ಜಮ್ಮು-ಕಾಶ್ಮೀರದ ಹಕ್ಕುಗಳಿಗಾಗಿ ಶಾಂತಿಯುತ ಹೋರಾಟ ಮುಂದುವರಿಯಲಿದೆ: ಉಮರ್ ಅಬ್ದುಲ್ಲಾ

Update: 2023-12-10 15:12 GMT

ಉಮರ್ ಅಬ್ದುಲ್ಲಾ | Photo: PTI 

ಶ್ರೀನಗರ: ಸಂವಿಧಾನದ 370ನೇ ವಿಧಿಯ ರದ್ದತಿಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ಕುರಿತು ಸರ್ವೋಚ್ಚ ನ್ಯಾಯಾಲಯವು ವ್ಯತಿರಿಕ್ತ ತೀರ್ಪನ್ನು ನೀಡಿದರೂ ತನ್ನ ಪಕ್ಷವು ಜಮ್ಮು-ಕಾಶ್ಮೀರದಲ್ಲಿ ಶಾಂತಿಯನ್ನು ಕದಡುವುದಿಲ್ಲ ಎಂದು ನ್ಯಾಷನಲ್ ಕಾನ್ಫರೆನ್ಸ್ (NC) ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಅವರು ರವಿವಾರ ಇಲ್ಲಿ ಹೇಳಿದರು.

ತನ್ನ ಪಕ್ಷವು ಸಂವಿಧಾನದಲ್ಲಿ ಹೇಳಲಾಗಿರುವ ಶಾಂತಿಯುತ ಮಾರ್ಗಗಳ ಮೂಲಕ ಜಮ್ಮು-ಕಾಶ್ಮೀರದ ಜನರ ಹಕ್ಕುಗಳ ಮರುಸ್ಥಾಪನೆಗಾಗಿ ತನ್ನ ಹೋರಾಟವನ್ನು ಮುಂದುವರಿಸುತ್ತದೆ ಎಂದು ಹೇಳಿದ ಅಬ್ದುಲ್ಲಾ, ‘ಸರ್ವೋಚ್ಚ ನ್ಯಾಯಾಲಯವು ತನ್ನ ತೀರ್ಪನ್ನು ನೀಡಬೇಕಿದೆ,ಅದು ನೀಡಲಿ. ಶಾಂತಿಯನ್ನು ಕದಡಬೇಕಿದ್ದರೆ 2019ರಲ್ಲಿ 370ನೇ ವಿಧಿ ರದ್ದಾದ ಬೆನ್ನಿಗೇ ಅದನ್ನು ಮಾಡುತ್ತಿದ್ದೆವು. ಆದಾಗ್ಯೂ ನಮ್ಮ ಹೋರಾಟವು ಶಾಂತಿಯುತವಾಗಿರಲಿದೆ ಮತ್ತು ಸಂವಿಧಾನಕ್ಕೆ ಅನುಗುಣವಾಗಿರಲಿದೆ. ನಮ್ಮ ಹಕ್ಕುಗಳನ್ನು ರಕ್ಷಿಸಲು ಮತ್ತು ನಮ್ಮ ಅನನ್ಯತೆಯನ್ನು ಕಾಯ್ದುಕೊಳ್ಳಲು ಕಾನೂನಿನ ನೆರವು ಪಡೆಯುತ್ತೇವೆ ಎಂದು ನಾವು ಆಗ ಹೇಳಿದ್ದೆವು,ಈಗಲೂ ಅದನ್ನೇ ಪುನರುಚ್ಚರಿಸುತ್ತಿದ್ದೇವೆ ’ ಎಂದರು.

ಬಾರಾಮುಲ್ಲಾ ಜಿಲ್ಲೆಯ ರಫಿಯಾಬಾದ್ ನಲ್ಲಿ ಪಕ್ಷದ ಸಮಾವೇಶದಲ್ಲಿ ಮಾತನಾಡುತ್ತಿದ್ದ ಅಬ್ದುಲ್ಲಾ, ‘ಅದರಲ್ಲಿ ತಪ್ಪೇನಿದೆ? ಪ್ರಜಾಪ್ರಭುತ್ವದಲ್ಲಿ ಇದನ್ನು ಹೇಳುವ ಹಕ್ಕು ನಮಗಿಲ್ಲವೇ? ಪ್ರಜಾಪ್ರಭುತ್ವದಲ್ಲಿ ನಾವು ಆಕ್ಷೇಪಗಳನ್ನು ಎತ್ತಲು ಸಾಧ್ಯವಿಲ್ಲವೇ? ಇತರರು ಮಾತನಾಡಬಹುದಾದರೆ ನಾವೇಕೆ ಮಾತನಾಡಬಾರದು ?’ ಎಂದು ಪ್ರಶ್ನಿಸಿದರು.

ಸಂವಿಧಾನದ 370ನೇ ವಿಧಿಯ ನಿಬಂಧನೆಗಳ ರದ್ದತಿಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ಕುರಿತು ತನ್ನ ತೀರ್ಪನ್ನು ಸರ್ವೋಚ್ಚ ನ್ಯಾಯಾಲಯವು ಸೋಮವಾರ ಪ್ರಕಟಿಸಲಿದೆ.

