ಅಸ್ಸಾಂ ಎನ್‌ಆರ್‌ಸಿಗೆ ಅರ್ಜಿ ಸಲ್ಲಿಸಿದವರಿಗೆ ಮಾತ್ರ ಆಧಾರ್: ಸಿಎಂ ಹಿಮಂತ ಬಿಸ್ವಾ ಶರ್ಮಾ
ಹೊಸದಿಲ್ಲಿ: ರಾಷ್ಟ್ರೀಯ ನಾಗರಿಕರ ನೋಂದಣಿ (NRC)ಗೆ ಅರ್ಜಿ ಸಲ್ಲಿಸದೆ ಆಧಾರ್ ಕಾರ್ಡ್ ಗೆ ಮಾತ್ರ ಅರ್ಜಿ ಸಲ್ಲಿಸಿದರೆ ಅಂತಹ ವ್ಯಕ್ತಿಗಳ ಅರ್ಜಿಯನ್ನು ತಿರಸ್ಕರಿಸಲಾಗುತ್ತದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ. ಆದರೆ, ಆಧಾರ್ ದಾಖಲೆಗಾಗಿ ಅರ್ಹತಾ ಮಾನದಂಡಗಳನ್ನು ತಿದ್ದುಪಡಿ ಮಾಡಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿಲ್ಲ ಎಂದು ವಕೀಲರು ಮತ್ತು ಸಾಮಾಜಿಕ ಕಾರ್ಯಕರ್ತರು ಅಭಿಪ್ರಾಯಪಟ್ಟಿದ್ದಾರೆ.
ಆಧಾರ್ ಒಂದು ವಿಶಿಷ್ಟವಾದ 12 ಅಂಕಿಯ ಗುರುತಿನ ಸಂಖ್ಯೆಯಾಗಿದ್ದು, ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವು ಭಾರತದ ನಿವಾಸಿಗಳಿಗೆ ನೀಡುತ್ತದೆ. ನಮ್ಮ ವ್ಯವಸ್ಥೆಯನ್ನು ಬಲಪಡಿಸಬೇಕಾಗಿದೆ. ಅದಕ್ಕಾಗಿ ಆಧಾರ್ ಕಾರ್ಡ್ ಮಾನದಂಡಗಳನ್ನು ಕಠಿಣಗೊಳಿಸಲು ನಿರ್ಧರಿಸಿದ್ದೇವೆ ಎಂದು ಶರ್ಮಾ ಹೇಳಿದ್ದಾರೆ.
ಸೆಪ್ಟೆಂಬರ್ 7ರಂದು, ʼಅಸ್ಸಾಂನಲ್ಲಿ ಆಧಾರ್ ಪ್ರಕ್ರಿಯೆಗಳನ್ನು ಕಠಿಣಗೊಳಿಸಲಾಗುವುದು. ಆಧಾರ್ ಗೆ ಅರ್ಜಿ ಸಲ್ಲಿಸುವಾಗ ಅರ್ಜಿದಾರರು ತಮ್ಮ ರಾಷ್ಟ್ರೀಯ ನಾಗರಿಕರ ನೋಂದಣಿ ಅರ್ಜಿ ಸಂಖ್ಯೆಯನ್ನು ಒದಗಿಸುವುದು ಕಡ್ಡಾಯವಾಗಿದೆ. ಈ ಪ್ರಕ್ರಿಯೆ ಅಸ್ಸಾಂನಲ್ಲಿ ಯಾವುದೇ ಶಂಕಿತ ವಿದೇಶಿಗರು ಆಧಾರ್ ಕಾರ್ಡ್ಗಳನ್ನು ಪಡೆಯಲು ಸಾಧ್ಯವಿಲ್ಲ ಎನ್ನುವುದನ್ನು ಖಚಿತಪಡಿಸುತ್ತದೆ ಮತ್ತು ವಿದೇಶಿಯರ ಅಕ್ರಮ ಪ್ರವೇಶವನ್ನು ತಡೆಯುತ್ತದೆ ಎಂದು ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಹೇಳಿದ್ದರು.
ಕಳೆದ ಎರಡು ತಿಂಗಳಲ್ಲಿ ಅಸ್ಸಾಂ, ತ್ರಿಪುರಾ ಪೋಲೀಸರು ಮತ್ತು ಬಿಎಸ್ಎಫ್ ಗಡಿ ಭದ್ರತಾ ಪಡೆ ಹಲವಾರು ನುಸುಳುಕೋರರನ್ನು ಬಂಧಿಸಿದೆ. ಅದಕ್ಕಾಗಿಯೇ ಬಾಂಗ್ಲಾದೇಶದಿಂದ ವಲಸೆ ನಮಗೆ ಕಳವಳಕಾರಿಯಾಗಿದೆ ಎಂದು ಶರ್ಮಾ ಹೇಳಿದ್ದರು.
