Fact Check: ಉದ್ಯೋಗಾವಕಾಶಗಳ ಆಮಿಷವೊಡ್ಡುವ ನಕಲಿ ಸರ್ವ ಶಿಕ್ಷಾ ಅಭಿಯಾನ ವೆಬ್ಸೈಟ್ ಬಗ್ಗೆ ಇರಲಿ ಎಚ್ಚರ
ಹೊಸದಿಲ್ಲಿ: ಸರ್ವ ಶಿಕ್ಷಾ ಅಭಿಯಾನವು ಭಾರತದ ಶಾಲಾ ಶಿಕ್ಷಣ ಯೋಜನೆಯಾಗಿದ್ದು, ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವ ಮತ್ತು ಎಲ್ಲರಿಗೂ ಶಿಕ್ಷಣ ಲಭ್ಯತೆಯನ್ನು ಖಚಿತಪಡಿಸುವ ಗುರಿಯನ್ನು ಹೊಂದಿದೆ. ಇದು RTE ಕಾಯ್ದೆಯ ಅನುಷ್ಠಾನವನ್ನು ಬೆಂಬಲಿಸುವ ಜೊತೆಗೆ ರಾಷ್ಟ್ರೀಯ ಶಿಕ್ಷಣ ನೀತಿ(ಎನ್ಇಪಿ) 2020ರ ಶಿಫಾರಸುಗಳಿಗೆ ಅನುಗುಣವಾಗಿದೆ.
ಸರ್ವ ಶಿಕ್ಷಾ ಅಭಿಯಾನ ಯೋಜನೆಯ ಹೆಸರಿನಲ್ಲಿ ನಕಲಿ ವೆಬ್ಸೈಟ್ಗಳು ಉದ್ಯೋಗಾವಕಾಶಗಳ ಆಮಿಷವೊಡ್ಡಿ ಅಭ್ಯರ್ಥಿಗಳಿಗೆ ಹಣ ವಂಚಿಸುತ್ತಿರುವುದನ್ನು ಸುದ್ದಿಸಂಸ್ಥೆಯು ತನ್ನ ತನಿಖಾ ವರದಿಯಲ್ಲಿ ಬಹಿರಂಗಗೊಳಿಸಿದೆ.
ಸರ್ವ ಶಿಕ್ಷಾ ಅಭಿಯಾನವು ಎಲ್ಲರಿಗೂ ಶಾಲಾ ಶಿಕ್ಷಣದ ಲಭ್ಯತೆ,ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾಶಾಸ್ತ್ರ,ಲಿಂಗ ಸಮಾನತೆ,ಎಲ್ಲರನ್ನೂ ಒಳಗೊಂಡ ಶಿಕ್ಷಣ,ಗುಣಮಟ್ಟ ಸುಧಾರಣೆ,ಶಿಕ್ಷಕರ ತರಬೇತಿ,ವೃತ್ತಿಪರ ಶಿಕ್ಷಣ,ಕ್ರೆಡೆ ಮತ್ತು ದೈಹಿಕ ಶಿಕ್ಷಣ,ಡಿಜಿಟಲ್ ಉಪಕ್ರಮಗಳು ಮತ್ತು ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಬೆಂಬಲ ಇತ್ಯಾದಿಗಳು ಸೇರಿದಂತೆ ಶಾಲಾ ಶಿಕ್ಷಣದ ಸಮಗ್ರ ವಿಧಾನವನ್ನು ಒಳಗೊಂಡಿದೆ. ಯೋಜನೆಯು ಸರ್ವ ಶಿಕ್ಷಾ ಅಭಿಯಾನ,ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಾ ಅಭಿಯಾನ ಮತ್ತು ಶಿಕ್ಷಕ ತರಬೇತಿ ಕಾರ್ಯಕ್ರಮದ ಹಿಂದಿನ ಪ್ರತ್ಯೇಕ ಯೊಜನೆಯಗಳನ್ನು ಪರಿಣಾಮಕಾರಿಯಾಗಿ ಏಕೀಕರಿಸಿದೆ,ತನ್ಮೂಲಕ ಪೂರ್ವ-ಪ್ರಾಥಮಿಕದಿಂದ ಹಿಡಿದು 12ನೇ ತರಗತಿಯವರೆಗೆ ಸಂಪೂರ್ಣ ಶ್ರೇಣಿಯನ್ನು ಒಳಗೊಂಡಿದೆ. ಕೇಂದ್ರ ಸರಕಾರವು ಈ ಯೋಜನೆಯಡಿ ದೇಶಾದ್ಯಂತ ಶಿಕ್ಷಕರು ಮತ್ತು ಇತರ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳುತ್ತದೆ.
