ಮರಾಠಾ ನಾಯಕರಾಗಿ ಅಜಿತ್ ಪವಾರ್: ಪತ್ನಿಗೆ ಭವ್ಯ ಬಂಗಲೆ

Update: 2024-12-12 02:38 GMT

PC: PTI

ಹೊಸದಿಲ್ಲಿ: ಎನ್ ಸಿಪಿಯ ರಾಜ್ಯಸಭಾ ಸದಸ್ಯೆ ಸುನೇತ್ರಾ ಅಜಿತ್ ಪವಾರ್ ಅವರಿಗೆ ಸರ್ಕಾರಿ ವಸತಿ ವ್ಯವಸ್ಥೆಯಲ್ಲಿ ಎರಡನೇ ಅತಿ ದೊಡ್ಡ ವರ್ಗದ ಬಂಗಲೆ ಅಂದರೆ ಟೈಪ್-7 ಬಂಗಲೆಯನ್ನು ಜನಪಥ ರಸ್ತೆಯಲ್ಲಿ (ಸಂಖ್ಯೆ 11) ಹಂಚಿಕೆ ಮಾಡಲಾಗಿದೆ. ಇದು ಶರದ್ ಪವಾರ್ ಅವರ ಅಧಿಕೃತ ನಿವಾಸವಾದ (ನಂ. 6, ಜನಪಥ) ಟೈಪ್-8 ಬಂಗಲೆಯ ಎದುರಿನಲ್ಲಿದೆ. ನಾಲ್ಕು ಬಾರಿಯ ಸಂಸದೆ, ಪುತ್ರಿ ಸುಪ್ರಿಯಾ ಸುಳೆ ಕೂಡಾ ಶರದ್ ಪವಾರ್ ಜತೆ ವಾಸವಿದ್ದಾರೆ.

ಮೊದಲ ಬಾರಿ ಸಂಸದೆಯಾಗಿ ಆಯ್ಕೆಯಾಗಿರುವ ಸುನೇತ್ರಾ ಅವರಿಗೆ ಭವ್ಯ ಬಂಗಲೆಯನ್ನು ನೀಡಿರುವುದು ಚರ್ಚೆಗೆ ಗ್ರಾಸವಾಗಿದೆ. ನಿಯಮಾನುಸಾರ ಅವರಿಗೆ 2ನೇ ದೊಡ್ಡ ವರ್ಗದ ಬಂಗಲೆಯನ್ನು ಹಂಚಿಕೆ ಮಾಡುವಂತಿಲ್ಲ. ಇತ್ತೀಚೆಗೆ ನಡೆದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಸುನೇತ್ರಾ ಪತಿ ಅಜಿತ್ ಪವಾರ್, ಮಾವ ಶರದ್ ಪವಾರ್ ಅವರಿಗಿಂತ ಪ್ರಬಲ ಮರಾಠಾ ನಾಯಕರಾಗಿ ಹೊರಹೊಮ್ಮಿದ ಹಿನ್ನೆಲೆಯಲ್ಲಿ ಈ ಹಂಚಿಕೆ ಮಾಡಲಾಗಿದೆ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.

ಬಿಜೆಪಿ ಮಿತ್ರಪಕ್ಷವಾಗಿ ಸ್ಪರ್ಧಿಸಿದ್ದ ಎನ್ ಸಿಪಿ ಒಟ್ಟು 49 ಸ್ಥಾನಗಳನ್ನು ಗೆದ್ದಿದ್ದು, ಮರಾಠಾವಾಡ ಪ್ರದೇಶದಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಅಜಿತ್ ಪವಾರ್ ಸಿಎಂ ಹುದ್ದೆಗೆ ದೇವೇಂದ್ರ ಫಡ್ನವೀಸ್ ಅವರನ್ನು ಬೆಂಬಲಿಸಿದ ಮೊದಲ ನಾಯಕರು.

ಲೋಕಸಭೆಯಲ್ಲಿ ಶೂನ್ಯಸಾಧನೆ ಮಾಡಿದ ಕೆಲವೇ ದಿನಗಳಲ್ಲಿ ಅಂದರೆ ಜೂನ್ 18ರಂದು ಸುನೇತ್ರಾ ರಾಜ್ಯಸಭೆಗೆ ಆಯ್ಕೆಯಾಗಿದ್ದರು. ಅತ್ತಿಗೆ ಸುಪ್ರಿಯಾ ಸುಳೆ ವಿರುದ್ಧ ಬಾರಾಮತಿ ಕ್ಷೇತ್ರದಲ್ಲಿ ಸುನೇತ್ರಾ ಸೋಲು ಅನುಭವಿಸಿದ್ದರು. ಸುಳೇ ವಿರುದ್ಧ ಪತ್ನಿಯನ್ನು ಕಣಕ್ಕಿಳಿಸಿದ್ದು ದೊಡ್ಡ ಪ್ರಮಾದ ಎಂದು ಆ ಬಳಿಕ ಅಜಿತ್ ಹೇಳಿಕೆ ನೀಡಿದ್ದರು.

ಸುನೇತ್ರಾ ಅವರಿಗೆ ಹಂಚಿಕೆ ಮಾಡಲಾಗಿರುವ ಭವ್ಯ ಬಂಗಲೆ ರಾಜ್ಯಸಭೆಯ ಅಧೀನದಲ್ಲಿದ್ದು, ಮೇಲ್ಮನೆಯ ಸಮಿತಿ ಇದನ್ನು ಹಂಚಿಕೆ ಮಾಡಿದೆ. ಸಾಮಾನ್ಯ ವರ್ಗದಲ್ಲಿರುವ ಶರದ್ ಪವಾರ್ ಬಂಗಲೆಯನ್ನು ಗೃಹನಿರ್ಮಾಣ ಮತ್ತು ನಗರ ವ್ಯವಹಾರಗಳ ಸಚಿವಾಲಯ ನಿರ್ವಹಿಸುತ್ತದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News