ಗುಜರಾತ್: ಉದ್ಘಾಟನೆಗೊಂಡ ಒಂದೇ ದಿನದಲ್ಲಿ ಮುಚ್ಚಿದ ನಕಲಿ ವೈದ್ಯರ ʼಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆʼ!
ಸೂರತ್: ಗುಜರಾತ್ ನಲ್ಲಿ ನಕಲಿ ವೈದ್ಯರ ಹಾವಳಿ ಹೆಚ್ಚಾಗಿದ್ದು, ಈ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳುತ್ತಿರುವಂತೆ, ನಕಲಿ ವೈದ್ಯರ ಗುಂಪೊಂದು ಇನ್ನೂ ಒಂದು ಹೆಜ್ಜೆ ಮುಂದೆ ಇಟ್ಟಿದೆ. ನಕಲಿ ವೈದ್ಯರ ಗುಂಪು ಗುಜರಾತ್ನ ಸೂರತ್ನಲ್ಲಿ ಪೂರ್ಣ ಪ್ರಮಾಣದ ಆಸ್ಪತ್ರೆಯನ್ನು ತೆರೆದು, ಅದರ ಉದ್ಘಾಟನೆಗೆ ಹಿರಿಯ ಪೊಲೀಸ್ ಅಧಿಕಾರಿಗಳನ್ನೇ ಪ್ರಮುಖ ಅತಿಥಿಗಳಾಗಿ ಆಹ್ವಾನ ಪತ್ರದಲ್ಲಿ ಹೆಸರಿಸಿದೆ.
ಆದರೆ, ನಕಲಿ ವೈದ್ಯರ ಅಸಲಿಯತ್ತು ಬೆಳಕಿಗೆ ಬರುತ್ತಿದ್ದಂತೆ, ಉದ್ಘಾಟನೆಗೊಂಡ ಒಂದೇ ದಿನದಲ್ಲಿ ಆಸ್ಪತ್ರೆಯನ್ನು ಸರ್ಕಾರ ಮುಚ್ಚಿಸಿದೆ.
ಆಸ್ಪತ್ರೆಯ ಐದು ಸಹ-ಸಂಸ್ಥಾಪಕರಲ್ಲಿ ಕನಿಷ್ಠ ಇಬ್ಬರು ನಕಲಿ ಪದವಿಗಳನ್ನು ಹೊಂದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಇತರ ಮೂವರು ಸಹ-ಸಂಸ್ಥಾಪಕರು ಹೊಂದಿರುವ ವೈದ್ಯಕೀಯ ಪದವಿಗಳ ಬಗ್ಗೆಯೂ ಅನುಮಾನಗಳಿದ್ದು, ಈ ಬಗ್ಗೆಯೂ ಪೊಲೀಸರು ಪರಿಶೀಲಿಸುತ್ತಿದ್ದಾರೆ ಎಂದು NDTV ವರದಿ ಮಾಡಿದೆ.
ಸೂರತ್ನ ಪಾಂಡೆಸರಾ ಪ್ರದೇಶದಲ್ಲಿ ಜನಸೇವಾ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯನ್ನು ರವಿವಾರ ಉದ್ಘಾಟಿಸಲಾಗಿದೆ. "ಉದ್ಘಾಟನಾ ಕಾರ್ಯಕ್ರಮದ ಆಹ್ವಾನ ಪತ್ರದಲ್ಲಿರುವ ಆಯುರ್ವೇದ ವೈದ್ಯಕೀಯ ಪದವಿ ಹೊಂದಿರುವ ವೈದ್ಯ ಎಂದು ಪರಿಚಯಿಸಲಾದ ಬಿಆರ್ ಶುಕ್ಲಾನ ವಿರುದ್ಧ ಗುಜರಾತ್ ವೈದ್ಯಕೀಯ ವೈದ್ಯರ ಕಾಯ್ದೆಯಡಿ ಪ್ರಕರಣವಿದೆ. ಆತ ನಕಲಿ ವೈದ್ಯನಾಗಿದ್ದಾನೆ" ಎಂದು ಹಿರಿಯ ಪೊಲೀಸ್ ಅಧಿಕಾರಿ ವಿಜಯ್ ಸಿಂಗ್ ಗುರ್ಜರ್ ಹೇಳಿದ್ದಾರೆ.
