ಬಿಜೆಪಿಯ 2024 ಲೋಕಸಭಾ ಚುನಾವಣಾ ಪ್ರಣಾಳಿಕೆಯಲ್ಲಿ NRC ವಿಷಯ ನಾಪತ್ತೆ
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಎಪ್ರಿಲ್ 14ರಂದು ಬಿಡುಗಡೆಗೊಳಿಸಿದ ಬಿಜೆಪಿಯ ಲೋಕಸಭಾ ಚುನಾವಣಾ ಪ್ರಣಾಳಿಕೆಯಲ್ಲಿ ಎನ್ಆರ್‌ಸಿಯನ್ನು ಕೈಬಿಡಲಾಗಿದೆ. ಇದೇ NRC ಬಿಜೆಪಿಯ 2019 ಚುನಾವಣಾ ಪ್ರಣಾಳಿಕೆಯಲ್ಲಿ ಪ್ರಮುಖ ವಿಷಯವಾಗಿತ್ತು.
ಆದರೆ ಈ ಬಾರಿಯ ಪ್ರಣಾಳಿಕೆಯು ಸಿಎಎ ಜಾರಿ ಕುರಿತು ಉಲ್ಲೇಖಿಸಿದೆ. “ನಾವು ಪೌರತ್ವ ತಿದ್ದುಪಡಿ ಕಾಯಿದೆಯನ್ನು ಜಾರಿಗೊಳಿಸುವ ಐತಿಹಾಸಿಕ ಕ್ರಮಕೈಗೊಂಡಿದ್ದೇವೆ ಮತ್ತು ಎಲ್ಲಾ ಅರ್ಹರಿಗೆ ಪೌರತ್ವ ನೀಡಲು ಕ್ರಮಕೈಗೊಳ್ಳುತ್ತೇವೆ,” ಎಂದು ಪ್ರಣಾಳಿಕೆ ಹೇಳಿದೆ.
ಆದರೆ 2019 ಪ್ರಣಾಳಿಕೆಯಲ್ಲಿ ಪಕ್ಷವು NRC ಪ್ರಕ್ರಿಯೆಗೆ ವೇಗ ನೀಡುವ ಕುರಿತು ಮಾತನಾಡಿತ್ತು. ಆದ್ಯತೆಯ ಪ್ರದೇಶಗಳಲ್ಲಿ NRC ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸಲಾಗುವುದು ಮತ್ತು ದೇಶದ ಇತರ ಭಾಗಗಳಲ್ಲಿ ಹಂತಹಂತವಾಗಿ NRC ಜಾರಿಗೊಳಿಸಲಾಗುವುದು ಎಂದಿತ್ತು.
ಸುಪ್ರೀಂ ಕೋರ್ಟ್ ನ ಆಗಸ್ಟ್ 2019 ಆದೇಶದಂತೆ ಅಸ್ಸಾಂನಲ್ಲಿ ಎನ್ಆರ್ಸಿಯನ್ನು ನವೀಕರಿಸಲಾಗಿತ್ತು. ಅಸ್ಸಾಂನಲ್ಲಿ 3.29 ಕೋಟಿ ಅರ್ಜಿದಾರರ ಪೈಕಿ 19 ಲಕ್ಷ ಮಂದಿಯನ್ನು ಎನ್ಆರ್ ಸಿಯಿಂದ ಕೈಬಿಡಲಾಗಿತ್ತು. ಇವರ ಪೈಕಿ 11 ಲಕ್ಷ ಮಂದಿ ಹಿಂದೂಗಳೆಂದು ತಿಳಿದು ಬಂದಿದ್ದು, ತಾವು ಬಾಂಗ್ಲಾದೇಶದಿಂದ ಡಿಸೆಂಬರ್ 31, 2014ರ ಮೊದಲು ಬಂದವರೆಂದು ಹೇಳಿ ಸಿಎಎ ಅಡಿ ಪೌರತ್ವ ಪಡೆದು ಇವರು ಪ್ರಯೋಜನ ಪಡೆಯಬಹುದಾಗಿದೆ.