ವಲಸಿಗರನ್ನು ಪತ್ತೆಹಚ್ಚುವ ದೃಷ್ಟಿಯಿಂದ ಅಸ್ಸಾಂ 2019ರ ಆ. 31ರಂದು NRC ಪ್ರಕಟಿಸಿತ್ತು. ಅಸ್ಸಾಂನ ನಿವಾಸಿಗಳು ತಾವು ಅಥವಾ ಅವರ ಪೂರ್ವಜರು ಅಸ್ಸಾಂ ಅನ್ನು ಮಾರ್ಚ್ 24, 1971ರ ಮಧ್ಯರಾತ್ರಿಯ ಮೊದಲು ಪ್ರವೇಶಿಸಿದ್ದಾರೆ ಎಂದು ಸಾಬೀತುಪಡಿಸಬೇಕಾಗಿತ್ತು. 19 ಲಕ್ಷಕ್ಕೂ ಹೆಚ್ಚು ವ್ಯಕ್ತಿಗಳು ಅಥವಾ 5.77% ಅರ್ಜಿದಾರರು ಅಂತಿಮ ಪಟ್ಟಿಯಿಂದ ಹೊರಗುಳಿದಿದ್ದರು.
ಆಧಾರ್ ಗೆ ದಾಖಲೆಗಾಗಿ ಅರ್ಹತಾ ಮಾನದಂಡಗಳನ್ನು ತಿದ್ದುಪಡಿ ಮಾಡಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿಲ್ಲ ಎಂದು ವಕೀಲರು ಮತ್ತು ಸಾಮಾಜಿಕ ಕಾರ್ಯಕರ್ತರು ಅಭಿಪ್ರಾಯಪಟ್ಟಿದ್ದಾರೆ.
ಆಧಾರ್ ನೀಡಲು ಹೊಸ ಪ್ರಮಾಣಿತ ಕಾರ್ಯಾಚರಣಾ ವಿಧಾನವನ್ನು ಜಾರಿಗೆ ತರಲು ರಾಜ್ಯ ಸರ್ಕಾರದ ʼಸಾಮಾನ್ಯ ಆಡಳಿತ ವಿಭಾಗವು ನೋಡಲ್ ಏಜೆನ್ಸಿಯಾಗಲಿದೆ. ಜಿಲ್ಲಾ ಮಟ್ಟದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿಗಳು ಮತ್ತು ಕಂದಾಯ ಅಧಿಕಾರಿಗಳು ಇದನ್ನು ಮೇಲ್ವಿಚಾರಣೆ ಮಾಡಲಿದ್ದಾರೆ ಎಂದು ಶರ್ಮಾ ಹೇಳಿದ್ದಾರೆ,.
ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವು ಆಧಾರ್ಗಾಗಿ ಹೊಸ ಅರ್ಜಿಯನ್ನು ಪರಿಶೀಲನೆಗಾಗಿ ರಾಜ್ಯ ಸರ್ಕಾರಕ್ಕೆ ಕಳುಹಿಸಲಿದೆ. ಇದರ ನಂತರ, ಅರ್ಜಿದಾರರು ಅಥವಾ ಅವರ ಕುಟುಂಬವು ನಾಗರಿಕರ ರಾಷ್ಟ್ರೀಯ ನೋಂದಣಿಗೆ ಸೇರ್ಪಡೆಗೊಳ್ಳಲು ಅರ್ಜಿ ಸಲ್ಲಿಸಿದ್ದರೆ ಸರ್ಕಲ್ ಅಧಿಕಾರಿ ಅರ್ಜಿಯನ್ನು ಪರಿಶೀಲಿಸುತ್ತಾರೆ. ಇವರು ಎನ್ಆರ್ಸಿಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ಕಂಡುಬಂದರೆ, ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಸರ್ಕಲ್ ಆಫೀಸರ್ ಪರಿಶೀಲನೆ ನಡೆಸುತ್ತಾರೆ. ಅಧಿಕಾರಿ ಸಂಪೂರ್ಣ ಪರಿಶೀಲನೆ ಬಳಿಕ ಆಧಾರ್ ಗೆ ಅನುಮೋದನೆ ನೀಡಲಿದ್ದಾರೆ ಎಂದು ಹೇಳಿದ್ದಾರೆ.