ಸರ್ವಶಿಕ್ಷಾಭಿಯಾನ ಹೆಸರಿನ ವೆಬ್ಸೈಟ್ವೊಂದು ಚಲಾವಣೆಯಲ್ಲಿದ್ದು, ಹಲವಾರು ಉದ್ಯೋಗ ನೇಮಕಾತಿ ಲಿಂಕ್ಗಳನ್ನು ಹೊಂದಿದೆ. ಉದ್ಯೋಗಾಕಾಂಕ್ಷಿ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶಗಳನ್ನು ಒದಗಿಸುವುದಾಗಿ ಈ ವೆಬ್ಸೈಟ್ ಹೇಳಿಕೊಂಡಿದೆ. ಪ್ರಾಥಮಿಕ ಶಾಲಾ ಶಿಕ್ಷಕರು,ಲ್ಯಾಬ್ ತಂತ್ರಜ್ಞರು,ಜವಾನರು ಇತ್ಯಾದಿ ಹುದ್ದೆಗಳಿಗಾಗಿ ಉದ್ಯೋಗಾವಕಾಶಗಳನ್ನು ಈ ವೆಬ್ಸೈಟ್ನಲ್ಲಿ ನೋಡಬಹುದು.
ಸತ್ಯ ಪರಿಶೀಲನೆ
ವೆಬ್ಸೈಟ್ ಹೇಳಿಕೊಂಡಿರುವುದು ಸಂಪೂರ್ಣ ಸುಳ್ಳಾಗಿದೆ. ಇದು ಅಸಲಿ ವೆಬ್ಸೈಟ್ ಅಲ್ಲ ಮತ್ತು ಭಾರತ ಸರಕಾರದ ಸಮಗ್ರ ಶಿಕ್ಷಾ ಅಭಿಯಾನ ಯೋಜನೆಗೆ ಸಂಬಂಧಿಸಿಲ್ಲ. ವೆಬ್ಸೈಟ್ ನ ಮುಖಪುಟವು ಭಾರತ ಸರಕಾರದ ಲಾಂಛನವನ್ನು ತೋರಿಸುವುದಿಲ್ಲ ಮತ್ತು ಸ್ಥಾಯಿ ಸ್ವರೂಪದ್ದಾಗಿದೆ.
ಈ ವೆಬ್ಸೈಟ್ ನಲ್ಲಿ ಪೋಸ್ಟ್ ಮಾಡಿರುವ ನೇಮಕಾತಿ ಜಾಹೀರಾತುಗಳಲ್ಲೊಂದನ್ನು ಸುದ್ದಿಸಂಸ್ಥೆಯು ಕ್ಲಿಕ್ ಮಾಡಿದಾಗ ಒಟ್ಟು ಖಾಲಿ ಹುದ್ದೆಗಳ ಸಂಖ್ಯೆ 98,305 ಎಂದು ಉಲ್ಲೇಖಿಸಿದ್ದು ಕಂಡು ಬಂದಿದೆ. ಇದು ನಿಜಕ್ಕೂ ದೊಡ್ಡ ಸಂಖ್ಯೆಯಾಗಿದೆ. ಶಿಕ್ಷಕರ ಹುದ್ದೆಗಳಿಗೆ ಅಗತ್ಯ ವಿದ್ಯಾರ್ಹತೆ 10,12ನೇ ತರಗತಿ ಮತ್ತು ಅದಕ್ಕೂ ಮೇಲ್ಪಟ್ಟ ಶಿಕ್ಷಣ.
