ಮುಸ್ಲಿಮ್ ವಿರೋಧಿ ಹೇಳಿಕೆ: ಅಲಹಾಬಾದ್ ಹೈಕೋರ್ಟ್ ನ್ಯಾಯಾಧೀಶರ ವಿರುದ್ಧ ಎಫ್‌ಐಆರ್ ದಾಖಲಿಸಲು ಸಿಬಿಐಗೆ ನಿರ್ದೇಶನ ನೀಡುವಂತೆ ಸಿಜೆಐಗೆ ಹಿರಿಯ ವಕೀಲರ ಆಗ್ರಹ

Update: 2025-01-18 18:03 IST
Shekhar Kumar Yadav

ಶೇಖರ್ ಕುಮಾರ್ ಯಾದವ್ | PTI 

  • whatsapp icon

ಹೊಸದಿಲ್ಲಿ: ಹದಿಮೂರು ಹಿರಿಯ ವಕೀಲರ ಗುಂಪೊಂದು ಶುಕ್ರವಾರ ಭಾರತದ ಮುಖ್ಯ ನ್ಯಾಯಾಧೀಶ (ಸಿಜೆಐ) ಸಂಜೀವ ಖನ್ನಾ ಅವರಿಗೆ ಬರೆದಿರುವ ಪತ್ರದಲ್ಲಿ ಮುಸ್ಲಿಮ್ ವಿರೋಧಿ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಅಲಹಾಬಾದ್ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಶೇಖರ ಕುಮಾರ ಯಾದವ ವಿರುದ್ಧ ಎಫ್‌ಐಆರ್ ದಾಖಲಿಸಲು ಸಿಬಿಐಗೆ ನಿರ್ದೇಶನ ನೀಡುವಂತೆ ಆಗ್ರಹಿಸಿದೆ.

ಪತ್ರಕ್ಕೆ ಸಹಿ ಹಾಕಿದವರಲ್ಲಿ ಇಂದಿರಾ ಜೈಸಿಂಗ್, ಆಸ್ಪಿ ಚಿನಾಯ್, ನವರೋಜ್ ಸೀರ್ವೈ, ಆನಂದ ಗ್ರೋವರ್,ಚಂದರ್ ಉದಯ ಸಿಂಗ್,‌ ಜೈದೀಪ್ ಗುಪ್ತಾ, ಮೋಹನ ವಿ.ಕಾತರಕಿ, ಶೋಯೆಬ್ ಆಲಂ, ಆರ್.ವೈಗಾಯಿ, ಮಿಹಿರ ದೇಸಾಯಿ, ಜಯಂತ ಭೂಷಣ, ಗಾಯತ್ರಿ ಸಿಂಗ್ ಮತ್ತು ಅವಿ ಸಿಂಗ್ ಸೇರಿದ್ದಾರೆ.

ಗುಂಪು ಸರ್ವೋಚ್ಚ ನ್ಯಾಯಾಲಯದ ಇತರ ಹಿರಿಯ ನ್ಯಾಯಾಧೀಶರಾದ ಬಿ.ಆರ್.ಗವಾಯಿ, ಸೂರ್ಯಕಾಂತ, ಹೃಷಿಕೇಶ್ ರಾಯ್ ಮತ್ತು ಎ.ಎಸ್.ಓಕಾ ಅವರಿಗೂ ಪತ್ರದ ಪ್ರತಿಗಳನ್ನು ಕಳುಹಿಸಿದೆ.

ಡಿ.8ರಂದು ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ವಿಹಿಂಪ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಏಕರೂಪ ನಾಗರಿಕ ಸಂಹಿತೆ ಕುರಿತು ಮಾತನಾಡಿದ ಸಂದರ್ಭದಲ್ಲಿ ನ್ಯಾ.ಯಾದವ ಅವರು ಮುಸ್ಲಿಮ್ ಸಮುದಾಯದ ವಿರುದ್ಧ ಅವಹೇಳನಕಾರಿ ಟೀಕೆಗಳನ್ನು ಮಾಡಿದ್ದರು.

