ಜಮ್ಮುವಿನಲ್ಲಿ ಉದ್ಯೋಗಕ್ಕೆ ಶಾರ್ಟ್‌ಲಿಸ್ಟ್‌ನಲ್ಲಿ ಉತ್ತರ ಪ್ರದೇಶ, ಮಧ್ಯ ಪ್ರದೇಶಗಳ ಅಭ್ಯರ್ಥಿಗಳು : ಸ್ಥಳೀಯರಲ್ಲಿ ಆಕ್ರೋಶ

Update: 2024-10-19 12:51 GMT

PC : thewire.in

ಶ್ರೀನಗರ : ಜಮ್ಮುವಿನ ಕೈಮಗ್ಗ ಮತ್ತು ಕರಕುಶಲ ನಿರ್ದೇಶನಾಲಯವು ‘ಕ್ಲಸ್ಟರ್ ಡೆವಲಪ್‌ಮೆಂಟ್ ಎಕ್ಸಿಕ್ಯೂಟಿವ್’ ಮತ್ತು ‘ಟೆಕ್ಸ್‌ಟೈಲ್ ಡಿಸೈನರ್’ ಹುದ್ದೆಗಳಿಗಾಗಿ ಸಿದ್ಧಪಡಿಸಿರುವ ಸಂಭಾವ್ಯ ಆಯ್ಕೆ ಪಟ್ಟಿಯಲ್ಲಿ ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶಗಳ ಇಬ್ಬರು ಅಭ್ಯರ್ಥಿಗಳಿರುವುದು ಬಿಜೆಪಿಯ ಭದ್ರಕೋಟೆಯಾಗಿರುವ ಪ್ರದೇಶದ ಜನರಲ್ಲಿ ಆಕ್ರೋಶವನ್ನುಂಟು ಮಾಡಿದೆ.

ಸಂವಿಧಾನದ ವಿಧಿ 370 ಮತ್ತು 35-ಎ ರದ್ದುಗೊಳಿಸಿದ ಬಳಿಕ ಜಮ್ಮು-ಕಾಶ್ಮೀರದಲ್ಲಿಯ ಸರಕಾರಿ ಹುದ್ದೆಗಳಿಗೆ ಉತ್ತರ ಪ್ರದೇಶ ಮತ್ತು ಮಧ್ಯ ಪ್ರದೇಶ ಅಭ್ಯರ್ಥಿಗಳ ಆಯ್ಕೆ ಸಾಧ್ಯವಾಗಿದೆ. ಜಮ್ಮು-ಕಾಶ್ಮೀರವು ದೇಶದಲ್ಲೇ ಅತ್ಯಂತ ಹೆಚ್ಚಿನ ನಿರುದ್ಯೋಗ ದರಗಳಿರುವ ಪ್ರದೇಶಗಳಲ್ಲಿ ಒಂದಾಗಿರುವ ಸಮಯದಲ್ಲಿ ಈ ವಿವಾದ ತಲೆಯೆತ್ತಿದೆ.

ಅಭ್ಯರ್ಥಿಗಳ ಹಿನ್ನೆಲೆಯನ್ನು ಬಹಿರಂಗಗೊಳಿಸಿರುವ ಸರಕಾರದ ನೋಟಿಸ್‌ನ್ನು ಅ.15ರಂದು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಲಾಗಿದ್ದು, ಜಮ್ಮುವಿನ ಹಲವಾರು ಸಾಮಾಜಿಕ ಮತ್ತು ರಾಜಕೀಯ ಕಾರ್ಯಕರ್ತರು ಇಲ್ಲಿಯ ಸರಕಾರಿ ಉದ್ಯೋಗಗಳಿಗೆ ‘ಹೊರಗಿನವರನ್ನು’ ಶಾರ್ಟ್‌ಲಿಸ್ಟ್ ಮಾಡಿರುವುದನ್ನು ಸ್ಥಳೀಯರ ಜೀವನೋಪಾಯದ ಮೇಲಿನ ದಾಳಿ ಎಂದು ಬಣ್ಣಿಸಿದ್ದಾರೆ.