‘ಅಪ್ಲೈ ನೌ’ ಮೇಲೆ ಕ್ಲಿಕ್ಕಿಸಿದಾಗ ವೆಬ್ಸೈಟ್ ಫೋನ್ ನಂ.ಮತ್ತು ಇಮೇಲ್ ಐಡಿ ಇತ್ಯಾದಿ ಸೇರಿದಂತೆ ಅರ್ಜಿದಾರರ ಎಲ್ಲ ವಿವರಗಳನ್ನು ಪಡೆದುಕೊಳ್ಳುತ್ತದೆ. ಪ್ರಕ್ರಿಯೆಯ ಕೊನೆಯಲ್ಲಿ ಅರ್ಜಿ ಶುಲ್ಕ 950 ರೂ.ಗಳನ್ನು ಪಾವತಿಸಲು ಕ್ಯೂಆರ್ ಕೋಡ್ ಅನ್ನೂ ನೀಡಲಾಗಿದೆ. ತೋರಿಸಲಾಗಿರುವ ಯುಪಿಐ ಐಡಿ sarvashiksha123@abcdicici ಆಗಿದ್ದರೂ, ಬ್ಯಾಂಕ್ ನಲ್ಲಿರುವ ಬಳಕೆದಾರನ ಹೆಸರು ‘ದೀಪಕ ಕುಮಾರ್’ಆಗಿದೆ, ಯಾವುದೇ ಸರಕಾರಿ ಇಲಾಖೆ ಅಥವಾ ಯೋಜನೆಯ ಹೆಸರಲ್ಲ.
ಪಿಐಬಿ ಫ್ಯಾಕ್ಟ್ ಚೆಕ್ ಕೂಡ ಇದು ನಕಲಿ ವೆಬ್ಸೈಟ್ ಆಗಿದೆ ಮತ್ತು ಭಾರತ ಸರಕಾರಕ್ಕೆ ಸಂಬಂಧಿಸಿಲ್ಲ ಎಂದು ಘೋಷಿಸಿದೆ.
ಅಮಾಯಕ ಅರ್ಜಿದಾರರನ್ನು ವಂಚಿಸಲು ಶಿಕ್ಷಣ ಇಲಾಖೆಯ ಯೋಜನೆಗಳನ್ನೇ ಹೋಲುವ ಹೆಸರುಗಳೊಂದಿಗೆ ಹಲಾವರು ವೆಬ್ಸೈಟ್ ಗಳನ್ನು ಸೃಷ್ಟಿಸಿರುವುದು ಶಿಕ್ಷಣ ಸಚಿವಾಲಯದ ಗಮನಕ್ಕೆ ಬಂದಿದೆ ಎಂದು ಪಿಐಬಿ ತನ್ನ ವೆಬ್ಸೈಟ್ ನಲ್ಲಿ ಸ್ಪಷ್ಟೀಕರಣವನ್ನೂ ಪ್ರಕಟಿಸಿದೆ.
ಈ ನಕಲಿ ವೆಬ್ಸೈಟ್ ಗಳು ಮೂಲ ವೆಬ್ಸೈಟ್ ಗಳಂತೆಯೇ ವಿನ್ಯಾಸ, ವಿಷಯ ಮತ್ತು ಉದ್ಯೋಗಾವಕಾಶಗಳ ಪ್ರಸ್ತುತಿಯ ಮೂಲಕ ಉದ್ಯೋಗಾಕಾಂಕ್ಷಿಗಳನ್ನು ದಾರಿ ತಪ್ಪಿಸುತ್ತಿವೆ ಮತ್ತು ಅರ್ಜಿ ಶುಲ್ಕಗಳನ್ನು ಕೇಳುತ್ತಿವೆ. ಈ ವೆಬ್ಸೈಟ್ ಗಳು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಗಮನಕ್ಕೆ ಬಂದಿವೆ, ಆದರೂ ಉದ್ಯೋಗಗಳ ಭರವಸೆ ನೀಡುವ ಮತ್ತು ನೇಮಕಾತಿ ಪ್ರಕ್ರಿಯೆಗಾಗಿ ಹಣಕ್ಕೆ ಬೇಡಿಕೆಯಿಡುವ ಇಂತಹ ಇನ್ನಷ್ಟು ವೆಬ್ಸೈಟ್ ಗಳು/ಸಾಮಾಜಿಕ ಮಾಧ್ಯಮ ಖಾತೆಗಳು ಇರಬಹುದು.
