ಸದನದಲ್ಲಿ ಚರ್ಚೆಗೆ ವಿಪಕ್ಷಗಳ ಪಟ್ಟು; ಮಣಿಯದ ಸರಕಾರ ಮಣಿಪುರ ಗದ್ದಲಕ್ಕೆ ಲೋಕಸಭಾ ಕಲಾಪ ಬಲಿ

Update: 2023-07-21 17:05 GMT

ಲೋಕಸಭೆ | Photo : PTI 

ಹೊಸದಿಲ್ಲಿ: ಸತತ ಎರಡನೆ ದಿನವೂ ಲೋಕಸಭೆಯಲ್ಲಿ ಮಣಿಪುರ ಹಿಂಸಾಚಾರ ಪ್ರತಿಧ್ವನಿಸಿದೆ. ಮಣಿಪುರ ಗಲಭೆ ಬಗ್ಗೆ ಚರ್ಚೆಗೆ ಆಗ್ರಹಿಸಿ ಪ್ರತಿಪಕ್ಷಗಳು ಲೋಕಸಭೆಯಲ್ಲಿ ಶುಕ್ರವಾರವೂ ಪಟ್ಟು ಹಿಡಿದು ಗದ್ದಲವೆಬ್ಬಿಸಿದ್ದರಿಂದ ಕಲಾಪನಿರ್ವಹಣೆ ಅಸಾಧ್ಯವಾಗಿ, ಸದನವನ್ನು ಮುಂದೂಡಲಾಗಿದೆ. ಮಣಿಪುರ ಹಿಂಸಾಚಾರದ ಕುರಿತು ಸರಕಾರ ಸರ್ವಪಕ್ಷ ಸಭೆಯಲ್ಲಿ ಚರ್ಚೆಗೆ ಸಿದ್ಧವಿರುವುದಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸದನಕ್ಕೆ ಭರವಸೆ ನೀಡಿದರೂ, ಪ್ರತಿಪಕ್ಷಗಳು ತಮ್ಮ ಬೇಡಿಕೆಯಿಂದ ಹಿಂದೆ ಸರಿಯಲಿಲ್ಲ.

ಇಂದು ಬೆಳಗ್ಗೆ ಲೋಕಸಭೆಯಲ್ಲಿ ಕಲಾಪವು ಆರಂಭಗೊಂಡಾಗ, ಪ್ರತಿಪಕ್ಷ ಸದಸ್ಯರು ಎದ್ದು ನಿಂತು ಮಣಿಪುರ ಹಿಂಸಾಚಾರದ ಬಗ್ಗೆ ಚರ್ಚೆಯಾಗಬೇಕೆಂದು ಆಗ್ರಹಿಸಿದರು. ಕಾಂಗ್ರೆಸ್, ಎಡರಂಗ ,ಡಿಎಂಕೆ ಪಕ್ಷಗಳ ಸದಸ್ಯರು ಘೋಷಣೆಗಳನ್ನು ಕೂಗತೊಡಗಿದರು. ‘ಮಣಿಪುರ ರಕ್ತಸ್ರಾವಕ್ಕೀಡಾಗಿತ್ತಿದೆ’ ಎಂದು ಅವರು ಸ್ಪೀಕರ್ ಓಂ ಬಿರ್ಲಾ ಮುಂದೆ ಘೋಷಣೆಗಳನ್ನು ಕೂಗಿದರು.

ಆಗ ಸ್ಪೀಕರ್ ಅವರು ಪ್ರತಿಪಕ್ಷಗಳನ್ನುದ್ದೇಶಿಸಿ, ಕೇವಲ ಘೋಷಣೆಗಳನ್ನು ಕೂಗುವುದರಿಂದ ಯಾವುದೇ ಸಮಸ್ಯೆಗೆ ಪರಿಹಾರ ದೊರೆಯಲಾರದು. ಆದರೆ ಮಾತುಕತೆ, ಸಂಭಾಷಣೆಗಳಿಂದ ಮಾತ್ರ ಪರಿಹಾರ ಸಾಧ್ಯವಾಗಲಿದೆ ಎಂದರು.

