ನಾಂದೇಡ್ ಲೋಕಸಭಾ ಉಪಚುನಾವಣೆ| ಕಾಂಗ್ರೆಸ್‌ಗೆ ಗೆಲುವು
ಹೊಸದಿಲ್ಲಿ: ಮಹಾರಾಷ್ಟ್ರದ ನಾಂದೇಡ್ ಲೋಕಸಭಾ ಕ್ಷೇತ್ರದ ಉಪಚುನಾವಣೆಯ ಫಲಿತಾಂಶ ಶನಿವಾರ ಹೊರಬಿದ್ದಿದ್ದು ಜಿದ್ದಾಜಿದ್ದಿಯ ಸ್ಪರ್ಧೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರವೀಂದ್ರ ಚವಾಣ್ ಅವರು ಗೆಲುವು ಸಾಧಿಸಿದ್ದಾರೆ. ರವೀಂದ್ರ ಚವಾಣ್ ಅವರು ತನ್ನ ನಿಕಟ ಪ್ರತಿಸ್ಪರ್ಧಿ ಬಿಜೆಪಿಯ ಸಂತುಕ್‌ರಾವ್ ಹಂಬಾರ್ಡೆ ಅವರನ್ನು 1457 ಮತಗಳ ಅಂತರದಿಂದ ಸೋಲಿಸಿದ್ದಾರೆ. ರವೀಂದ್ರ ಚವಾಣ್ ಅವರಿಗೆ 5,86,788 ಮತಗಳು ದೊರೆತರೆ, ಹಂಬಾರ್ಡೆ ಅವರು 5,85,331 ಮತಗನ್ನು ಪಡೆದುಕೊಂಡಿದ್ದಾರೆ..
ಮತಏಣಿಕೆಯ ಹಲವು ಸುತ್ತುಗಳಲ್ಲಿ ಬಿಜೆಪಿ ಅಭ್ಯರ್ಥಿ ಮುನ್ನಡೆ ಸಾಧಿಸಿದ್ದರಾದರೂ, ಅಂತಿಮ ಹಂತದಲ್ಲಿ ಕಾಂಗ್ರೆಸ್ ಅಭ್ಯರ್ಥಿ ದಿಢೀರ್ ಮುನ್ನಡೆಯನ್ನು ಸಾಧಿಸಿ, ಗೆಲುವಿನ ಪತಾಕೆ ಹಾರಿಸಿದ್ದಾರೆ.
ಕಣದಲ್ಲಿದ್ದ ಇನ್ನೋರ್ವ ಅಭ್ಯರ್ಥಿ ವಂಚಿತ್ ಬಹುಜನ ಅಘಾಡಿ (ವಿಬಿಎ) ಪಕ್ಷದ ಅವಿನಾಶ್ ಭೋಸಿಕರ್ ಅವರು 80 ಸಾವಿರಕ್ಕೂ ಅಧಿಕ ಸ್ಥಾನಗಳನ್ನು ಪಡೆದು ತೃತೀಯ ಸ್ಥಾನಿಯಾಗಿದ್ದಾರೆ.
ಕಾಂಗ್ರೆಸ್ ಸಂಸದ ವಸಂತ್ ರಾವ್ ಬಲವಂತರಾವ್ ಚವಾಣ್ ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ಉಪಚುನಾವಣೆ ನಡೆದಿದೆ. ಅವರ ಪುತ್ರ ರವೀಂದ್ರ ವಾಣ್ ಅವರನ್ನು ಕಾಂಗ್ರೆಸ್ ಪಕ್ಷವು ತನ್ನ ಅಭ್ಯರ್ಥಿಯಾಗಿ ಕಣಕ್ಕಿಳಿಸಿತ್ತು.
ಇದರೊಂದಿಗೆ ನವೆಂಬರ್‌ನಲ್ಲಿ ಉಪಚುನಾವಣೆ ನಡೆದ ಎರಡೂ ಲೋಕಸಭಾ ಕ್ಷೇತ್ರಗನ್ನು ಕಾಂಗ್ರೆಸ್ ಗೆದ್ದುಕೊಂಡಂತಾಗಿದೆ. ಕೇರಳದ ವಯನಾಡ್‌ನಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಕಾಗಾಂಧಿ 4 ಲಕ್ಷಕ್ಕೂ ಅಧಿಕ ಮತಗಳಿಂದ ಅಂತರದಿಂದ ಜಯಗಳಿಸಿದ್ದಾರೆ.