ಸಾರ್ವಜನಿಕರು ಇಂತಹ ವೆಬ್ಸೈಟ್ ಗಳಲ್ಲಿ ಉದ್ಯೋಗಾವಕಾಶಗಳಿಗೆ ಅರ್ಜಿ ಸಲ್ಲಿಸುವುದನ್ನು ತಪ್ಪಿಸಿಕೊಳ್ಳಲು ಮತ್ತು ತಮ್ಮ ಸ್ವಂತ ಹಿತಾಸಕ್ತಿಗಳ ಸುರಕ್ಷತೆಗಾಗಿ ಸಂಬಂಧಿಸಿದ ಇಲಾಖೆಯ ಅಧಿಕೃತ ವೆಬ್ಸೈಟ್/ವೈಯಕ್ತಿಕ ವಿಚಾರಣೆ/ ದೂರವಾಣಿ ಸಂಖ್ಯೆ/ಇ-ಮೇಲ್ ಅನ್ನು ಸಂಪರ್ಕಿಸಿ ವೆಬ್ಸೈಟ್ ಅಧಿಕೃತವೇ ಎಂದು ಖಚಿತಪಡಿಸಿಕೊಳ್ಳುವುದು ಅತ್ಯಗತ್ಯವಾಗಿದೆ. ಇಂತಹ ವೆಬ್ಸೈಟ್ಗಳಲ್ಲಿ ಅರ್ಜಿ ಸಲ್ಲಿಸುವ ವ್ಯಕ್ತಿಯು ಅಪಾಯ,ವೆಚ್ಚ ಮತ್ತು ಪರಿಣಾಮಗಳಿಗೆ ಸ್ವತಃ ಹೊಣೆಯಾಗಿರುತ್ತಾನೆ ಎಂಬ ಸ್ಪಷ್ಟೀಕರಣವನ್ನು ಪಿಐಬಿ ಮಾರ್ಚ್ 2022ರಲ್ಲಿ ಪ್ರಕಟಿಸಿತ್ತು. ಆದರೆ ಈ ನಕಲಿ ವೆಬ್ಸೈಟ್ಗಳು ಮತ್ತೆ ತಲೆಯೆತ್ತಿದ್ದು, ಉದ್ಯೋಗಾವಕಾಶಗಳ ಹೆಸರಿನಲ್ಲಿ ಅಮಾಯಕ ಅಭ್ಯರ್ಥಿಗಳನ್ನು ವಂಚಿಸುತ್ತಿವೆ.
https://www.sarvashikshaabhiyan.com ವೆಬ್ಸೈಟ್ ಅಧಿಕೃತವಲ್ಲ ಮತ್ತು ಭಾರತ ಸರಕಾರದ ಸಮಗ್ರ ಶಿಕ್ಷಾ ಅಭಿಯಾನಕ್ಕೆ ಸಂಬಂಧಿಸಿಲ್ಲ. ಇಂತಹ ವೆಬ್ಸೈಟ್ಗಳ ಬಗ್ಗೆ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ ಎಂದು ತನಿಖಾ ವರದಿಯು ಬೆಟ್ಟು ಮಾಡಿದೆ.
ಈ ಲೇಖನವನ್ನು ಮೊದಲು telugupost.com ಪ್ರಕಟಿಸಿದೆ. ʼಶಕ್ತಿ ಕಲೆಕ್ಟಿವ್ʼನ ಭಾಗವಾಗಿ ವಾರ್ತಾ ಭಾರತಿ ಅನುವಾದಿಸಿದೆ.