ಬಿಎಸ್‌ಪಿ ಯನ್ನು ಅರ್ಥ ಮಾಡಿಕೊಳ್ಳುವಲ್ಲಿ ಮುಸ್ಲಿಮರು ವಿಫಲ: ಮಾಯಾವತಿ

Update: 2024-06-05 16:07 GMT

ಮಾಯಾವತಿ | PTI 

ಲಕ್ನೋ: ಲೋಕಸಭಾ ಚುನಾವಣೆಯಲ್ಲಿ ಮುಸ್ಲಿಮರಿಗೆ ಸಾಕಷ್ಟು ಪ್ರಾತಿನಿಧ್ಯ ನೀಡಿರುವ ಹೊರತಾಗಿಯೂ, ಸಮುದಾಯವು ತನ್ನ ಪಕ್ಷವನ್ನು ಅರ್ಥಮಾಡಿಕೊಳ್ಳುವಲ್ಲಿ ವಿಫಲವಾಗಿದೆ ಎಂಬ ಅಸಮಾಧಾನವನ್ನು ಬುಧವಾರ ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಬಹುಜನ ಸಮಾಜ ಪಕ್ಷ (ಬಿಎಸ್ಪಿ)ದ ಮುಖ್ಯಸ್ಥೆ ಮಾಯಾವತಿ ವ್ಯಕ್ತಪಡಿಸಿದ್ದಾರೆ.

ಬಹುಜನ ಸಮಾಜ ಪಕ್ಷವು ದೇಶಾದ್ಯಂತ 424 ಮತ್ತು ಉತ್ತರಪ್ರದೇಶದಲ್ಲಿ 79 ಸ್ಥಾನಗಳಲ್ಲಿ ಸ್ಪರ್ಧಿಸಿದೆ. ಆದರೆ, ಒಂದೇ ಒಂದು ಸ್ಥಾನವನ್ನು ಗೆಲ್ಲಲು ಅದಕ್ಕೆ ಸಾಧ್ಯವಾಗಲಿಲ್ಲ. ಅದು 35 ಮುಸ್ಲಿಮ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು.

‘‘ಭವಿಷ್ಯದಲ್ಲಿ ಪಕ್ಷಕ್ಕೆ ಇಂಥ ನಿರಾಶಾದಾಯಕ ಪರಿಸ್ಥಿತಿ ಬರದಂತೆ ನೋಡಿಕೊಳ್ಳಲು ಪಕ್ಷವು ಮುಸ್ಲಿಮರಿಗೆ ಮತ್ತಷ್ಟು ಅವಕಾಶಗಳನ್ನು ನೀಡಲು ನಿರ್ಧರಿಸಿದೆ’’ ಎಂದು ಮಾಯಾವತಿ ಹೇಳಿದರು.

ಹೆಚ್ಚಿನ ದಲಿತರು, ಅದರಲ್ಲೂ ಮುಖ್ಯವಾಗಿ ಜಾಟವ್ ಸಮುದಾಯವು ಬಹುಜನ ಸಮಾಜ ಪಕ್ಷದ ಪರವಾಗಿ ಮತ ಹಾಕಿದೆ ಎಂದು ಮಾಯಾವತಿ ಹೇಳಿದರು. ಉತ್ತರಪ್ರದೇಶದಲ್ಲಿ ಲೋಕಸಭಾ ಚುನಾವಣೆಯ ಫಲಿತಾಂಶವನ್ನು ಪಕ್ಷವು ಪ್ರತಿಯೊಂದು ಹಂತದಲ್ಲಿ ವಿಶ್ಲೇಷಿಸುವುದು ಮತ್ತು ಬಹುಜನ ಚಳವಳಿಗೆ ಪೂರಕವಾಗಿ ಕ್ರಮಗಳನ್ನು ತೆಗೆದುಕೊಳ್ಳುವುದು ಎಂದು ಅವರು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News