ಉತ್ತರಪ್ರದೇಶ | ಫರೂಕಾಬಾದ್ ನಲ್ಲಿ ಬಿಜೆಪಿಯ ಕಡಿಮೆ ಅಂತರದ ಗೆಲುವಿಗಿಂತ ಮೊದಲು ಮತದಾರರ ಪಟ್ಟಿಯಿಂದ ಭಾರೀ ಸಂಖ್ಯೆಯಲ್ಲಿ ಡಿಲಿಟ್ ಆಗಿದ್ದ ಮತದಾರರ ಹೆಸರುಗಳು!
ಹೊಸದಿಲ್ಲಿ: ಉತ್ತರಪ್ರದೇಶದ ಫರೂಕಾಬಾದ್ ಲೋಕಸಭಾ ಕ್ಷೇತ್ರವನ್ನು ಬಿಜೆಪಿ 2,700 ಮತಗಳ ಕಡಿಮೆ ಅಂತರದಿಂದ ಗೆದ್ದುಕೊಂಡಿದೆ. ಮುಸ್ಲಿಂ, ಯಾದವ್, ಶಾಕ್ಯ ಮತ್ತು ಜಾತವ್ ಸಮುದಾಯದ ಜನರೇ ಹೆಚ್ಚಿರುವ ಈ ಕ್ಷೇತ್ರದಲ್ಲಿ ಚುನಾವಣೆಗೆ ಕೆಲವೇ ತಿಂಗಳ ಮೊದಲು ಭಾರೀ ಸಂಖ್ಯೆಯಲ್ಲಿ ಮತದಾರರ ಪಟ್ಟಿಯಿಂದ ಮತದಾರರ ಹೆಸರುಗಳನ್ನು ಅಳಿಸಲಾಗಿದೆ ಎಂದು newslaundry.com ಮಾಡಿರುವ ಸಮೀಕ್ಷೆಯಲ್ಲಿ ಬಯಲಾಗಿದೆ.
ಚುನಾವಣೆಗೂ ಮೊದಲು ಕ್ಷೇತ್ರದಲ್ಲಿ 32,000ಕ್ಕೂ ಹೆಚ್ಚು ಮತದಾರರ ಹೆಸರು ಪಟ್ಟಿಯಿಂದ ಅಳಿಸಲಾಗಿದೆ. ಅದರಲ್ಲಿ ಯಾದವ್ ಮತ್ತು ಮುಸ್ಲಿಂ ಮತದಾರರು ಹೆಚ್ಚಿರುವ ಅಲಿಗಂಜ್ ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತದಾರರ ಪಟ್ಟಿಯಿಂದ ಮತದಾರರ ಹೆಸರನ್ನು ಅಳಿಸಲಾಗಿದೆ. ಈ ಕ್ಷೇತ್ರದಲ್ಲಿ 30 ಪ್ರತಿಶತದಷ್ಟು ಮತದಾರರು ಯಾದವ್ ಮತ್ತು ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದರು.
ಅಲಿಗಂಜ್ ನ 395 ಬೂತ್ಗಳಲ್ಲಿ, 53 ಬೂತ್ ಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತದಾರರ ಪಟ್ಟಿಯಿಂದ ಹೆಸರನ್ನು ಅಳಿಸಲಾಗಿದೆ. ಇದರಲ್ಲಿ 37 ಬೂತ್ ಗಳು ಮುಸ್ಲಿಂ, ಯಾದವ್, ಶಾಕ್ಯ ಮತ್ತು ಜಾತವ್ ಮತದಾರರನ್ನು ಒಳಗೊಂಡಿರುವ ಬೂತ್ ಗಳಾಗಿವೆ. ಈ ಕುರಿತು ತಳಮಟ್ಟದ ಪರಿಶೀಲನೆ, ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಜೊತೆಗಿನ ಸಂಭಾಷಣೆ, ಮತದಾರರ ಪಟ್ಟಿಗಳ ಪರಿಶೀಲನೆಯ ವೇಳೆ ಬಿಜೆಪಿ ಶಾಸಕರ ಪತ್ರ ಮತದಾರರ ಪಟ್ಟಿಯಿಂದ ಹೆಸರನ್ನು ಅಳಿಸುವಲ್ಲಿ ಹೇಗೆ ಪ್ರಭಾವ ಬೀರಿದೆ ಎಂಬುವುದನ್ನು ಸಾಬೀತು ಪಡಿಸುತ್ತದೆ ಎಂದು newslaundry.com ತಂಡವು ಹೇಳಿಕೊಂಡಿದೆ.
