ಕೊಯಂಬತ್ತೂರು: ಒಳಚರಂಡಿಗಳನ್ನು ಸ್ವಚ್ಛಗೊಳಿಸಲು ಇನ್ನೂ ಕಾರ್ಮಿಕರನ್ನೇ ಬಳಸುತ್ತಿರುವ ಸ್ಥಳೀಯಾಡಳಿತ

Update: 2024-03-11 12:33 GMT

ಸಾಂದರ್ಭಿಕ ಚಿತ್ರ (PTI)

ಕೊಯಂಬತ್ತೂರು: ಒಳಚರಂಡಿ ಸ್ವಚ್ಛಗೊಳಿಸಲು ಯಂತ್ರಗಳನ್ನು ಬಳಸುವ ಬದಲು ಕಾರ್ಮಿಕರನ್ನೇ ಅಮಾನವೀಯವಾಗಿ ಹಾಗೂ ಅಪಾಯಕಾರಿಯಾಗಿ ಬಳಸುವ ಪದ್ಧತಿಯನ್ನು ಹಂತಹಂತವಾಗಿ ನಿರ್ಮೂಲನೆ ಮಾಡುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿರುವ ಹೊರತಾಗಿಯೂ ಈ ಪದ್ಧತಿ ಇನ್ನೂ ಜಾರಿಯಲ್ಲಿದೆ ಎಂದು newindianexpress.com ವರದಿ ಮಾಡಿದೆ.

ಪ್ರದೇಶ ಮತ್ತು ಆದಾಯ ಗಳಿಕೆ ವಿಚಾರದಲ್ಲಿ ತಮಿಳುನಾಡಿನ ಎರಡನೇ ಅತ್ಯಂತ ದೊಡ್ಡ ನಗರಪಾಲಿಕೆಯಾಗಿರುವ ಕೊಯಂಬತ್ತೂರು ನಗರಪಾಲಿಕೆ ಇನ್ನೂ ಒಳಚರಂಡಿ ಸ್ವಚ್ಚಗೊಳಿಸಲು, ಬ್ಲಾಕ್‌ ಆದ ಒಳಚರಂಡಿಗಳನ್ನು ಸರಿಪಡಿಸಲು ಯಂತ್ರಗಳ ಬದಲು ಕಾರ್ಮಿಕರನ್ನೇ ಬಳಸುತ್ತಿರುವುದು ಸಾಮಾಜಿಕ ಹೋರಾಟಗಾರರ ಕೆಂಗಣ್ಣಿಗೆ ಗುರಿಯಾಗಿದೆ.

ನಗರದ ಹೆಚ್ಚಿನ ಮಳೆನೀರು ಕಾಲುವೆಗಳಲ್ಲಿ ಒಳಚರಂಡಿ ತ್ಯಾಜ್ಯ ಹರಿಯುತ್ತಿದ್ದು ನಗರದ ಹಲವೆಡೆ ಇದರಿಂದ ಗಬ್ಬುನಾತ ಬೀರುತ್ತದೆ.

ಸಾರ್ವಜನಿಕ ದೂರುಗಳು ಬಂದಾಗಲೆಲ್ಲಾ ಜೆಟ್ಟಿಂಗ್‌ ಯಂತ್ರಗಳು ಅಥವಾ ಸೂಪರ್-ಸಕ್ಕರ್‌ ಯಂತ್ರಗಳ ಬಳಕೆ ಬದಲು ಕಾರ್ಮಿಕರು ಬರಿಗೈಯ್ಯಲ್ಲಿಯೇ ಈ ಕೆಲಸ ಮಾಡುತ್ತಿರುವುದು ಕಾಣಿಸುತ್ತದೆ.

ಈ ರೀತಿ ಇನ್ನೂ ಯಂತ್ರಗಳನ್ನು ಬಳಸದೆ ಮಾನವ ಶ್ರಮವನ್ನೇ ಬಳಸಿ ಈ ಕೆಲಸ ಮಾಡಿಸುವ ಪಾಲಿಕೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಯಾವುದೇ ಕ್ರಮಕೈಗೊಳ್ಳದೇ ಇರುವುದರಿಂದ ಈ ಪದ್ಧತಿ ಇನ್ನೂ ಜಾರಿಯಲ್ಲಿದೆ ಎಂದು ಹೋರಾಟಗಾರರು ಹೇಳುತ್ತಾರೆ.

ಪಾಲಿಕೆ ಆಯುಕ್ತ ಎಂ ಶಿವಗುರು ಪ್ರಭಾಕರನ್‌ ಪ್ರತಿಕ್ರಿಯಿಸಿ, ನಾವು ಈಗಾಗಲೇ ಈ ಕೆಲಸಗಳಿಗಾಗಿ ಜೆಟ್ಟಿಂಗ್‌ ಯಂತ್ರಗಳನ್ನು ಖರೀದಿಸುವ ಪ್ರಸ್ತಾವನೆಯನ್ನು ಬಜೆಟಿನಲ್ಲಿ ಮಾಡಿದ್ದೇವೆ. ಶೀಘ್ರ ಅವುಗಳನ್ನು ಖರೀದಿಸಲಾಗುವುದು, ಸದ್ಯ ತಿರುಪ್ಪುರ್‌ನಿಂದ ದೊಡ್ಡ ಜೆಟ್ಟಿಂಗ್‌ ಯಂತ್ರವನ್ನು ಬಾಡಿಗೆಗೆ ಪಡೆದು ನಗರದ ಕೆಲವೆಡೆ ಬಳಸಲಾಗುತ್ತಿದೆ. ಮಾನವ ಶ್ರಮದಿಂದ ಒಳಚರಂಡಿ ದುರಸ್ತಿ ಯಾ ಸ್ವಚ್ಛಗೊಳಿಸುವ ಕೆಲಸ ಮಾಡಿಸದಂತೆ ಸೂಚನೆ ನೀಡಲಾಗಿದೆ,”ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News