ಕಥುವಾದ ಬಸೋಲಿ ಪಶ್ಮಿನಾ ಕ್ಲಸ್ಟರ್‌ನಲ್ಲಿಯ ಒಂದು ಕ್ಲಸ್ಟರ್ ಡೆವಲಪ್‌ಮೆಂಟ್ ಎಕ್ಸಿಕ್ಯೂಟಿವ್ ಹುದ್ದೆಗೆ ಆರು ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್ ಮಾಡಲಾಗಿದ್ದು, ಅ.22ರಂದು ಅಧಿಕೃತ ಆಯ್ಕೆ ಸಮಿತಿಯ ಮುಂದೆ ಸಂದರ್ಶನಕ್ಕೆ ಹಾಜರಾಗುವಂತೆ ಅವರಿಗೆ ಸೂಚಿಸಲಾಗಿದೆ. ಈ ಆರು ಅಭ್ಯಥಿಗಳ ಪೈಕಿ ಉತ್ತರ ಪ್ರದೇಶ ಮತ್ತು ಮಧ್ಯ ಪ್ರದೇಶದ ತಲಾ ಓರ್ವರು ಅಭ್ಯರ್ಥಿಗಳಿದ್ದು, ಇದು ಜಮ್ಮು ಪ್ರದೇಶದಲ್ಲಿ ಸ್ಥಳೀಯರ ಸಿಟ್ಟಿಗೆ ಕಾರಣವಾಗಿದೆ. ಉಳಿದ ನಾಲ್ವರು ಅಭ್ಯರ್ಥಿಗಳು ಕಥುವಾ ಜಿಲ್ಲೆಗೆ ಸೇರಿದವರಾಗಿದ್ದಾರೆ.

ಅ.15ರಂದು ಪೋಸ್ಟ್ ಮಾಡಲಾಗಿರುವ ನೋಟಿಸ್‌ನಲ್ಲಿ ಟೆಕ್ಸ್‌ಟೈಲ್ ಡಿಸೈನರ್ ಹುದ್ದೆಗೆ ಶಾರ್ಟ್‌ಲಿಸ್ಟ್ ಮಾಡಿರುವ ಆರು ಅಭ್ಯರ್ಥಿಗಳನ್ನೂ ಅ.22ರಂದು ಸಂದರ್ಶನಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ. ಕ್ಲಸ್ಟರ್ ಡೆವಲಪ್‌ಮೆಂಟ್ ಎಕ್ಸಿಕ್ಯೂಟಿವ್ ಹುದ್ದೆಯ ಶಾರ್ಟ್‌ಲಿಸ್ಟ್‌ನಲ್ಲಿರುವ ಉತ್ತರ ಪ್ರದೇಶದ ಅಭ್ಯರ್ಥಿ ಕೂಡ ಇದರಲ್ಲಿ ಸೇರಿದ್ದು, ಉಳಿದ ಐವರು ಅಭ್ಯರ್ಥಿಗಳು ಜಮ್ಮು ಪ್ರದೇಶದ ಸಾಂಬಾ ಮತ್ತು ಕಥುವಾ ಜಿಲ್ಲೆಗಳಿಗೆ ಸೇರಿದವರಾಗಿದ್ದಾರೆ.