ಜನವರಿಯಲ್ಲಿ ಅಲಿಗಂಜ್ ನ ನಾಲ್ಕು ಬೂತ್ ಗಳಿಂದ 277 ಮತದಾರರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಲಾಗಿತ್ತು. ಅಲಿಗಂಜ್ ಬಿಜೆಪಿ ಶಾಸಕ ಸತ್ಯಪಾಲ್ ಸಿಂಗ್ ರಾಥೋಡ್ ಅವರು "ಬೋಗಸ್ ಮತದಾರರ" ಬಗ್ಗೆ ಕಳವಳ ವ್ಯಕ್ತಪಡಿಸಿ ಜಿಲ್ಲಾಡಳಿತಕ್ಕೆ ಪತ್ರ ಬರೆದ ಎರಡು ವಾರಗಳಲ್ಲಿ ಈ ಬೆಳವಣಿಗೆ ನಡೆದಿತ್ತು. ಈ ಎಲ್ಲಾ ಬೂತ್ ಗಳಲ್ಲಿ ಯಾದವ್, ಶಾಕ್ಯ, ಜಾತವ್ ಮತ್ತು ಮುಸ್ಲಿಂ ಸಮುದಾಯದ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಈ ಎಲ್ಲಾ ಅಳಿಸುವಿಕೆ ಸ್ವಯಂ ಪ್ರೇರಿತವಾಗಿ ನಡೆಸಲಾಗಿದೆ ಎಂದು ವರದಿಯು ತಿಳಿಸಿದೆ. ಸ್ವಯಂ ಪ್ರೇರಿತ ಪ್ರಕರಣಗಳಲ್ಲಿ, ಫಾರ್ಮ್ 7 ಅನ್ನು ಭರ್ತಿ ಮಾಡಿ ಪರಿಶೀಲನೆ ನಡೆಸಿದ ನಂತರ ಚುನಾವಣಾ ಸಿಬ್ಬಂದಿ ಏಕಪಕ್ಷೀಯವಾಗಿ ಮತದಾರರನ್ನು ಪಟ್ಟಿಯಿಂದ ಅಳಿಸಬಹುದು. ಆದರೆ ಸೆಪ್ಟೆಂಬರ್ 2021ರಲ್ಲಿ ಭಾರತದ ಚುನಾವಣಾ ಆಯೋಗವು ನಿಗದಿಪಡಿಸಿದ ಸ್ಟ್ಯಾಂಡರ್ಡ್ ಆಪರೇಟಿಂಗ್ ಕಾರ್ಯವಿಧಾನಗಳು ವಿಶೇಷ ಸಂದರ್ಭಗಳಲ್ಲಿ ಆಯೋಗದ ಅನುಮೋದನೆ ಹೊರತಪಡಿಸಿ ಚುನಾವಣೆಗೆ ಆರು ತಿಂಗಳ ಮೊದಲು ಸ್ವಯಂಪ್ರೇರಿತವಾಗಿ ಅಳಿಸಲು ಅನುಮತಿಸುವುದಿಲ್ಲ.