ಎಲೆಕ್ಟ್ರೋ-ಹೋಮಿಯೋಪತಿಯಲ್ಲಿ ಪದವಿ ಪಡೆದಿರುವುದಾಗಿ ಹೇಳಿಕೊಳ್ಳುವ ಮತ್ತೊಬ್ಬ ಸಹ-ಸಂಸ್ಥಾಪಕ ಆರ್ಕೆ ದುಬೆ ಕೂಡಾ ವೈದ್ಯಕೀಯ ವೃತ್ತಿಗಾರರ ಕಾಯಿದೆಯಡಿ ಪ್ರಕರಣವನ್ನು ಎದುರಿಸುತ್ತಿದ್ದಾನೆ ಎಂದು ಅವರು ತಿಳಿಸಿದ್ದಾರೆ.
"ಇವರಿಬ್ಬರು ನಕಲಿ ಪದವಿಗಳನ್ನು ಹೊಂದಿದ್ದಾರೆ. ಮತ್ತೊಬ್ಬ ಸಹ-ಸಂಸ್ಥಾಪಕ ಜಿಪಿFake Doctors Open Hospital In Surat ಮಿಶ್ರಾ ಕೂಡಾ ಮೂರು ಪ್ರಕರಣಗಳನ್ನು ಎದುರಿಸುತ್ತಿದ್ದಾನೆ. ಆತನ ಪದವಿಯನ್ನು ಇನ್ನೂ ಪರಿಶೀಲಿಸಬೇಕಾಗಿದೆ. ನಾವು ಆಹ್ವಾನದಲ್ಲಿರುವ ಇತರ ಎರಡು ಹೆಸರುಗಳ ಪದವಿಗಳನ್ನು ಸಹ ಪರಿಶೀಲಿಸುತ್ತಿದ್ದೇವೆ" ಎಂದು ಗುರ್ಜರ್ ತಿಳಿಸಿದ್ದಾರೆ.
ಸೂರತ್ ಮುನ್ಸಿಪಲ್ ಕಮಿಷನರ್ ಶಾಲಿನಿ ಅಗರ್ವಾಲ್, ಪೊಲೀಸ್ ಕಮಿಷನರ್ ಅನುಪಮ್ ಸಿಂಗ್ ಗಹ್ಲೌತ್ ಮತ್ತು ಜಂಟಿ ಪೊಲೀಸ್ ಕಮಿಷನರ್ ರಾಘವೇಂದ್ರ ವತ್ಸಾ ಸೇರಿದಂತೆ ಉನ್ನತ ಅಧಿಕಾರಿಗಳ ಹೆಸರುಗಳು ಉದ್ಘಾಟನಾ ಆಹ್ವಾನ ಪತ್ರದಲ್ಲಿದ್ದವು, ಆದರೆ ಅಂತಹ ಯಾವುದೇ ಆಹ್ವಾನದ ಬಗ್ಗೆ ತಮಗೆ ತಿಳಿದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ, ಅವರ್ಯಾರೂ ಕಾರ್ಯಕ್ರಮಕ್ಕೆ ಆಗಮಿಸಿರಲಿಲ್ಲ.
ಸದ್ಯ ಆಸ್ಪತ್ರೆ ಆವರಣವನ್ನು ಸೀಲ್ ಮಾಡಲಾಗಿದೆ. ಇತರ ಸಹ-ಸಂಸ್ಥಾಪಕರ ಪದವಿಗಳನ್ನು ಪರಿಶೀಲಿಸಲಾಗುತ್ತಿದೆ. ಸಂಶೋಧನೆಗಳ ಆಧಾರದ ಮೇಲೆ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.