ಮಣಿಪುರ| ಎನ್‌ಡಿಎ ನಿರ್ಣಯ ತಿರಸ್ಕರಿಸಿದ ಮೈತೈ ಅಂಗಸಂಸ್ಥೆ; ಕ್ರಮಕ್ಕೆ 24 ಗಂಟೆಗಳ ಗಡುವು

Update: 2024-11-19 07:08 GMT

Photo credit: NDTV 

ಇಂಫಾಲ್: ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ತಡೆಯಲು ಆಡಳಿತ ಪಕ್ಷದ ಶಾಸಕರ ಸಭೆಯಲ್ಲಿ ಅಂಗೀಕರಿಸಿದ ನಿರ್ಣಯಗಳನ್ನು ಮೈತೈ ಅಂಗ ಸಂಸ್ಥೆ ತಿರಸ್ಕರಿಸಿದ್ದು, ಹಿಂಸಾಚಾರದ ಕುರಿತು ನಿರ್ಣಾಯಕ ಕ್ರಮವನ್ನು ತೆಗೆದುಕೊಳ್ಳಲು 24 ಗಂಟೆಗಳ ಗಡುವನ್ನು ನೀಡಿದೆ.

ಈಶಾನ್ಯ ರಾಜ್ಯದಲ್ಲಿ ಇತ್ತೀಚಿನ ಸರಣಿ ಕೊಲೆಗಳ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಮೈತೈ ಮತ್ತು ಕುಕಿ ಸಮುದಾಯಗಳ ನಡುವೆ ಹಿಂಸಾಚಾರ ಮುಂದುವರಿದಿದೆ. ಇತ್ತೀಚಿನ ಹಿಂಸಾಚಾರದಲ್ಲಿ ಜಿರಿಬಾಮ್ನಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಆರು ಜನರು ಸಾವನ್ನಪ್ಪಿದ್ದಾರೆ. ಅಮಾಯಕ ನಾಗರಿಕರ ಹತ್ಯೆಯು ಮೈತೈ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದೆ.

ಮಣಿಪುರ ಮುಖ್ಯಮಂತ್ರಿ ಬೀರೆನ್ ಸಿಂಗ್ ನಿನ್ನೆ ತಮ್ಮ ನಿವಾಸದಲ್ಲಿ ಎನ್ ಡಿಎ ಶಾಸಕರ ಸಭೆ ಕರೆದಿದ್ದರು. ಮುಖ್ಯಮಂತ್ರಿ ಕಚೇರಿಯ ಮೂಲಗಳ ಪ್ರಕಾರ, 38 ಶಾಸಕರಲ್ಲಿ 27 ಮಂದಿ ಶಾಸಕರು ಕಾರಣಗಳನ್ನು ನೀಡದೆ ಸಭೆಗೆ ಗೈರು ಹಾಜರಾಗಿದ್ದರು.

ಮಣಿಪುರದಲ್ಲಿ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯಿದೆಯನ್ನು ಪುನಃ ಜಾರಿಗೊಳಿಸುವ ಅಗತ್ಯತೆಯ ಕುರಿತು ಕೇಂದ್ರ ಸರ್ಕಾರ ಮರುಪರಿಶೀಲಿಸಬೇಕೆಂದು ನಿರ್ಣಯದಲ್ಲಿ ಒತ್ತಾಯಿಸಲಾಗಿದೆ. ಏಳು ದಿನಗಳಲ್ಲಿ ಜಿರಿಬಾಮ್ ಹತ್ಯೆಗೆ ಕಾರಣರಾದ ಕುಕಿ ಶಸ್ತ್ರಸ್ತ್ರಧಾರಿಗಳ ವಿರುದ್ಧ ಸಾಮೂಹಿಕ ಕಾರ್ಯಾಚರಣೆ ನಡೆಸಬೇಕು. ಮೂರು ಪ್ರಮುಖ ಕೊಲೆ ಪ್ರಕರಣಗಳನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ(ಎನ್ಐಎ) ವರ್ಗಾಯಿಸಬೇಕು ಎಂದು ಶಾಸಕರು ಒತ್ತಾಯಿಸಿದ್ದಾರೆ. ಜಿರಿಬಾಮ್ ಹತ್ಯೆಗಳಿಗೆ ಕಾರಣವಾದ ಕುಕಿ ಗುಂಪನ್ನು ಕಾನೂನುಬಾಹಿರ ಸಂಘಟನೆ ಎಂದು ಘೋಷಿಸಬೇಕೆಂದು ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ.

ಎನ್ ಡಿಎ ನಿರ್ಣಯದ ಬಗ್ಗೆ ಪ್ರತಿಕ್ರಿಯಿಸಿದ ಮೈತೈ ಸಮುದಾಯದ ಅಂಗಸಂಸ್ಥೆ ಮಣಿಪುರ ಸಮಗ್ರತೆಯ ಸಮನ್ವಯ ಸಮಿತಿ ವಕ್ತಾರ ಖುರೈಜಮ್ ಅಥೌಬಾ, ಎನ್ ಡಿಎ ಸರಕಾರದ ನಿರ್ಣಯಗಳಿಂದ ನಾಗರಿಕ ಸಮಾಜ ತೃಪ್ತರಾಗಿಲ್ಲ, ಆಡಳಿತ ಪಕ್ಷದ ಶಾಸಕರ ಸಭೆಗಾಗಿ ನಾವು ಕುತೂಹಲದಿಂದ ಕಾಯುತ್ತಿದ್ದೇವೆ. ಜಿರಿಬಾಮ್ನಲ್ಲಿ ಆರು ಅಮಾಯಕ ಮಹಿಳೆಯರು ಮತ್ತು ಮಕ್ಕಳ ಹತ್ಯೆಗೆ ಕಾರಣವಾದ ಕುಕಿ ಗುಂಪಿನ ವಿರುದ್ಧ ಸಾಮೂಹಿಕ ಕಾರ್ಯಾಚರಣೆಯನ್ನು ಪ್ರಾರಂಭಿಸಲು ಅವರು ನಿರ್ಧರಿಸಿದ್ದಾರೆ. ಆದರೆ ಅಪರಾಧ ನಡೆದಿರುವುದು ಕೇವಲ ಜಿರಿಬಾಮ್ ನಲ್ಲಿ ಅಲ್ಲ ಎಂದು ನಾವು ಹೇಳುತ್ತಿದ್ದೇವೆ. ಮೇ 2023ರಿಂದ ಮಣಿಪುರದ ಹಲವಾರು ಇತರ ಸ್ಥಳಗಳಲ್ಲಿ ಈ ಕೃತ್ಯಗಳು ನಡೆದಿದೆ ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News