ಕೇರಳ | ಕ್ರಿಸ್ಮಸ್ ಸಂಭ್ರಮಾಚರಣೆ ವೇಳೆ ಶಿಕ್ಷಕರಿಗೆ ಬೆದರಿಕೆ: ಮೂವರು VHP ಕಾರ್ಯಕರ್ತರ ಬಂಧನ
ಪಾಲಕ್ಕಾಡ್: ಕ್ರಿಸ್ಮಸ್ ಸಂಭ್ರಮಾಚರಣೆ ನಡೆಸುತ್ತಿದ್ದ ಶಿಕ್ಷಕರಿಗೆ ಬೆದರಿಕೆ ಒಡ್ಡಿದ ಆರೋಪದ ಮೇಲೆ ಮೂವರು VHP ಕಾರ್ಯಕರ್ತರನ್ನು ಪೊಲೀಸರು ಬಂಧಿಸಿರುವ ಘಟನೆ ಕೇರಳದ ಪಾಲಕ್ಕಾಡ್ ನಲ್ಲಿ ನಡೆದಿದೆ.
ಪೊಲೀಸರು ವಶಕ್ಕೆ ಪಡೆದಿರುವವರನ್ನು ಪಂಚಾಯತಿ ಸಮಿತಿಯ ಅಧ್ಯಕ್ಷ ಕೆ.ವೇಲಾಯುಧನ್, ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ಕೆ.ಅನಿಲ್ ಕುಮಾರ್ ಹಾಗೂ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಜಂಟಿ ಕಾರ್ಯದರ್ಶಿ ವಿ.ಸುಶಾನನ್ ಎಂದು ಗುರುತಿಸಲಾಗಿದೆ.
ಈ ಘಟನೆಯು ಡಿಸೆಂಬರ್ 20ರಂದು ಪಾಲಕ್ಕಾಡ್ ನ ಚಿತ್ತೂರಿನಲ್ಲಿರುವ ನಲ್ಲೆಪುಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಶಾಲೆಯಲ್ಲಿ ಆಯೋಜಿಸಲಾಗಿದ್ದ ಕ್ರಿಸ್ಮಸ್ ಔತಣಕೂಟದ ಸಂದರ್ಭದಲ್ಲಿ ಈ ಮೂವರು ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಬೆದರಿಕೆ ಒಡ್ಡಿದ್ದರು ಎಂದು ಆರೋಪಿಸಲಾಗಿದೆ. ಔತಣಕೂಟದಲ್ಲಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಧರಿಸಿದ್ದ ವಸ್ತ್ರಗಳ ಕುರಿತು ಪ್ರಶ್ನಿಸಿರುವ ಆರೋಪಿಗಳು, ನಂತರ ಮಕ್ಕಳ ಎದುರೇ ಶಿಕ್ಷಕರನ್ನು ನಿಂದಿಸಿದ್ದಾರೆ ಎಂದೂ ಆಪಾದಿಸಲಾಗಿದೆ.
ಸಮಾರಂಭದಲ್ಲಿ ನಡೆದ ಘಟನೆಯ ಕುರಿತು ಶಾಲಾ ಆಡಳಿತವು ಅಧಿಕೃತವಾಗಿ ವರದಿ ಸಲ್ಲಿಸಿದ್ದು, ಇದರ ಬೆನ್ನಿಗೇ ಪೊಲೀಸರು ವಿಚಾರಣೆ ಕೈಗೊಂಡಿದ್ದಾರೆ. ಶಂಕಿತ ಆರೋಪಿಗಳನ್ನು ವಶಕ್ಕೆ ಪಡೆದ ಚಿತ್ತೂರ್ ಪೊಲೀಸರು, ಸ್ಥಳೀಯ ನ್ಯಾಯಾಲಯದೆದುರು ಅವರನ್ನೆಲ್ಲ ಹಾಜರು ಪಡಿಸಿದ್ದಾರೆ. ವಿಚಾರಣೆಯ ನಂತರ, ಅವರನ್ನು ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ.
“ಸಾರ್ವಜನಿಕ ಸೇವಕರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಹಾಗೂ ಅವರಿಗೆ ಬೆದರಿಕೆ ಒಡ್ಡಿದ ಆರೋಪದಡಿ ಎಲ್ಲ ಮೂವರು ಆರೋಪಿಗಳನ್ನು ಶನಿವಾರ ಬಂಧಿಸಲಾಗಿದೆ” ಎಂದು ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ ಗಳಾದ 329(3), 296(ಬಿ), 351(2), 132 ಹಾಗೂ 196ರ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.