ದಿಲ್ಲಿ ವಾಯುಮಾಲಿನ್ಯ ನಿಯಂತ್ರಿಸಲು ಕೇಂದ್ರ ಸರ್ಕಾರ ಸ್ಪಂದಿಸುತ್ತಿಲ್ಲ: ದಿಲ್ಲಿ ಸಚಿವ ಆರೋಪ
ಹೊಸದಿಲ್ಲಿ: ದಿಲ್ಲಿಯಲ್ಲಿ ಮಾಲಿನ್ಯದ ಮಟ್ಟವು ವಿಪರೀತ ಹೆಚ್ಚಿರುವ ಹಿನ್ನೆಲೆಯಲ್ಲಿ ಈ ಸಮಸ್ಯೆಯನ್ನು ಪರಿಹರಿಸಲು ತುರ್ತು ಸಭೆಯನ್ನು ಕರೆಯಬೇಕು ಎಂದು ಪರಿಸರ ಸಚಿವ ಗೋಪಾಲ್ ರೈ ಮಂಗಳವಾರ ಕೇಂದ್ರ ಸರಕಾರವನ್ನು ಒತ್ತಾಯಿಸಿದ್ದಾರೆ. ಈ ವಿಷಯದಲ್ಲಿ ಮಧ್ಯಪ್ರವೇಶಿಸುವುದು ಪ್ರಧಾನಿ ನರೇಂದ್ರ ಮೋದಿ ಅವರ ನೈತಿಕ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದ್ದಾರೆ.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಗೋಪಾಲ್ ರೈ, ರಾಷ್ಟ್ರ ರಾಜಧಾನಿಯಲ್ಲಿ ಕೃತಕ ಮಳೆಗೆ ಅವಕಾಶ ನೀಡುವಂತೆ ದಿಲ್ಲಿ ಸರ್ಕಾರ ಪದೇ ಪದೇ ಮನವಿ ಮಾಡಿದರೂ ಕೇಂದ್ರವು ಕ್ರಮ ಕೈಗೊಂಡಿಲ್ಲ. ಹಾಗಾಗಿ, ಈ ಬಗ್ಗೆ ಕೇಂದ್ರ ಪರಿಸರ ಸಚಿವ ಭೂಪೇಂದರ್ ಯಾದವ್ ಅವರಿಗೆ ಮತ್ತೊಮ್ಮೆ ಪತ್ರ ಬರೆಯುವುದಾಗಿ ಹೇಳಿದ್ದಾರೆ.
"ದಿಲ್ಲಿಯು GRAP (ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲಾನ್) ಹಂತ IV ನಿರ್ಬಂಧಗಳ ಅಡಿಯಲ್ಲಿದೆ, ವಾಹನ ಮತ್ತು ಕೈಗಾರಿಕಾ ಮಾಲಿನ್ಯವನ್ನು ಕಡಿಮೆ ಮಾಡಲು ನಾವು ಸಾಧ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ನಗರಕ್ಕೆ ಪ್ರವೇಶಿಸುವ ವಾಹನಗಳ ಸಂಖ್ಯೆಯನ್ನು ನಿಗ್ರಹಿಸುವ ಉದ್ದೇಶದಿಂದ ಖಾಸಗಿ ವಾಹನಗಳು ಮತ್ತು ಟ್ರಕ್‌ಗಳ ಮೇಲೆ ನಿರ್ಬಂಧಗಳನ್ನು ವಿಧಿಸಲಾಗಿದೆ. ಹೊಗೆಯನ್ನು ಕಡಿಮೆ ಮಾಡುವ ಕ್ರಮಗಳನ್ನು ಅನ್ವೇಷಿಸಲು ನಾವು ತಜ್ಞರನ್ನು ಸಂಪರ್ಕಿಸುತ್ತಿದ್ದೇವೆ, ಕೃತಕ ಮಳೆಯು ಗಾಳಿಯಲ್ಲಿನ ಮಾಲಿನ್ಯಕಾರಕ ಅಂಶಗಳನ್ನು ತೆರವುಗೊಳಿಸಲು ಸಹಾಯ ಮಾಡುತ್ತದೆ" ಎಂದು ರೈ ಹೇಳಿದರು.
ನಗರದ ಮಾಲಿನ್ಯ ಪರಿಸ್ಥಿತಿ ಮತ್ತು ಕೃತಕ ಮಳೆಗೆ ಅವಕಾಶ ಮಾಡಿಕೊಡುವ ಕುರಿತು ತುರ್ತು ಸಭೆ ಕರೆಯುವಂತೆ ದಿಲ್ಲಿ ಸರ್ಕಾರದಿಂದ ಪದೇ ಪದೇ ಮನವಿ ಮಾಡಿದರೂ ಕೇಂದ್ರ ಪರಿಸರ ಸಚಿವರು ಸ್ಪಂದಿಸಿಲ್ಲ ಎಂದು ಅವರು ಹೇಳಿದರು.
"ಕೇಂದ್ರ ಸರ್ಕಾರವು ಕಾರ್ಯನಿರ್ವಹಿಸಲು ಸಾಧ್ಯವಾಗದಿದ್ದರೆ, ಅವರ (ಪರಿಸರ) ಸಚಿವರು ರಾಜೀನಾಮೆ ನೀಡಬೇಕು. ಈ ವಿಚಾರದಲ್ಲಿ ಮಧ್ಯಪ್ರವೇಶಿಸಿ ಕ್ರಮ ಕೈಗೊಳ್ಳುವುದು ಪ್ರಧಾನಿ ಮೋದಿ ಅವರ ನೈತಿಕ ಹೊಣೆಗಾರಿಕೆ” ಎಂದು ಹೇಳಿದ್ದಾರೆ.
"ದಿಲ್ಲಿ ಸರ್ಕಾರವು ಕೇಂದ್ರ ಸರ್ಕಾರದ ಜೊತೆಯಲ್ಲಿ ಕೆಲಸ ಮಾಡಲು ಸಿದ್ಧವಾಗಿದೆ, ಆದರೆ ಕೃತಕ ಮಳೆಯ ಬಗ್ಗೆ ವ್ಯಾಪಕ ಸಂಶೋಧನೆ ನಡೆಸಿದ ಐಐಟಿ ಕಾನ್ಪುರದ ತಜ್ಞರನ್ನು ಒಳಗೊಂಡ ಸಭೆಯನ್ನು ಕರೆಯುವ ಮೂಲಕ ಕೇಂದ್ರವು ಇದಕ್ಕೆ ನೇತೃತ್ವ ವಹಿಸಬೇಕು. ಇದಕ್ಕೆ ವಿವಿಧ ಕೇಂದ್ರ ಇಲಾಖೆಗಳ ಅನುಮತಿ ಮತ್ತು ಸಹಯೋಗದ ಅಗತ್ಯವಿದೆ" ಎಂದು ಅವರು ಹೇಳಿದರು.