News Laundry ತಂಡವು, ಶಾಸಕರ ಪತ್ರದಲ್ಲಿ ಉಲ್ಲೇಖಿಸಲಾದ ಬೂತ್ಗಳಲ್ಲಿ ಮನೆ-ಮನೆಗೆ ತೆರಳಿ ಸಮೀಕ್ಷೆ ನಡೆಸಿದಾಗ, ಮತದಾರರನ್ನು ಪಟ್ಟಿಯಿಂದ ಅಳಿಸುವಾಗ ಮಾನದಂಡ ಪಾಲಿಸಿಲ್ಲ ಎನ್ನುವುದು ಬಯಲಾಗಿದೆ.
ಮತದಾರರ ಪಟ್ಟಿಯಿಂದ ಹೆಸರನ್ನು ಅಳಿಸುವ ಸಂದರ್ಭ, ವಿಶೇಷವಾಗಿ ಅಳಿಸುವಿಕೆ ಶೇಕಡಾ 2 ಅಥವಾ ಅದಕ್ಕಿಂತ ಹೆಚ್ಚು ಇದ್ದಾಗಿ ನಿಯಮಗಳನ್ನು ಅನುಸರಿಬೇಕಿದೆ. ಜನರಿಗೆ ಈ ಕುರಿತು ನೋಟಿಸ್ ನೀಡಬೇಕಿದೆ. ಆದರೆ ಸುದ್ದಿವಾಹಿನಿಯೊಂದಿಗೆ ಮಾತನಾಡಿದ ಮತದಾರರು ಅಂತಹ ಯಾವುದೇ ನೋಟಿಸ್ ಸ್ವೀಕರಿಸಲಿಲ್ಲ ಎಂದು ಹೇಳಿದ್ದಾರೆ. ಚುನಾವಣಾ ಅಧಿಕಾರಿಗಳು ಇಂತಹ ಸೂಚನೆಗಳನ್ನು ಕಳುಹಿಸಿದ್ದೇವೆ ಆದರೆ ಇಂಗ್ಲಿಷ್ ನಲ್ಲಿ ನೋಟಿಸ್ ಇದ್ದ ಕಾರಣ ಸ್ಥಳೀಯರಿಗೆ ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಸಮಾಜಾಯಿಸಿ ನೀಡಿದ್ದಾರೆ.
ಫರೂಕಾಬಾದ್ ನಗರದಿಂದ 40 ಕಿಮೀ ದೂರದಲ್ಲಿರುವ ನಾಗ್ಲಾ ಬಲ್ಲಭ್ ಗ್ರಾಮದಲ್ಲಿ ಯಾದವ್ ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದಾರೆ ಮತ್ತು ಆಲೂಗಡ್ಡೆ, ಜೋಳ ಬೆಳೆಗಳನ್ನು ಬೆಳೆಯುತ್ತಾರೆ. ಈ ಗ್ರಾಮಕ್ಕೆ ಪ್ರವೇಶಿಸುತ್ತಿದ್ದಂತೆ ಶಿಖಾ ಎಂಬ ಯುವತಿಯ ನಿವಾಸ ಇದೆ. ಅವರ ಮನೆ ಸ್ಥಳಾಂತರವಾಗಿದೆ ಎಂಬ ಕಾರಣ ಉಲ್ಲೇಖಿಸಿ ಅವರ ಹೆಸರನ್ನು ಪಟ್ಟಿಯಿಂದ ತೆಗೆದು ಹಾಕಲಾಗಿದೆ ಎಂದು News Laundry ತಂಡವು ಪತ್ತೆ ಹಚ್ಚಿದೆ.
