ನೀಟ್‌ ವಿವಾದ: ಕೌನ್ಸೆಲಿಂಗ್‌ಗೆ ತಡೆ ಹೇರಲು ಸುಪ್ರೀಂ ಕೋರ್ಟ್‌ ನಕಾರ

Update: 2024-06-11 06:51 GMT

ಹೊಸದಿಲ್ಲಿ: ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಇತರ ಅವ್ಯವಹಾರಗಳ ಆರೋಪಗಳಿರುವ ಹೊರತಾಗಿಯೂ ವೈದ್ಯಕೀಯ ಕಾಲೇಜುಗಳಿಗೆ ದಾಖಲಾತಿಗಾಗಿ ನಡೆಯುವ ಕೌನ್ಸೆಲಿಂಗ್‌ಗೆ ತಡೆ ಹೇರಲು ಸುಪ್ರೀಂ ಕೋರ್ಟ್‌ ಇಂದು ನಿರಾಕರಿಸಿದೆ.

ಮೇ ತಿಂಗಳಲ್ಲಿ ನಡೆದ ನೀಟ್‌ ಪರೀಕ್ಷೆ ರದ್ದುಗೊಳಿಸಬೇಕು ಮತ್ತು ಪ್ರಶ್ನೆಪತ್ರಿಕೆ ಸೋರಿಕೆ ಕುರಿತಂತೆ ತನಿಖೆ ನಡೆಸಬೇಕೆಂದು ಕೋರಿ ಸಲ್ಲಿಸಲಾಗಿರುವ ಅರ್ಜಿಗಳನ್ನು ವಿಚಾರಣೆಗೆ ಕೈಗೆತ್ತಿಕೊಂಡ ನ್ಯಾಯಮೂರ್ತಿಗಳಾದ ವಿಕ್ರಮ್‌ ನಾಥ್‌ ಮತ್ತು ಅಹ್ಸಾನುದ್ದೀನ್‌ ಅಮಾನುಲ್ಲಾ ಅವರ ರಜಾಕಾಲದ ಪೀಠವು ನೋಟಿಸ್‌ ಜಾರಿಗೊಳಿಸಿ ನ್ಯಾಷನಲ್‌ ಟೆಸ್ಟಿಂಗ್‌ ಏಜನ್ಸಿ (ಎನ್‌ಟಿಎ) ಇಂದ ಪ್ರತಿಕ್ರಿಯೆ ಕೋರಿದೆ. ಮುಂದಿನ ವಿಚಾರಣೆಯನ್ನು ಜುಲೈ 8ರಂದು ನಡೆಸಲು ನ್ಯಾಯಾಲು ನಿರ್ಧರಿಸಿದೆ.

“ನಾವು ಕೌನ್ಸೆಲಿಂಗ್‌ ನಿಲ್ಲಿಸುವುದಿಲ್ಲ. ನೀವು ಇನ್ನೂ ವಾದ ಮುಂದುವರಿಸಿದರೆ ಅರ್ಜಿಯನ್ನು ವಜಾಗೊಳಿಸುತ್ತೇವೆ,” ಎಂದು ನ್ಯಾಯಾಲಯ ಹೇಳಿದೆ.

ಪಾಟ್ನಾದಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯಾಗಿತ್ತು ಮತ್ತು ರಾಜಸ್ಥಾನದಲ್ಲಿ ತಪ್ಪಾದ ಪ್ರಶ್ನೆಪತ್ರಿಕೆಗಳನ್ನು ಅಭ್ಯರ್ಥಿಗಳಿಗೆ ನೀಡಲಾಗಿತ್ತು ಎಂಬ ಆರೋಪಗಳನ್ನು ಸುಪ್ರಿಂ ಕೋರ್ಟ್‌ ಮುಂದಿರುವ ಅರ್ಜಿಗಳಲ್ಲಿ ಒಂದು ಉಲ್ಲೇಖಿಸಿದೆ.

ಇಂತಹುದೇ ಅರ್ಜಿಗಳನ್ನು ದಿಲ್ಲಿ ಮತ್ತು ಕೊಲ್ಕತ್ತಾ ಹೈಕೋರ್ಟ್‌ಗಳ ಮುಂದೆಯೂ ವಿಚಾರಣೆಗೆ ಬಾಕಿ ಇವೆ.

ಇತ್ತೀಚೆಗೆ ಪ್ರಕಟಗೊಂಡ ನೀಟ್‌ ಫಲಿತಾಂಶಗಳ ವ್ಯಾಪಕ ಅಸಮಾಧಾನ ವ್ಯಕ್ತವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News