ಮುಂಬೈ:ಪಿಎಫ್ಐ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾನವ ಹಕ್ಕು ಹೋರಾಟಗಾರ ವಹೀದ್ ಶೇಖ್ ಮನೆಗೆ ಎನ್ಐಎ ದಾಳಿ
ಮುಂಬೈ: ಉಪನಗರ ವಿಕ್ರೋಲಿ ನಿವಾಸಿ ಮಾನವ ಹಕ್ಕುಗಳ ಹೋರಾಟಗಾರ ಹಾಗೂ ಶಾಲಾ ಶಿಕ್ಷಕ ಅಬ್ದುಲ್ ವಹೀದ್ ಶೇಖ್ ಅವರ ನಿವಾಸದ ಮೇಲೆ ಎನ್ಐಎ ಬುಧವಾರ ದಾಳಿ ನಡೆಸಿದೆ.
ನಸುಕಿನ ಐದು ಗಂಟೆಯ ಸುಮಾರಿಗೆ ಎನ್ಐಎ ತಂಡ ಆಗಮಿಸಿತ್ತಾದರೂ, ಅಧಿಕಾರಿಗಳು ಗುರುತಿನ ಚೀಟಿ ಮತ್ತು ವಾರಂಟ್ ತೋರಿಸದ ಹಿನ್ನೆಲೆಯಲ್ಲಿ ವಹೀದ್ ಬಾಗಿಲು ತೆರೆಯಲು ನಿರಾಕರಿಸಿದ್ದರು. ಕೊನೆಗೂ ಅಧಿಕಾರಿಗಳು ವಾರಂಟ್ ತೋರಿಸಿದ ಬಳಿಕವೇ ಅವರನ್ನು ಮನೆಯೊಳಗೆ ಬಿಟ್ಟುಕೊಂಡಿದ್ದರು.
ತಂಡದಲ್ಲಿ ಕೆಲವರು ಮುಂಬೈ ಪೊಲೀಸರ ಸಮವಸ್ತ್ರದಲ್ಲಿದ್ದರೆ ಕೆಲವರು ಮಫ್ತಿಯಲ್ಲಿದ್ದರು. ತಾವು ಪೊಲೀಸರು ಎಂದು ಹೇಳಿಕೊಂಡಿದ್ದ ಅವರು ಬಾಗಿಲು ತೆರೆಯುವಂತ ತನಗೆ ಸೂಚಿಸಿದ್ದರು.‘ಪೊಲೀಸರ ಶೋಧ ’ ಏನನ್ನು ಒಳಗೊಂಡಿರುತ್ತದೆ ಎನ್ನುವುದನ್ನು ಚೆನ್ನಾಗಿ ಗೊತ್ತಿದ್ದರಿಂದ ಬಾಗಿಲು ತೆರೆಯುವ ಮುನ್ನ ಗುರುತು ಚೀಟಿ ಮತ್ತು ವಾರಂಟ್ ತೋರಿಸುವಂತೆ ತಾನು ಕೇಳಿದ್ದೆ ಮತ್ತು ಅದಕ್ಕೆ ಅವರು ನಿರಾಕರಿಸಿದ್ದರು. ಮೊದಲು ಅವರು ತಾವು ಮುಂಬೈ ಪೊಲೀಸರು ಎಂದು ಹೇಳಿದ್ದರು, ನಂತರ ದಿಲ್ಲಿ ಪೋಲಿಸರು, ಉತ್ತರ ಪ್ರದೇಶ ಪೋಲಿಸರು ಎಂದೆಲ್ಲ ಹೇಳಿಕೊಂಡಿದ್ದರು. ವಾರಂಟ್ ತೋರಿಸಿ ಮನೆಯೊಳಗೆ ಪ್ರವೇಶಿಸುವಂತೆ ಅವರನ್ನು ತಾನು ಒತ್ತಾಯಿಸುತ್ತಲೇ ಇದ್ದೆ ಎಂದು ವಹೀದ್ ಸುದ್ದಿಸಂಸ್ಥೆಗೆ ದೂರವಾಣಿಯಲ್ಲಿ ತಿಳಿಸಿದರು.