ಶನಿವಾರ ರಾತ್ರಿಯಿಂದ ಎನ್ಸಿ ನಾಯಕರನ್ನು ಠಾಣೆಗೆ ಕರೆಸಲಾಗುತ್ತಿದೆ ಮತ್ತು ಅವರಿಗೆ ಬೆದರಿಕೆಯೊಡ್ಡಲಾಗುತ್ತಿದೆ ಎಂದು ತಿಳಿಸಿದ ಅಬ್ದುಲ್ಲಾ,‘ಸರ್ವೋಚ್ಚ ನ್ಯಾಯಾಲಯವು ಇನ್ನೂ ತೀರ್ಪು ನೀಡಿಲ್ಲ. ಏನು ತೀರ್ಪು ಬರಲಿದೆ ಎನ್ನುವುದು ನಿಮಗೆ ಹೇಗೆ ಗೊತ್ತು? ಅದು ನಮ್ಮ ಪರವಾಗಿರಬಹುದು. ಹಾಗಿದ್ದಾಗ ನನ್ನ ಪಕ್ಷದ ಸಹೋದ್ಯೋಗಿಗಳನ್ನು ಪೋಲಿಸ್ ಠಾಣೆಗಳಿಗೆ ಕರೆಸುವ ಅಗತ್ಯವೇನಿದೆ? ಅವರಿಗೆ ಬೆದರಿಕೆಯೊಡ್ಡಲಾಗುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಅದೂ ಇದೂ ಬರೆಯದಂತೆ ಅವರಿಗೆ ತಾಕೀತು ಮಾಡಲಾಗುತ್ತಿದೆ ’ ಎಂದರು.

‘ಈ ಬೆದರಿಕೆಗಳು ಕೇವಲ ಎನ್ಸಿಗೆ ಮೀಸಲಾಗಿವೆಯೇ? ಬಿಜೆಪಿ ನಾಯಕರನ್ನು ನೀವು ಪೋಲಿಸ್ ಠಾಣೆಗೆ ಕರೆಸಿದ್ದೀರಾ ಎನ್ನುವುದನ್ನು ನನಗೆ ಹೇಳಿ. ಅಲ್ಲಾಹ್ ಬಯಸಿದರೆ,ತೀರ್ಪು ಅವರ (ಬಿಜೆಪಿ) ವಿರುದ್ಧವಾಗಿದ್ದರೆ ಅವರು ಅದರ ವಿರುದ್ಧ ಫೇಸ್ ಬುಕ್ನಲ್ಲಿ ಬರೆಯಲು ಆರಂಭಿಸಿದರೆ ನೀವೇನು ಮಾಡುತ್ತೀರಿ?’ಎಂದು ಅಬ್ದುಲ್ಲಾ ಪ್ರಶ್ನಿಸಿದರು.

ಎನ್ಸಿ ನಾಯಕರು ಯಾವಾಗಲೂ ಶಾಂತಿಯ ಪ್ರತಿಪಾದಕರಾಗಿದ್ದಾರೆ, ಹೀಗಿರುವಾಗ ಅವರ ಮೇಲೆ ನಿರ್ಬಂಧ ಹೇರುವುದಕ್ಕೆ ಯಾವುದೇ ಸಮರ್ಥನೆಯಿಲ್ಲ ಎಂದು ಹೇಳಿದ ಅವರು,‘ಕಲ್ಲು ತೂರಾಟ ನಡೆಸುವಂತೆ ನಾವೆಂದೂ ಯುವಜನರಿಗೆ ಸೂಚಿಸಿರಲಿಲ್ಲ. ವಾಸ್ತವದಲ್ಲಿ ಎನ್ಸಿ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಅವರು, ನಿಮಗೆ ತಾನು ಇಷ್ಟವಿಲ್ಲದಿದ್ದರೆ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಯುತ್ತೇನೆ. ಆದರೆ ಇಲ್ಲಿ ಬಂದೂಕುಗಳನ್ನು ತರಬೇಡಿ ಎಂದು ಜನರಿಗೆ ಹೇಳಿದ್ದರು ’ ಎಂದು ತಿಳಿಸಿದರು.

ಜಮ್ಮು-ಕಾಶ್ಮೀರದಲ್ಲಿ ಶಾಂತಿಯನ್ನು ಕದಡಲು ಯಾರೂ ಬಯಸುವುದಿಲ್ಲ, ಹೀಗಾಗಿ ಪೋಲಿಸರು ಪ್ರದೇಶದ ಜನರನ್ನು ನಂಬಬೇಕು ಎಂದರು.

ನ್ಯಾಯವನ್ನು ಪಡೆಯುವ ಭರವಸೆಯೊಂದಿಗೆ 370ನೇ ವಿಧಿ ರದ್ದತಿಯ ವಿರುದ್ಧ ಎನ್ಸಿ ಸರ್ವೋಚ್ಚ ನ್ಯಾಯಾಲಯದ ಮೊರೆ ಹೋಗಿದೆ. ಆ ಭರವಸೆ ಇಂದಿಗೂ ಉಳಿದುಕೊಂಡಿದೆ ಎಂದೂ ಅಬ್ದುಲ್ಲಾ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News