‘‘ನಿಮಗೆ ಸದನವು ಕಾರ್ಯನಿರ್ವಹಿಸುವುದು ಬೇಕಾಗಿಲ್ಲ. ಪ್ರಶ್ನೋತ್ತರ ವೇಳೆ ಕೂಡ ನಡೆಯುವುದು ನಿಮಗೆ ಬೇಡವಾಗಿದೆ. ಇತರ ಎಲ್ಲಾ ಸದಸ್ಯರು ಸದನವು ಕಾರ್ಯನಿರ್ವಹಿಸಬೇಕೆಂದು ಬಯಸುತ್ತಾರೆ. ಹೀಗೆ ಗದ್ದಲವೆಬ್ಬಿಸುದು ಒಳ್ಳೆಯದಲ್ಲ ಎಂದು  ಹೇಳಿದರು.

ಆದರೆ ಸ್ಪೀಕರ್ ಮಾತಿಗೆ ಪ್ರತಿಪಕ್ಷ ಸದಸ್ಯರು ಕಿವಿಗೊಡದೆ ಗದ್ದಲ ಮುಂದುವರಿಸಿದರು. ಇದೇ ವೇಳೆ ಬಿರ್ಲಾ ಅವರು ರಕ್ಷಣಾ ಸಚಿವರಿಗೆ ಮಾತನಾಡಲು ಸೂಚಿಸಿದರು.

ಮಣಿಪುರ ಘಟನೆಗಳ ಬಗ್ಗೆ ಚರ್ಚೆಗೆ ಸರಕಾರ ಸಿದ್ಧವಿರುವುದಾಗಿ ಲೋಕಸಭೆಯ ಉಪನಾಯಕರೂ ಆಗಿರುವ ರಾಜ್ನಾಥ್ ಸಿಂಗ್ ತಿಳಿಸಿದರು.ಮಣಿಪುರದ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣನೆಗೆ ತೆಗೆದುಕೊಳ್ಳಬೇಕಾಗಿದೆ ಹಾಗೂ ಮಣಿಪುರ ಘಟನೆಗಳಿಂದಾಗಿ ಇಡೀ ದೇಶಕ್ಕೆ ಅವಮಾನವಾಗಿದೆ ಎಂದು ಪ್ರಧಾನಿಯವರೇ ಖುದ್ದಾಗಿ ಹೇಳಿರುವುದುದ ಮಣಿಪುರ ಹಿಂಸಾಚಾರವನ್ನು ಸರಕಾರವು ಎಷ್ಟು ಗಂಭೀರವಾಗಿ ಪರಿಗಣಿಸಿದೆ ಎಂಬುದನ್ನು ಪ್ರತಿಬಿಂಬಿಸಿದೆ ಎಂದು ಸಿಂಗ್ ಹೇಳಿದರು.

ಮಣಿಪುರ ಹಿಂಸಾಚಾರದ ಬಗ್ಗೆ ಸರ್ವಪಕ್ಷಗಳ ಸಭೆ ಕರೆಯಲಾಗುವುದು ಹಾಗೂ ಅದರಲ್ಲಿ ಚರ್ಚಿಸಲಾಗುವುದು ಎಂಬುದನ್ನು ತಾನು ಪುನರುಚ್ಚರಿಸಬಯಸುತ್ತೇನೆ ಎಂದರು.

ಮಣಿಪುರ ಹಿಂಸಾಚಾರದ ಬಗ್ಗೆ ಪ್ರತಿಪಕ್ಷಗಳು ಗಂಭೀರತೆಯಿಂದ ವರ್ತಿಸುತ್ತಿಲ್ಲವೆಂದು ರಕ್ಷಣಾ ಸಚಿವರು ಆರೋಪಿಸಿದರು. ಆದರೆ ರಕ್ಷಣಾ ಸಚಿವರ ಹೇಳಿಕೆಗೆ ಪ್ರತಿಪಕ್ಷಗಳು ಜಗ್ಗದೆ, ಗದ್ದಲ ಮುಂದುವರಿಸಿದಾಗ ಸ್ಪೀಕರ್ಅವರು ಅನಿವಾರ್ಯವಾಗಿ ಸದನವನು ಮಧ್ಯಾಹ್ನದವರೆಗೆ ಮುಂದೂಡಿದರು.

