ಮಣಿಪುರದಲ್ಲಿ ಪ್ರತಿಪಕ್ಷಗಳ ‘ಇಂಡಿಯಾ’ನಿಯೋಗ: ಪರಿಹಾರ ಶಿಬಿರಗಳಿಗೆ ಭೇಟಿ, ಶಾಂತಿಗಾಗಿ ಮನವಿ

Update: 2023-07-29 16:17 GMT

Photo: ANI 

ಇಂಫಾಲ: ಮಣಿಪುರದಲ್ಲಿಯ ಪರಿಸ್ಥಿತಿಯನ್ನು ಖುದ್ದಾಗಿ ಪರಿಶೀಲಿಸಲು ಎರಡು ದಿನಗಳ ಭೇಟಿಗಾಗಿ ಪ್ರತಿಪಕ್ಷಗಳ ಮೈತ್ರಿಕೂಟ ‘ಇಂಡಿಯಾ’ದ ನಿಯೋಗವು ಶನಿವಾರ ಇಲ್ಲಿಗೆ ತಲುಪಿದೆ. ಚುರಾಚಂದ್ರಪುರ ಜಿಲ್ಲೆಯಲ್ಲಿನ ಪರಿಹಾರ ಶಿಬಿರಗಳಿಗೆ ಭೇಟಿ ನೀಡಿದ ನಿಯೋಗದ ಸದಸ್ಯರು ಸ್ಥಳೀಯರು ಮತ್ತು ನಾಗರಿಕ ಸಮಾಜ ಸಂಘಟನೆಗಳೊಂದಿಗೆ ಸಂವಾದ ನಡೆಸಿದರು.

ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಹಿಂಸಾಚಾರದ ಮೌಲ್ಯಮಾಪನಕ್ಕಾಗಿ ಆಗಮಿಸಿರುವ ಪ್ರತಿಪಕ್ಷ ಇಂಡಿಯಾದ ಸಂಸದೀಯ ನಿಯೋಗವು 20 ಸದಸ್ಯರನ್ನು ಒಳಗೊಂಡಿದೆ. ಮೇ 3ರಿಂದ ಮೈತೈ ಮತ್ತು ಕುಕಿ ಸಮುದಾಯಗಳ ನಡುವೆ ಭುಗಿಲೆದ್ದಿರುವ ಜನಾಂಗೀಯ ಹಿಂಸಾಚಾರದಲ್ಲಿ 160ಕ್ಕೂ ಅಧಿಕ ಜನರು ಮೃತಪಟ್ಟಿದ್ದು, 600ಕ್ಕೂ ಹೆಚ್ಚಿನ ಜನರು ಗಾಯಗೊಂಡಿದ್ದಾರೆ.

16 ಪಕ್ಷಗಳ ಪ್ರತಿನಿಧಿಗಳನ್ನು ಒಳಗೊಂಡಿರುವ ನಿಯೋಗವು ರವಿವಾರ ದಿಲ್ಲಿಗೆ ಮರಳುವ ಮುನ್ನ ಗುಡ್ಡಗಾಡು ಜಿಲ್ಲೆಗಳಿಗೆ ಭೇಟಿಯ ಬಳಿಕ ಸಂತ್ರಸ್ತ ಸಮುದಾಯಗಳೊಂದಿಗೆ ಮಾತುಕತೆ ನಡೆಸಲು ಕಣಿವೆ ಜಿಲ್ಲೆಗಳಿಗೆ ತೆರಳಲಿದೆ.

ನಿಯೋಗವು ರವಿವಾರ ಬೆಳಿಗ್ಗೆ ಮಣಿಪುರದ ರಾಜ್ಯಪಾಲರಾದ ಅನುಸೂಯಾ ಉಯಿಕೆ ಅವರನ್ನು ಭೇಟಿಯಾಗುವ ಸಾಧ್ಯತೆಯಿದೆ.

