲಿ ಕಳ್ಳತನದ ಯತ್ನ ನಡೆದಿದೆ. ಅವರು ಪ್ರಸ್ತುತ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಪಡೆಯುತ್ತಿದ್ದಾರೆ. ಮಾಧ್ಯಮಗಳು ಮತ್ತು ಅಭಿಮಾನಿಗಳಿಗೆ ತಾಳ್ಮೆಯಿಂದಿರುವಂತೆ ನಾವು ವಿನಂತಿಸುತ್ತೇವೆʼ ಎಂದು ಸೈಫ್ ಅಲಿ ಖಾನ್ ಅವರ ಪರ ಮೂಲಗಳು ತಿಳಿಸಿವೆ.
ಆರಂಭಿಕ ತನಿಖೆಯ ಪ್ರಕಾರ, ಮನೆಗೆ ನುಗ್ಗಿದ ವ್ಯಕ್ತಿ ಮತ್ತು ಸೈಫ್ ಅಲಿ ಖಾನ್ ನಡುವೆ ಜಗಳ ನಡೆದಿದೆ. ಈ ವೇಳೆ ನಟನನ್ನು ಇರಿದು ಆತ ಸ್ಥಳದಿಂದ ಪರಾರಿಯಾಗಿದ್ದಾನೆ. ಪೊಲೀಸರು ಖಾನ್ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮೂವರು ಸಿಬ್ಬಂದಿಗಳನ್ನು ವಿಚಾರಣೆಗಾಗಿ ಕರೆದೊಯ್ದಿದ್ದಾರೆ. ಘಟನೆಯಲ್ಲಿ ಖಾನ್ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ನೌಕರ ಕೂಡ ಗಾಯಗೊಂಡಿದ್ದಾರೆ. ಆರೋಪಿಯ ಪತ್ತೆಗೆ 7 ತಂಡಗಳನ್ನು ರಚಿಸಲಾಗಿದೆ. ಒಂದು ತಂಡವು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸುತ್ತಿದೆ. ಇತರ ತಂಡವು ಮುಂಬೈನ ವಿವಿಧ ನಗರಗಳಲ್ಲಿ ಪರಿಶೀಲನೆ ನಡೆಸುತ್ತಿದೆ ಎಂದು ತಿಳಿದು ಬಂದಿದೆ.