ʼಯಾವ ಕಾರಣಕ್ಕೆ ತನಗೆ ಲೋಕಸಭೆ ಚುನಾವಣೆಯಲ್ಲಿ ಮತದಾನ ಮಾಡಲು ಅವಕಾಶ ನೀಡಲಿಲ್ಲ ಎಂಬುದು ಗೊತ್ತಾಗಲಿಲ್ಲ. ಮತದಾನದ ದಿನದಂದು ಅಧಿಕಾರಿಗಳು ನಾನು ಅಪ್ರಾಪ್ತೆ ಆದ ಕಾರಣ ಮತದಾನ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು. ನಾನು 2022ರ ವಿಧಾನಸಭಾ ಚುನಾವಣೆಯಲ್ಲಿ ಮತ ಚಲಾಯಿಸಿದ್ದೇನೆ, ಇದು ಹೇಗೆ ಸಾಧ್ಯವಾಯಿತು ಎಂದು ನಾನು ಕೇಳಿದೆ. ನಾನು ಅವರಿಗೆ ನನ್ನ ಆಧಾರ್ ತೋರಿಸಿದೆ, ಆದರೆ ಅವರು ಮತದಾನಕ್ಕೆ ಅವಕಾಶ ನೀಡಲಿಲ್ಲʼ ಎಂದು ಶಿಖಾ ʼNews Laundryʼ ತಂಡಕ್ಕೆ ತಿಳಿಸಿದ್ದಾರೆ.
ಜಾತವ್ ಸಮುದಾಯಕ್ಕೆ ಸೇರಿದ ಯುವ ಕೃಷಿಕ ಸುಖದೇವ್ ಕುಮಾರ್ ಅವರು ಈ ಬಗ್ಗೆ ಮಾತನಾಡುತ್ತಾ, “ಮತದಾನದ ದಿನದಂದು ನನ್ನನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಲಾಗಿದೆ ಎಂದು ತಿಳಿಯಿತು. ಆದೆರೆ ಮತದಾರರ ಪಟ್ಟಿಯಿಂದ ನನ್ನ ಹೆಸರನ್ನು ಯಾವಾಗ ಡಿಲಿಟ್ ಮಾಡಲಾಗಿದೆ ಎಂದು ಗೊತ್ತಾಗಿಲ್ಲ. ಇದು ಹೇಗಾಯಿತು ಎಂಬುವುದು ಕೂಡ ನನಗೆ ಗೊತ್ತಾಗಿಲ್ಲ, ಯಾಕೆಂದರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಾನು ಮತ ಚಲಾಯಿಸಿದ್ದು ಎಂದು ಹೇಳಿದ್ದಾರೆ.
News Laundry ಜೈತ್ರಾ ಬ್ಲಾಕ್ ನ ನಾಗ್ಲಾ ಕಾಮ್ಲೆ ಗ್ರಾಮಕ್ಕೆ ತೆರಳಿ ಅಲ್ಲಿನ ಜನರಲ್ಲಿ ಮಾತುಕತೆ ನಡೆಸಿದೆ. ಗ್ರಾಮಸ್ಥರು ಆಲದ ಮರದ ಕೆಳಗೆ ಒಟ್ಟಿಗೆ ಸೇರಿಕೊಂಡು ತಂಡದ ಜೊತೆ ಸಮಾಲೋಚನೆ ನಡೆಸಿದ್ದಾರೆ. ಇಲ್ಲಿ ಹೆಚ್ಚಿನ ಮತದಾರರನ್ನು ಪಟ್ಟಿಯಿಂದ ಅಳಿಸಲಾಗಿದೆ ಎಂದು ನೀವು ಹೇಗೆ ಕಂಡುಕೊಂಡಿದ್ದೀರಿ? ಎಂದು ಸಮಾಜವಾದಿ ಪಕ್ಷದ ಕಾರ್ಯಕರ್ತ ಸುರ್ಜಿತ್ ಯಾದವ್ ಪ್ರಶ್ನಿಸಿದ್ದಾರೆ. ಈ ವೇಳೆ ವರದಿಗಾರ ಅವರಿಗೆ ಮತದಾರರ ಪಟ್ಟಿಯನ್ನು