ಜಮ್ಮುಕಾಶ್ಮೀರ: ಸೇನಾ ವಾಹನದ ಮೇಲೆ ಶಂಕಿತ ಉಗ್ರರಿಂದ ಗುಂಡಿನ ದಾಳಿ ; ಮೂವರು ಯೋಧರು ಸಾವು
ಶ್ರೀನಗರ: ಜಮ್ಮು ಹಾಗೂ ಕಾಶ್ಮೀರದ ಪೂಂಛ್ ಜಿಲ್ಲೆಯಲ್ಲಿ ಶಂಕಿತ ಉಗ್ರರು ಗುರುವಾರ ಎರಡು ಸೇನಾ ವಾಹನದ ಮೇಲೆ ನಡೆಸಿದ ಹೊಂಚು ದಾಳಿಯಲ್ಲಿ ಕನಿಷ್ಠ ಮೂವರು ಯೋಧರು ಮೃತಪಟ್ಟಿದ್ದಾರೆ ಹಾಗೂ ಇತರ ಮೂವರು ಯೋಧರು ಗಾಯಗೊಂಡಿದ್ದಾರೆ.
ರಾಜೌರಿ-ತನಮಂಡಿ-ಸುರಾನ್ಕೋಟ್ ರಸ್ತೆಯ ಸಾವ್ನಿ ಪ್ರದೇಶದಲ್ಲಿ ಶಂಕಿತ ಉಗ್ರರು ಸಂಜೆ 3.30ಕ್ಕೆ ಯೋಧರ ವಾಹನಗಳ ಮೇಲೆ ಹೊಂಚು ದಾಳಿ ನಡೆಸಿದ್ದಾರೆ.
ಉಗ್ರರ ವಿರುದ್ಧ ಬುಧವಾರ ರಾತ್ರಿಯಿಂದ ಸುತ್ತುವರಿಯುವಿಕೆ ಹಾಗೂ ಶೋಧ ಕಾರ್ಯಾಚರಣೆ ನಡೆಯುತ್ತಿರುವ ಬಫ್ಲಿಯಾಝ್ನ ಸಮೀಪದ ಪ್ರದೇಶದಿಂದ ಯೋಧರನ್ನು ಟ್ರಕ್ ಹಾಗೂ ಜಿಪ್ಸಿಯಲ್ಲಿ ಕರೆದೊಯ್ಯಲಾಗುತ್ತಿತ್ತು. ಈ ಸಂದರ್ಭ ಶಂಕಿತ ಉಗ್ರರು ಈ ವಾಹನಗಳ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಈ ಗುಂಡಿನ ದಾಳಿಯಲ್ಲಿ ಕನಿಷ್ಠ ಮೂವರು ಯೋಧರು ಮೃತಪಟ್ಟಿದ್ದಾರೆ ಹಾಗೂ ಮೂವರು ಯೋಧರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘‘ಖಚಿತ ಗುಪ್ತಚರ ಮಾಹಿತಿ ಆಧಾರದಲ್ಲಿ ನಿನ್ನೆ ರಾತ್ರಿ ಜಂಟಿ ಕಾರ್ಯಾಚರಣೆ ಆರಂಭಿಸಲಾಯಿತು. ಇಂದು ಸಂಜೆ ಶಂಕಿತ ಉಗ್ರರು ಮುಖಾಮುಖಿಯಾದರು. ಗುಂಡಿನ ಕಾಳಗ ಮುಂದುವರಿದಿದೆ. ಹೆಚ್ಚುವರಿ ಪಡೆ ಘಟನಾ ಸ್ಥಳಕ್ಕೆ ಧಾವಿಸಿದೆ’’ ಎಂದು ರಕ್ಷಣಾ ಇಲಾಖೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ತಿಳಿಸಿದ್ದಾರೆ.