ನ್ಯಾ.ಯಾದವ ಹೇಳಿಕೆಗಳು ಅವರ ವಾಗ್ದಂಡನೆಗೆ ಬೇಡಿಕೆಗಳಿಗೆ ಕಾರಣವಾಗಿದ್ದು,ಕೆಲವು ಟೀಕಾಕಾರರು ಅವರನ್ನು ನ್ಯಾಯಾಂಗ ಕಾರ್ಯದಿಂದ ಅಮಾನತುಗೊಳಿಸುವಂತೆ ಆಗ್ರಹಿಸಿದ್ದರು.

ಮೇಲ್ನೋಟಕ್ಕೆ ನ್ಯಾ.ಯಾದವ್ ಅವರು ಏಕರೂಪ ನಾಗರಿಕ ಸಂಹಿತೆಯ ಬಗ್ಗೆ ಮಾತನಾಡುತ್ತಿದ್ದರು,‌ ಆದರೆ ಅವರ ಇಡೀ ಭಾಷಣವು ಸಾರ್ವಜನಿಕ ವೇದಿಕೆಯಿಂದ ದ್ವೇಷವನ್ನು ಹರಡಲು ಉದ್ದೇಶಿಸಿದ್ದಂತಿತ್ತು. ಅವರ ಭಾಷಣದಲ್ಲಿ ಶೈಕ್ಷಣಿಕ, ಕಾನೂನು ಮತ್ತು ನ್ಯಾಯಕ್ಕೆ ಸಂಬಂಧಿಸಿದ ವಿಷಯಗಳಿರಲಿಲ್ಲ ಎಂದು ಪತ್ರದಲ್ಲಿ ಹೇಳಿರುವ ಹಿರಿಯ ವಕೀಲರು, ನ್ಯಾಯಾಧೀಶರೋರ್ವರು ಒಂದು ಸಮುದಾಯದೊಂದಿಗೆ ತನ್ನನ್ನು ಬಹಿರಂಗವಾಗಿ ಗುರುತಿಸಿಕೊಂಡು ಮತ್ತು ಇನ್ನೊಂದು ಸಮುದಾಯದ ಅವಹೇಳನ ಮಾಡುವ ಮೂಲಕ ಇಂತಹ ವಿಭಜಕ ಮಾತುಗಳನ್ನಾಡಿರುವುದು ನ್ಯಾಯಾಂಗದ ನಿಷ್ಪಕ್ಷತನವನ್ನು ಕಡೆಗಣಿಸಿದೆ ಎಂದಿದ್ದಾರೆ.

ಈ ಭಾಷಣವು ಮುಸ್ಲಿಮರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡಿರುವುದರ ಜೊತೆಗೆ ಧರ್ಮದ ಆಧಾರದಲ್ಲಿ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುತ್ತದೆ ಎಂದು ವಾದಿಸಿರುವ ವಕೀಲರು,ರೆಕಾರ್ಡ್ ಆಗಿರುವ ಮತ್ತು ವ್ಯಾಪಕವಾಗಿ ಪ್ರಸಾರವಾಗಿರುವ ನ್ಯಾ.ಯಾದವ ಅವರ ಭಾಷಣವು ಅಸಾಂವಿಧಾನಿಕ ಮತ್ತು ನ್ಯಾಯಾಧೀಶರು ಸ್ವೀಕರಿಸುವ ಪ್ರಮಾಣ ವಚನಕ್ಕೆ ವಿರುದ್ಧವಾದ ಹೇಳಿಕೆಗಳನ್ನು ಒಳಗೊಂಡಿದ್ದು ದ್ವೇಷ ಭಾಷಣ ಸ್ವರೂಪದ್ದಾಗಿದೆ ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News