ತೋರಿಸಿದ್ದಾರೆ. ಮೊದಲು ರಾಧಾಶ್ರಿ ಎಂಬವರ ಹೆಸರನ್ನು ಡಿಲಿಟ್ ಮಾಡಿರುವುದನ್ನು ತೋರಿಸಿದ್ದಾರೆ. ಅವರು ಮೃತಪಟ್ಟಿದ್ದಾರೆಂದು ಹೆಸರನ್ನು ಡಿಲಿಟ್ ಮಾಡಲಾಗಿದೆ. ಅವರು ಮೃತಪಟ್ಟಿದ್ದಾರೆಯೇ ಎಂದು ಖಚಿತಪಡಿಸಿಕೊಳ್ಳಲು ತಂಡವು ಮುಂದಾದಾಗ ಗ್ರಾಮಸ್ಥರು ಅಚ್ಚರಿಗೊಂಡಿದ್ದಾರೆ. ರಾಧಶ್ರೀ ಜೀವಂತವಾಗಿಯೇ ಇದ್ದರು, ಅಂತಿಮವಾಗಿ ರಾಧಶ್ರೀ ಅವರನ್ನು ತಂಡವು ಭೇಟಿಯಾಗಿದೆ. ಮತದಾರರ ಪಟ್ಟಿಯಿಂದ ತನ್ನ ಹೆಸರನ್ನು ಅಳಿಸಿರುವುದರಿಂದ ತನಗೆ ಸಿಗಬಹುದಾದ ಪಡಿತರ ಯೋಜನೆಯ ಸವಲತ್ತು ಕೂಡ ಇಲ್ಲದಾಗುತ್ತಾ ಎಂಬ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಅದೇ ಗ್ರಾಮದಲ್ಲಿ ಮತದಾರರ ಪಟ್ಟಿಯಲ್ಲಿ ಮೃತಪಟ್ಟಿದ್ದಾರೆ ಎಂದು ಘೋಷಿಸಲಾದ ತ್ರಿಮೋಹನ್ ಸಿಂಗ್ ಅವರನ್ನು ಕೂಡ ಭೇಟಿಯಾಗಿ ಮಾತುಕತೆ ನಡೆಸಿರುವುದಾಗಿ ʼನ್ಯೂಸ್ ಲಾಂಡ್ರಿʼ ತಂಡವು ತಿಳಿಸಿದೆ.
ಮತದಾರರ ಪಟ್ಟಿಯಿಂದ ಹೆಸರು ಅಳಿಸಲಾದ ಹೆಚ್ಚಿನ ಮತದಾರರನ್ನು ಭೇಟಿಯಾಗಿರುವುದಾಗಿ ʼನ್ಯೂಸ್ ಲಾಂಡ್ರಿʼ ತಂಡವು ಹೇಳಿದೆ. ಈ ವೇಳೆ ಶೋಕಾಸ್ ನೋಟಿಸ್ ನೀಡಿಲ್ಲ ಮತ್ತು ಡಿಲಿಟ್ ಮಾಡುವ ಮೊದಲು ನಮಗೆ ವಾದವನ್ನು ಪ್ರಸ್ತುತ ಪಡಿಸಲು ಅವಕಾಶವನ್ನು ನೀಡಲಿಲ್ಲ ಎಂದು ಜನರು ಹೇಳಿದ್ದಾರೆ.
ಮತದಾರರ ಪಟ್ಟಿಯನ್ನು ಸಿದ್ಧಪಡಿಸುವ ಇಬ್ಬರು ಬೂತ್ ಮಟ್ಟದ ಅಧಿಕಾರಿಗಳು, "ಬೋಗಸ್ ಮತದಾರರ" ಕುರಿತು ಶಾಸಕರ ಪತ್ರದ ನಂತರ ಮತದಾರರ ಪಟ್ಟಿಯಿಂದ ಹೆಸರನ್ನು ಅಳಿಸುವಂತೆ ಅಗಾಧ ಒತ್ತಡವನ್ನು ಎದುರಿಸಿರುವುದಾಗಿ ತಿಳಿಸಿದ್ದಾರೆ ಎಂದು ʼನ್ಯೂಸ್ ಲಾಂಡ್ರಿʼ ವರದಿ ತಿಳಿಸಿದೆ. ಬಿಜೆಪಿ ಶಾಸಕ ರಾಥೋಡ್ ನಿಯಮಿತವಾಗಿ ಇಂತಹ ಪತ್ರಗಳನ್ನು ಕಳುಹಿಸುತ್ತಿದ್ದರು ಎಂದು ಇತರ ಬಿಎಲ್ಒಗಳು ಆರೋಪಿಸಿದ್ದಾರೆ.
