ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತನ್ನ ಮೇಲೆ ದಾಳಿಗೆ ಸಂಚು ರೂಪಿಸಿದ್ದಾರೆಂದು ಆರೋಪಿಸಿದ ಕೇರಳ ರಾಜ್ಯಪಾಲ
ತಿರುವನಂತಪುರಂ: ಕೇರಳ ಮುಖ್ಯಮಂತ್ರಿ ಪಿಣರಾಯಿ ರಾಜನ್ ಅವರು ತಮ್ಮ ವಿರುದ್ಧ ದಾಳಿಗೆ ಹಾಗೂ ದೈಹಿಕ ಹಾನಿಯುಂಟು ಮಾಡಲು ಸಂಚು ರೂಪಿಸುತ್ತಿದ್ದಾರೆ ಎಂದು ರಾಜ್ಯದ ರಾಜ್ಯಪಾಲರಾಗಿರುವ ಆರಿಫ್ ಮುಹಮ್ಮದ್ ಖಾನ್ ಆರೋಪಿಸಿದ್ದಾರೆ.
ರಾಜ್ಯಪಾಲರು ತಮ್ಮ ವಾಹನದೊಳಗೆ ಇರುವಾಗ ಆಡಳಿತ ಸಿಪಿಐ(ಎಂ) ನ ವಿದ್ಯಾರ್ಥಿ ಘಟಕವಾದ ಸ್ಟೂಡೆಂಟ್ಸ್ ಫೆಡರೇಷನ್ ಆಫ್ ಇಂಡಿಯಾದ ಕಾರ್ಯಕರ್ತರು ವಾಹನದ ಮೇಲೆ ನಡೆಸಿದ್ದರೆನ್ನಲಾದ ದಾಳಿಯ ನಂತರ ರಾಜ್ಯಪಾಲರ ಆರೋಪ ಕೇಳಿ ಬಂದಿದೆ.
ಘಟನೆಯಿಂದ ಸಿಟ್ಟುಗೊಂಡ ಖಾನ್, ಕೇರಳ ಸಿಎಂ ತಮಗೆ ದೈಹಿಕ ಹಾನಿಯುಂಟು ಮಾಡಲು ಜನರನ್ನು ಕಳಿಸುವ ಸಂಚು ರೂಪಿಸಿದ್ದಾರೆಂದು ದೂರಿದರು.
ತಮ್ಮ ವಾಹನವನ್ನು ಸುತ್ತುವರಿಯಲಾಯಿತು ಹಾಗೂ ಪ್ರತಿಭಟನಾಕಾರರು ಸಿಎಂ ಅಣತಿಯಂತೆ ಕರಿಪತಾಕೆ ಬೀಸಿ ಕಾರನ್ನು ಗುದ್ದಿದರು ಎಂದು ರಾಜ್ಯಪಾಲರು ಹೇಳಿಕೊಂಡಿದ್ದಾರೆ.
“ಮುಖ್ಯಮಂತ್ರಿಯ ಕಾರ್ಯಕ್ರಮ ನಡೆಯುತ್ತಿರುವಾಗ, ಪ್ರತಿಭಟನಾಕಾರರ ವಾಹನವನ್ನು ಅನುಮತಿಸಲಾಗುವುದೇ? ಅವರು (ಪೊಲೀಸರು) ಯಾರಿಗಾದರೂ ಸಿಎಂ ಕಾರಿನ ಬಳಿ ಬರಲು ಅನುಮತಿಸುವರೇ? ಆದರೆ ಇಲ್ಲಿ ಪ್ರತಿಭಟನಾಕಾರರ ಕಾರುಗಳು ಹತ್ತಿರದಲ್ಲೇ ಇದ್ದವು ಮತ್ತು ಪೊಲೀಸರು ಅವರನ್ನು ಅವರ ಕಾರುಗಳಿಗೆ ದೂಡಿದರು ಮತ್ತು ಅವರು ಓಡಿ ಹೋದರು ಎಂದು ರಾಜ್ಯಪಾಲರು ಹೇಳಿದರು.
“ಹಾಗಿದ್ದರೆ, ಅದು ಸಿಎಂ. ನಾನು ಸ್ಪಷ್ಟವಾಗಿ ಹೇಳುತ್ತಿದ್ದೇನೆ ಅವರು ಸಂಚು ರೂಪಿಸಿದ್ದಾರೆ ಹಾಗೂ ನನಗೆ ಹಾನಿಯುಂಟು ಮಾಡಲು ಈ ಜನರನ್ನು ಕಳಿಸುತ್ತಿದ್ದಾರೆ. ಗೂಂಡಾಗಳು ತಿರುವನಂತಪುರಂನ ರಸ್ತೆಗಳ ಮೇಲೆ ಹಿಡಿತ ಸಾಧಿಸಿದ್ದಾರೆ,” ಎಂದು ಅವರುಹೇಳಿದರು.
ರಾಜಭವನ ಮೂಲಗಳ ಪ್ರಕಾರ ಖಾನ್ ಅವರ ವಾಹನಕ್ಕೆ ಮೂರು ಕಡೆಗಳಲ್ಲಿ ಕರಿಪತಾಕೆ ಪ್ರದರ್ಶಿಸಲಾಯಿತಲ್ಲದೆ ಎರಡು ಸಂದರ್ಭಗಳಲ್ಲಿ ಪ್ರತಿಭಟನಾಕಾರರು ಕಾರಿಗೆ ಗುದ್ದಿದ್ದಾರೆ.
ಆದರೆ ಪೊಲೀಸರ ಪ್ರಕಾರ ರಾಜ್ಯಪಾಲರ ವಾಹನವನ್ನು ಎಸ್‌ಎಫ್‌ಐ ಕಾರ್ಯಕರ್ತರು ಒಂದು ಕಡೆ ಮಾತ್ರ ತಡೆಹಿಡಿದಿದ್ದರು. ಈ ಪ್ರಕರಣ ಸಂಬಂಧ ಏಳು ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಈ “ದಾಳಿ”ಯ ಹಿಂದೆ ಸಿಎಂ ಪಿಣರಾಯಿ ವಿಜಯನ್ ಇದ್ದಾರೆಂದು ಕಾಂಗ್ರೆಸ್, ಬಿಜೆಪಿ ಮತ್ತು ಯುಡಿಎಫ್ ಆರೋಪಿಸಿವೆ.
ಇತ್ತೀಚಿನ ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಈ ದಾಳಿಗಳು ನಡೆದಿವೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಕೆ ಸುರೇಂದ್ರನ್ ಹೇಳಿದ್ದಾರೆ.
ವಿಧಾನಸಭೆಯಲ್ಲಿ ಅಂಗೀಕಾರಗೊಂಡ ಮಸೂದೆಗಳಿಗೆ ರಾಜ್ಯಪಾಲರು ಅಂಕಿತ ನೀಡದೇ ಇರುವ ವಿಚಾರ ಇತ್ತೀಚೆಗೆ ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತಿತ್ತು.