ವಹೀದ್ ತನ್ನ ಪತ್ನಿ ಮತ್ತು ಮಕ್ಕಳೊಂದಿಗೆ ಮನೆಯ ಬಾಗಿಲನ್ನು ಒಳಗಿನಿಂದ ಭದ್ರಪಡಿಸಿಕೊಂಡಿದ್ದರು. ಬೆಳಿಗ್ಗೆ 10 ಗಂಟೆಯ ವೇಳೆಗೆ ಅವರ ವಕೀಲ ಇಬ್ರಾಹೀಂ ಹರ್ಬತ್ ಅವರು ಸ್ಥಳಕ್ಕೆ ಆಗಮಿಸಿದಾಗ ಪೊಲೀಸರು ವಾಸ್ತವದಲ್ಲಿ ತಾವು ಎನ್ಐಎ ಅಧಿಕಾರಿಗಳು ಮತ್ತು ಪಿಎಫ್ಐ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಳಿಗೆ ಬಂದಿದ್ದೇವೆ ಎಂದು ತಿಳಿಸಿದ್ದರು. ಈ ವೇಳೆಗೆ ವಹೀದ್ ಕೂಡ ಮನೆಯಿಂದ ಹೊರಕ್ಕೆ ಬಂದಿದ್ದರು. ಹರ್ಬತ್ ವಾರಂಟ್ ತೋರಿಸುವಂತೆ ಆಗ್ರಹಿಸಿದಾಗ, ಓರ್ವ ಅಧಿಕಾರಿ ಕೈಯಿಂದ ಬರೆಯಲಾಗಿದ್ದ ಆದೇಶವಿದ್ದ ಕಾಗದದ ತುಂಡನ್ನು ನೀಡಿದ್ದರು. ಅದನ್ನು ಸ್ವೀಕರಿಸಲು ಹರ್ಬತ್ ನಿರಾಕರಿಸಿದಾಗ ಅಂತಿಮವಾಗಿ ಓರ್ವ ಅಧಿಕಾರಿ ಅಧಿಕೃತ ವಾರಂಟ್ ಪ್ರತಿಯನ್ನು ತರಲು ಎನ್ಐಎ ಕಚೇರಿಗೆ ಧಾವಿಸಿದ್ದರು.
ಕೊನೆಗೂ 11 ಗಂಟೆಗೆ ದಾಳಿ ಆರಂಭಗೊಂಡಿದ್ದು, ಅಪರಾಹ್ನ ಒಂದು ಗಂಟೆಯ ಸುಮಾರಿಗೆ ವಹೀದ್ ಅವರ ಮಕ್ಕಳನ್ನು ಮನೆಯಿಂದ ಹೊರಹೋಗಲು ಅವಕಾಶ ನೀಡಲಾಗಿತ್ತು.
2006ರ ಮುಂಬೈ ಸರಣಿ ರೈಲು ಸ್ಫೋಟ ಪ್ರಕರಣದಲ್ಲಿ ಪಾತ್ರ ವಹಿಸಿದ್ದ ಆರೋಪದಲ್ಲಿ ವಹೀದ್ ಒಂಭತ್ತು ವರ್ಷಗಳನ್ನು ಜೈಲಿನಲ್ಲಿ ಕಳೆದಿದ್ದರು ಮತ್ತು 2015ರಲ್ಲಿ ಮಹಾರಾಷ್ಟ್ರ ಸಂಘಟಿತ ಅಪರಾಧಗಳ ನ್ಯಾಯಾಲಯವು ಅವರನ್ನು ಬಿಡುಗಡೆಗೊಳಿಸಿತ್ತು.