ಈ ಎರಡೂ ಪಟ್ಟಿಗಳು ಜಮ್ಮುವಿನಲ್ಲಿ ಆಕ್ರೋಶವನ್ನುಂಟು ಮಾಡಿವೆ. ನ್ಯಾಷನಲ್ ಕಾನ್ಫರೆನ್ಸ್(ಎನ್‌ಸಿ),ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ(ಪಿಡಿಪಿ) ಮತ್ತು ಹಿಂದು ಬಹುಸಂಖ್ಯಾತ ಜಮ್ಮು ಪ್ರದೇಶದ ಕೆಲವು ಸಾಮಾಜಿಕ ಕಾರ್ಯಕರ್ತರು ಬಿಜೆಪಿ ನೇತೃತ್ವದ ಕೇಂದ್ರ ಸರಕಾರವು ಜಮ್ಮು-ಕಾಶ್ಮೀರವು ಹೆಚ್ಚಿನ ನಿರುದ್ಯೋಗ ಸಮಸ್ಯೆಯನ್ನು ಎದುರಿಸುತ್ತಿರುವಾಗ ಉದ್ಯೋಗದ ವಿಷಯದಲ್ಲಿ ಜನರನ್ನು ದಾರಿ ತಪ್ಪಿಸುತ್ತಿದೆ ಎಂದು ಆರೋಪಿಸಿದ್ದಾರೆ.

370ನೇ ವಿಧಿಯನ್ನು ರದ್ದುಗೊಳಿಸುವ ಮೂಲಕ ಕೇಂದ್ರ ಸರಕಾರವು ಹೊರಗಿನವರಿಗೆ ಜಮ್ಮು-ಕಾಶ್ಮೀರದ ಪ್ರವೇಶ ದ್ವಾರಗಳನ್ನು ತೆರೆದಿದೆ ಮತ್ತು ಸ್ಥಳಿಯರಿಗೆ ಮೀಸಲಾದ ಉದ್ಯೋಗಗಳನ್ನು ಕಸಿಯುತ್ತಿದೆ ಎಂದು ಪಿಡಿಪಿಯ ಯುವ ಘಟಕದ ರಾಜ್ಯ ಉಪಾಧ್ಯಕ್ಷ ಆದಿತ್ಯ ಗುಪ್ತಾ ಆರೋಪಿಸಿದರು.

‘ಬಿಜೆಪಿಯು ಡೋಗ್ರಾ ಮುಖ್ಯಮಂತ್ರಿಯ ನೇಮಕದ ಪೊಳ್ಳು ಭರವಸೆಯೊಂದಿಗೆ ಜನರನ್ನು ದಾರಿ ತಪ್ಪಿಸಲು ಪ್ರಯತ್ನಿಸುತ್ತಿದೆ. ಭೂಮಿಯ ಹಕ್ಕುಗಳು ಮತ್ತು ಉದ್ಯೋಗಗಳ ರಕ್ಷಣೆ ವಿಧಿ 370ರ ಕೇಂದ್ರಬಿಂದುವಾಗಿದ್ದು, ಜಮ್ಮು-ಕಾಶ್ಮೀರದ ಭವಿಷ್ಯವನ್ನು ಸುರಕ್ಷಿತವಾಗಿಸಿತ್ತು. ಈಗ ನಮ್ಮ ಉಳಿವಿಗಾಗಿ ನಾವೇ ಹೋರಾಡುವುದು ಅನಿವಾರ್ಯವಾಗಿದೆ ’ಎಂದು ವಕೀಲರೂ ಆಗಿರುವ ಗುಪ್ತಾ ಹೇಳಿದರು.

‘ಜಮ್ಮು-ಕಾಶ್ಮೀರದಲ್ಲಿ ನಿರುದ್ಯೋಗವು ಉತ್ತುಂಗದಲ್ಲಿದೆ. ಹೀಗಿರುವಾಗ ಇಲ್ಲಿಯ ಉದ್ಯೋಗಗಳನ್ನು ಉತ್ತರ ಪ್ರದೇಶ ಮತ್ತು ಮಧ್ಯ ಪ್ರದೇಶಗಳ ಜನರಿಗೇಕೆ ನೀಡಲಾಗುತ್ತಿದೆ? ಇದು ನಿಲ್ಲಬೇಕು’ ಎಂದು ಜಮ್ಮುವಿನ ಎನ್‌ಸಿ ಯುವ ನಾಯಕ ರೋಹಿತ್ ಚೌಧರಿ ಟ್ವೀಟಿಸಿದ್ದಾರೆ.

ಸೌಜನ್ಯ : thewire.in

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News