"ಚುನಾವಣಾ ಆಯೋಗ ಪಕ್ಷಪಾತದಿಂದ ವರ್ತಿಸುತ್ತಿದೆ": ಚುನಾವಣಾ ನಿಯಮಗಳಿಗೆ ಕೇಂದ್ರದ ತಿದ್ದುಪಡಿಗೆ ಖರ್ಗೆ ಖಂಡನೆ
ಹೊಸದಿಲ್ಲಿ: ಕೆಲವು ವಿದ್ಯುನ್ಮಾನ ದಾಖಲೆಗಳಿಗೆ ಸಾರ್ವಜನಿಕ ಪ್ರವೇಶವನ್ನು ನಿರ್ಬಂಧಿಸಿ ಚುನಾವಣಾ ನಿರ್ವಹಣೆ ನಿಯಮಗಳಿಗೆ ತಿದ್ದುಪಡಿಯನ್ನು ತಂದಿರುವುದಕ್ಕಾಗಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಕೇಂದ್ರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕೇಂದ್ರವು ಚುನಾವಣಾ ಆಯೋಗದ ಸಮಗ್ರತೆಯನ್ನು ನಾಶಗೊಳಿಸುತ್ತಿದೆ ಮತ್ತು ಅದು ಸ್ವತಂತ್ರವಾಗಿ ವರ್ತಿಸುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ.
ತಿದ್ದುಪಡಿಯು ಚುನಾವಣಾ ಆಯೋಗದ ಸಮಗ್ರತೆಯ ಮೇಲಿನ ಮತ್ತೊಂದು ದಾಳಿ ಎಂದು ಸೋಮವಾರ ಎಕ್ಸ್ ಪೋಸ್ಟ್‌ನಲ್ಲಿ ಆರೋಪಿಸಿರುವ ಖರ್ಗೆ,ಮೋದಿ ಸರಕಾರವು ಈ ಹಿಂದೆ ಚುನಾವಣಾ ಆಯುಕ್ತರನ್ನು ನೇಮಕಗೊಳಿಸುವ ಆಯ್ಕೆ ಸಮಿತಿಯಿಂದ ಭಾರತ ಮುಖ್ಯ ನ್ಯಾಯಾಧೀಶರನ್ನು ತೆಗೆದುಹಾಕಿತ್ತು ಮತ್ತು ಈಗ ಉಚ್ಚ ನ್ಯಾಯಾಲಯದ ಆದೇಶದ ಬಳಿಕವೂ ಚುನಾವಣಾ ಮಾಹಿತಿಗೆ ತಡೆಯೊಡ್ಡುತ್ತಿದೆ ಎಂದು ಹೇಳಿದ್ದಾರೆ.
ಚುನಾವಣಾ ಆಯೋಗವು ಪಕ್ಷಪಾತದಿಂದ ವರ್ತಿಸುತ್ತಿದೆ ಎಂದು ಆರೋಪಿಸಿರುವ ಖರ್ಗೆ, ಪ್ರತಿಬಾರಿ ಕಾಂಗ್ರೆಸ್ ಪಕ್ಷವು ಮತದಾರರ ಹೆಸರುಗಳ ಅಳಿಸುವಿಕೆ ಮತ್ತು ಇವಿಎಮ್‌ಗಳಲ್ಲಿ ಪಾರದರ್ಶಕತೆಯ ಕೊರತೆಯಂತಹ ನಿರ್ದಿಷ್ಟ ಚುನಾವಣಾ ಅಕ್ರಮಗಳ ಬಗ್ಗೆ ದೂರು ಸಲ್ಲಿಸಿದಾಗ ಚುನಾವಣಾ ಆಯೋಗವು ಲಘುವಾಗಿ ಪ್ರತಿಕ್ರಿಯಿಸಿದೆ, ಕೆಲವು ಗಂಭೀರ ದೂರುಗಳ ಸ್ವೀಕೃತಿಯ ಬಗ್ಗೆ ಮಾಹಿತಿಯನ್ನೂ ಅದು ನೀಡಲಿಲ್ಲ ಎಂದು ಬೆಟ್ಟು ಮಾಡಿದರು.
ಚುನಾವಣಾ ಆಯೋಗವು ಅರೆ-ನ್ಯಾಯಾಂಗ ಸಂಸ್ಥೆಯಾಗಿದ್ದೂ ಅದು ಸ್ವತಂತ್ರವಾಗಿ ನಡೆದುಕೊಳ್ಳುತ್ತಿಲ್ಲ ಎಂದು ಇದು ಮತ್ತೊಮ್ಮೆ ಸಾಬೀತುಗೊಳಿಸಿದೆ. ಅದರ ರಕ್ಷಣೆಗಾಗಿ ಕಾಂಗ್ರೆಸ್ ಪ್ರತಿಯೊಂದೂ ಕ್ರಮವನ್ನು ತೆಗೆದುಕೊಳ್ಳಲಿದೆ ಎಂದರು.