ಇಂಫಾಲ್ ವಿಮಾನ ನಿಲ್ದಾಣಕ್ಕೆ ಬಂದಿಳಿದ ಬಳಿಕ ನಿಯೋಗವನ್ನು ಎರಡು ತಂಡಗಳಾಗಿ ವಿಭಜಿಸಲಾಯಿತು. ಮೊದಲ ತಂಡ ತಕ್ಷಣವೇ ಹೆಲಿಕಾಪ್ಟರ್ ಮೂಲಕ ಚುರಾಚಂದ್ರಪುರಕ್ಕೆ ತೆರಳಿದರೆ,ಎರಡನೇ ತಂಡವು ಹೆಲಿಕಾಪ್ಟರ್ನಲ್ಲಿ ಚುರಾಚಂದ್ರಪುರದ ಇನ್ನೊಂದು ಶಿಬಿರಕ್ಕೆ ಭೇಟಿ ನೀಡುವ ಮುನ್ನ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಿತು.

ಮೊದಲ ತಂಡವು ಚುರಾಚಂದ್ರಪುರ ಭೇಟಿಯನ್ನು ಮುಗಿಸಿದ ಬಳಿಕ ಮೊಯಿರಾಂಗ್ನಲ್ಲಿಯ ಪರಿಹಾರ ಶಿಬಿರಗಳಿಗೆ ಭೇಟಿ ನೀಡಲಿದೆ ಎಂದು ಕಾಂಗ್ರೆಸ್ ಸಂಸದ ಗೌರವ ಗೊಗೊಯಿ ಅವರು ಸುದ್ದಿಗಾರರಿಗೆ ತಿಳಿಸಿದರು. ನಿಯೋಗವು ಇಂಫಾಲ ಪೂರ್ವದಲ್ಲಿಯ ಪರಿಹಾರ ಶಿಬಿರಗಳಿಗೂ ಭೇಟಿ ನೀಡಲಿದೆ.

ಹಿಂಸಾಚಾರವನ್ನು ತೊರೆಯುವಂತೆ ಮತ್ತು ಶಾಂತಿಯ ವಾತಾವರಣವನ್ನು ಮರುಸ್ಥಾಪಿಸುವಂತೆ ಮಣಿಪುರದ ಜನರನ್ನು ಆಗ್ರಹಿಸಿದ ಜೆಡಿಯು ಸಂಸದ ಲಲ್ಲನ್ ಸಿಂಗ್ ಅವರು,‘‘ಇಡೀ ‘ಇಂಡಿಯಾ’ ಇಲ್ಲಿದೆ. ಮಣಿಪುರದ ಜನರೊಂದಿಗೆ ನಾವಿದ್ದೇವೆ ಎಂಬ ಸಂದೇಶದೊಂದಿಗೆ ಇಲ್ಲಿಯ ಸ್ಥಿತಿಯನ್ನು ತಿಳಿದುಕೊಳ್ಳಲು ನಾವಿಲ್ಲಿಗೆ ಬಂದಿದ್ದೇವೆ. ಮಣಿಪುರದಲ್ಲಿ ಭ್ರಾತೃತ್ವದ ವಾತಾವರಣದಲ್ಲಿ ಶಾಂತಿಯಿಂದ ಬದುಕುವಂತೆ ನಾವು ಎಲ್ಲ ಸಮುದಾಯಗಳನ್ನು ಕೋರುತ್ತಿದ್ದೇವೆ. ಮಣಿಪುರದಲ್ಲಿ ಶಾಂತಿ ನೆಲೆಸಬೇಕು ಎಂಬ ಧ್ಯೇಯದೊಂದಿಗೆ ನಾವಿಲ್ಲಿಗೆ ಬಂದಿದೇವೆ ’’ಎಂದು ಹೇಳಿದರು.

ಮಣಿಪುರದ ಪ್ರಾದೇಶಿಕ ಸಮಗ್ರತೆಯ ಸುರಕ್ಷತೆಯ ಕುರಿತು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಿಂಗ್,‘ಭಾರತ ಸರಕಾರಕ್ಕೆ ಮಣಿಪುರದ ಕುರಿತು ಕಾಳಜಿಯಿಲ್ಲ, ಇದೇ ಕಾರಣದಿಂದ ಪ್ರಧಾನಿ ಸದನಕ್ಕೆ ಬಂದು ಮಣಿಪುರ ಕುರಿತು ಸ್ವಯಂಪ್ರೇರಿತ ಹೇಳಿಕೆಯನ್ನು ನೀಡಬೇಕು ಎಂದು ಸಂಸತ್ ಅಧಿವೇಶನದ ಮೊದಲ ದಿನದಿಂದಲೇ ನಾವು ಆಗ್ರಹಿಸುತ್ತಿದ್ದೇವೆ ’ ಎಂದು ಹೇಳಿದರು.