ಉತ್ತರ ಪ್ರದೆಶದ ಮುಖ್ಯ ಚುನಾವಣಾಧಿಕಾರಿ ನವದೀಪ್ ರಿನ್ವಾ ಅವರು ಈ ಕುರಿತ ಆರೋಪವನ್ನು ನಿರಾಕರಿಸಿದ್ದಾರೆ. ಬಿಜೆಪಿ ಶಾಸಕರ ಪತ್ರದ ನಂತರ ಒತ್ತಡದಲ್ಲಿ ಕೆಲಸ ಮಾಡುತ್ತಿರುವ ಬಗ್ಗೆ ಬಿಎಲ್ಒಗಳ ಹೇಳಿಕೆಯ ಬಗ್ಗೆ ಪ್ರಶ್ನಿಸಿದಾಗ, "ನಿಮಗೆ ಅವರು ಏನಾದರೂ ಹೇಳಬಹುದು ಆದರೆ ನಮಗೆ ಯಾವುದೇ ದೂರುಗಳು ಬಂದಿಲ್ಲ" ಎಂದು ಹೇಳಿದ್ದಾರೆ.
ಫರೂಕಾಬಾದ್ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಮುಖೇಶ್ ರಜಪೂತ್ ಅವರು ಸಮಾಜವಾದಿ ಪಕ್ಷದ ನವಲ್ ಕಿಶೋರ್ ಶಾಕ್ಯಾ ಅವರನ್ನು 2,700 ಮತಗಳ ಅಂತರದಿಂದ ಸೋಲಿಸಿದ್ದಾರೆ. ಚುನಾವಣೆಯ ನಂತರ ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್, ಫರೂಕಾಬಾದ್ ಸೇರಿದಂತೆ ವಿವಿಧೆಡೆ ಅಧಿಕಾರಿಗಳು ಪಕ್ಷದ ಅಭ್ಯರ್ಥಿಗಳು ಹಲವಾರು ಸ್ಥಾನಗಳನ್ನು ಕಳೆದುಕೊಳ್ಳುವಂತೆ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಅಧಿಕಾರಿಗಳ ಮೇಲೆ ಬಿಜೆಪಿ ಒತ್ತಡ ಹೇರುತ್ತಿದೆ ಎಂದು ಕಾಂಗ್ರೆಸ್ ನ ಜೈರಾಮ್ ರಮೇಶ್ ಕೂಡ ಆರೋಪಿಸಿದ್ದರು.