12ರ ವೇಳೆಗೆ ಲೋಕಸಭೆ ಮತ್ತೆ ಸೇರಿದಾಗ, ಪ್ರತಿಪಕ್ಶ ಸದಸ್ಯರು ಸ್ಪೀಕರ್ ಆಸನದ ಎದುರಿನ ಆಂಗಣಕ್ಕೆ ಧಾವಿಸಿ ಬಂದು , ಮಣಿಪುರ ಗಲಭೆಗೆ ಸಂಬಂಧಿಸಿ ಪ್ರಧಾನಿಯವರ ಹೇಳಿಕೆಗೆ ಆಗ್ರಹಿಸಿದರು.

ಆಗ ಸ್ಪೀಕರ್ ಅವರ ಆಸನದಲ್ಲಿದ್ದ ರಾಜೇಂದ್ರ ಅಗರವಾಲ್ ಅವರು ಸದಸ್ಯರು ತಮ್ಮ ಆಸನಗಳಿಗೆ ಮರಳುವಂತೆ ಮನವಿ ಮಾಡಿದರು. ಆದರೆ ಆಗಲೂ ವಿಪಕ್ಷ ಸದಸ್ಯರ ಘೋಷಣೆಗಳು ಮುಂದುವರಿದವು. ಪ್ರತಿಭಟನೆಯ ವೇಳೆ ಪ್ರತಿಪಕ್ಷ ಸದಸ್ಯರು ಭಿತ್ತಿಫಲಕಗಳನ್ನು ಕೂಡಾ ಪ್ರದರ್ಶಿಸಿದರು. ಇದೊಂದು ಮಹತ್ವದ ವಿಷಯವಾಗಿರುವುದರಿಂದ, ಸದನದಲ್ಲಿ ಅದರ ಚರ್ಚೆಯಾಗಬೇಕಾಗಿದೆ ಎಂದು ಅಗರವಾಲ್ಅವರು ಈ ಸಂದರ್ಭದಲ್ಲಿ ಹೇಳಿದರು.

ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಮಾತನಾಡಿ, ಸರಕಾರವು ಚರ್ಚೆಗೆ ಸಿದ್ಧವಾಗಿದೆ ಎಂದರು. ‘‘ ಇಡೀ ದೇಶವೇ ಮಣಿಪುರದಲ್ಲಿನ ಪರಿಸ್ಥಿತಿ ಬಗ್ಗೆ ಕಳವಳಗೊಂಡಿದೆ ಮತ್ತು ಸರಕಾರವು ಈ ಬಗ್ಗೆ ಚರ್ಚೆಗೆ ಸಿದ್ಧವಿದೆ’’ ಎಂದರು.

ಆದರೂ ಪ್ರತಿಭಟನೆ ಮುಂದುವರಿದುದರಿಂದ ಸದನ ಕಲಾಪ ನಡೆಸುವುದು ಅಸಾಧ್ಯವಾಗಿ ಅಗರ್ವಾಲ್ ಅವರು ಸದನವನ್ನು ಒಂದು ದಿನದ ಮಟ್ಟಿಗೆ ಮುಂದೂಡಿದರು.

ಸಂಸತ್ ಮುಂಗಾರು ಅಧಿವೇಶನದ ಮೊದಲ ದಿನವಾದ ಬುಧವಾರದಂದು ಮಣಿಪುರ ಹಿಂಸಾಚಾರ ಸಂಸತ್ನಲ್ಲಿ ಮಾರ್ದನಿಸಿದ್ದು, ಕಲಾಪಗಳಿಗೆ ಅಡ್ಡಿಯುಂಟಾಗಿತ್ತು. ಈಶಾನ್ಯ ಭಾರತದ ರಾಜ್ಯವಾದ ಮಣಿಪುರದಲ್ಲಿನ ಪರಿಸ್ಥಿತಿ ಬಗ್ಗೆ ಪ್ರಧಾನಿಯವರು ಹೇಳಿಕೆ ನೀಡಬೇಕೆಂದು ಪ್ರತಿಪಕ್ಷಗಳು ಆಗ್ರಹಿಸಿದ್ದವು.

ಮಣಿಪುರದ ಗ್ರಾಮವೊಂದರಲ್ಲಿ ಮೇ 4ರಂದು ಗುಂಪೊಂದು ಇಬ್ಬರು ಮಹಿಳೆಯರನ್ನು ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಿದ ಘಟನೆಗಳು ರಾಷ್ಟ್ರವ್ಯಾಪಿ ಆಕ್ರೋಶಕ್ಕೆ ಕಾರಣವಾಗಿದ್ದವು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News