ಸುಷ್ಮಿತಾ ದೇವ್,ಅಧೀರ ರಂಜನ ಚೌಧುರಿ,ಗೌರವ ಗೊಗೊಯಿ,ರಾಜೀವ್ ರಂಜನ ಸಿಂಗ್ ಸೇರಿದಂತೆ ಲೋಕಸಭಾ ಮತ್ತು ರಾಜ್ಯಸಭಾ ಸದಸ್ಯರು ನಿಯೋಗದಲ್ಲಿದ್ದಾರೆ.

ನಿಯೋಗವು ಮಣಿಪುರದಲ್ಲಿಯ ಸಮಸ್ಯೆಯನ್ನು ಬಗೆಹರಿಸಲು ಕೇಂದ್ರ ಸರಕಾರ ಮತ್ತು ಸಂಸತ್ತಿಗೆ ಶಿಫಾರಸುಗಳನ್ನು ಮಾಡಲಿದೆ.

ಇಲ್ಲಿಗೆ ಬಂದು ಸಂತ್ರಸ್ತರನ್ನು ಭೇಟಿಯಾಗುವುದು ನಮಗೆ ಮುಖ್ಯವಾಗಿತ್ತು. ಭಾರತ ಸರಕಾರವು ನಿಯೋಗವನ್ನು ಕಳುಹಿಸಬೇಕಿತ್ತು,ಆದರೆ ಪ್ರತಿಪಕ್ಷಗಳು ನಿಯೋಗವನ್ನು ಕಳುಹಿಸಬೇಕಾಗಿ ಬಂದಿದ್ದು ವಿಷಾದದ ಸಂಗತಿ.

- ಸುಷ್ಮಿತಾ ದೇವ್, ಟಿಎಂಸಿ ಸಂಸದೆ

ಅವರು (ಕೇಂದ್ರ) ಮಣಿಪುರದಲ್ಲಿ ಎಸಗಲಾಗಿರುವ ಅಪರಾಧಗಳ ಕುರಿತು ಸಿಬಿಐ ತನಿಖೆಯ ಬಗ್ಗೆ ಮಾತನಾಡುತ್ತಿದ್ದಾರೆ. ಅವರು ಈವರೆಗೆ ನಿದ್ರಿಸುತ್ತಿದ್ದರೇ?

- ಅಧೀರ್ ರಂಜನ್ ರಾಯ್, ಕಾಂಗ್ರೆಸ್ ನಾಯಕ

ಇದು ಕೇವಲ ತೋರಿಕೆಗಾಗಿ ಅಷ್ಟೇ. ಈ ಇಂಡಿಯಾ ನಿಯೋಗವು ಮಣಿಪುರದಿಂದ ಮರಳಿದ ಬಳಿಕ ತನ್ನ ರಾಜ್ಯ ಪಶ್ಚಿಮ ಬಂಗಾಳದಲ್ಲಿ ಮಹಿಳೆಯರ ವಿರುದ್ಧ ನಡೆಯುತ್ತಿರುವ ಅಪರಾಧಗಳನ್ನು ಬೆಂಬಲಿಸುತ್ತೀರಾ ಎಂದು ಅಧೀರ ರಂಜನ್ ರಾಯ್ ಅವರನ್ನು ಪ್ರಶ್ನಿಸಲು ನಾನು ಬಯಸಿದ್ದೇನೆ. ಇಂಡಿಯಾದ ಈ 20 ಸಂಸದರು ಮಹಿಳೆಯರ ವಿರುದ್ಧ ದೌರ್ಜನ್ಯಗಳು ನಡೆಯುತ್ತಿರುವ ಪಶ್ಚಿಮ ಬಂಗಾಳ ಮತ್ತು ರಾಜಸ್ಥಾನಗಳ ಕುರಿತೂ ವರದಿಗಳನ್ನು ನೀಡುವರೇ?

- ಅನುರಾಗ್ ಠಾಕೂರ, ಕೇಂದ್ರ ಸಚಿವ

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News