ಫರೂಕಾಬಾದ್ ನಲ್ಲಿ ಬೂತ್ ಸಂಖ್ಯೆ 208, 140 ಮತ್ತು 193ರಲ್ಲಿ 5 ಶತಮಾನದಿಂದ 12 ಶತಮಾನದವರೆಗೆ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಡಿಲಿಟ್ ಮಾಡಲಾಗಿದೆ. ಇದು ಚುನಾವಣಾ ಆಯೋಗದ ಎಚ್ಚರಿಕೆಯ ಮಿತಿಯಾದ 2 ಶತಮಾನಕ್ಕಿಂತ ಗಮನಾರ್ಹವಾಗಿ ಹೆಚ್ಚಾಗಿದೆ. ಈ ಬೂತ್ ಗಳಲ್ಲಿ ಒಬಿಸಿ ಮತದಾರರು ಅಂದರೆ ಯಾದವ, ಶಾಕ್ಯ, ಮುಸ್ಲಿಂ ಮತ್ತು ದಲಿತ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಬೂತ್ 208ರಲ್ಲಿ 12 ಪ್ರತಿಶತ ಮತದಾರರನ್ನು ಅಂದರೆ 105 ಮತದಾರರನ್ನು ಪಟ್ಟಿಯಿಂದ ತೆಗೆದುಹಾಕಲಾಗಿತ್ತು. ಇಲ್ಲಿ 2022ರ ವಿಧಾನಸಭಾ ಚುನಾವಣೆಯಲ್ಲಿ ಸಮಾಜವಾದಿ ಪಕ್ಷವು ಗಣನೀಯ ಪ್ರಮಾಣದ ಮತಗಳನ್ನು ಪಡೆದಿತ್ತು. ಬೂತ್ ಸಂಖ್ಯೆ 140ರಲ್ಲಿ ಯಾದವ ಮತ್ತು ಶಾಕ್ಯ ಸಮುದಾಯಕ್ಕೆ ಸೇರಿದ ಜನರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದರು. ಇಲ್ಲಿ 9 ಪ್ರತಿಶತ ಅಂದರೆ 68 ಮತದಾರರನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ. ಬೂತ್ ಸಂಖ್ಯೆ 193ರಲ್ಲಿ ಮುಸ್ಲಿಂ ಮತ್ತು ದಲಿತ ಮತದಾರರು ಹೆಚ್ಚಾಗಿದ್ದು, ಈ ಬೂತ್ ನಲ್ಲಿ 9.5 ಶೇಕಡಾ ಅಂದರೆ 102 ಮತದಾರನ್ನು ಪಟ್ಟಿಯಿಂದ ಅಳಿಸಲಾಗಿದೆ.
ದದುಪುರ್ ಖುರ್ದ್, ನಾಗ್ಲಾ ಬಲ್ಲಭ್, ಕಿಲೇದಾರನ್, ರಾಮ್ ಪ್ರಸಾದ್ ಗೌರ್, ನಗ್ಲಾ ಜಲೀಮ್, ನಾಗ್ಲಾ ಗಿರ್ಧರ್, ನಾಗ್ಲಾ ಫೂಲ್ಸಹಾಯ್, ನಾಗ್ಲಾ ಕಾಮ್ಲೆ ಈ ಬೂತ್ಗಳಿಂದ ಒಟ್ಟು 275 ಮತದಾರರನ್ನು ಪಟ್ಟಿಯಿಂದ ತೆಗೆದು ಹಾಕಲಾಗಿದೆ.
ʼನ್ಯೂಸ್ ಲಾಂಡ್ರಿʼ ನಡೆಸಿದ ಮನೆ-ಮನೆ ಸಮೀಕ್ಷೆಯ ಸಮಯದಲ್ಲಿ ಶೇಕಡಾ 15ಕ್ಕಿಂತ ಹೆಚ್ಚು ಜನರು ನಮ್ಮನ್ನು ಮತದಾರರ ಪಟ್ಟಿಯಿಂದ ತಪ್ಪಾಗಿ ಅಳಿಸಲಾಗಿದೆ ಎಂದು ಹೇಳಿದ್ದಾರೆ. ಕೆಲವರನ್ನು ಮೃತಪಟ್ಟಿದ್ದಾರೆಂದು ಮತ್ತೆ ಕೆಲವರನ್ನು ವಿಳಾಸ ಬದಲಿಸಿದ್ದಾರೆ ಎಂದು ಕಾರಣಗಳನ್ನು ನೀಡಿ ಅಧಿಕಾರಿಗಳು ಮತದಾರರ ಪಟ್ಟಿಯಿಂದ ಹೆಸರನ್ನು ತೆಗೆದು ಹಾಕಿದ್ದಾರೆ ಎಂದು ವರದಿಯು ಬಹಿರಂಗಗೊಳಿಸಿದೆ.